ರೈತರು ಚೀಲದಲ್ಲಿ ತುಂಬಿಕೊಂಡು ಬಂದ ರಾಗಿಯನ್ನು ಸುರಿದು ಸರ್ಕಾರಿ ಮುದ್ರೆ ಇರುವ ಚೀಲಕ್ಕೆ ತುಂಬುವ ಪ್ರಕ್ರಿಯೆ ತಡವಾಗುತ್ತಿರುವುದರಿಂದ ರಾಗಿ ಖರೀದಿ ವೇಗ ಪಡೆದುಕೊಳ್ಳದೇ 2 ಕಿ.ಮೀ. ಉದ್ದ ವಾಹನಗಳು ನಿಲ್ಲುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ತುಮಕೂರು : ರೈತರು ಚೀಲದಲ್ಲಿ ತುಂಬಿಕೊಂಡು ಬಂದ ರಾಗಿಯನ್ನು ಸುರಿದು ಸರ್ಕಾರಿ ಮುದ್ರೆ ಇರುವ ಚೀಲಕ್ಕೆ ತುಂಬುವ ಪ್ರಕ್ರಿಯೆ ತಡವಾಗುತ್ತಿರುವುದರಿಂದ ರಾಗಿ ಖರೀದಿ ವೇಗ ಪಡೆದುಕೊಳ್ಳದೇ 2 ಕಿ.ಮೀ. ಉದ್ದ ವಾಹನಗಳು ನಿಲ್ಲುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ 62140 ಮಂದಿ ರೈತರು ನಫೆಡ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ 11777, ಗುಬ್ಬಿಯಲ್ಲಿ 2475 ಮಂದಿ, ಕುಣಿಗಲ್‌ನಲ್ಲಿ 13822, ಮಧುಗಿರಿಯಲ್ಲಿ 1734, ಶಿರಾದಲ್ಲಿ 1144, ತಿಪಟೂರಿನಲ್ಲಿ 11065, ತುಮಕೂರು 6805 ಹಾಗೂ ತುರುವೇಕೆರೆಯಲ್ಲಿ 13318 ಮಂದಿ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಕಳೆದ ಜನವರಿ 15 ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು. ನಫೆಡ್‌ನವರು ನೋಂದಣಿ ಮಾಡಿಸಿಕೊಂಡಿರುವ ರೈತರಿಗೆ ಇಂತಹ ದಿನಾಂಕದಂದು ಬರುವಂತೆ ಆದೇಶ ನೀಡಿದ್ದರು. ಅಲ್ಲದೇ ಮಾಚ್ 31ರ ತನಕ ಮಾತ್ರ ಮಾಡುವುದಾಗಿ ನಫೆಡ್ ಹೇಳಿರುವುದರಿಂದ ದಿನಾಂಕ ದೂರವಿರುವ ರೈತರು ಸಹ ನಫೆಡ್ ಮುಂದೆ ಬಂದಿರುವುದು ಕೂಡ ನಿಧಾನಗತಿಗೆ ಕಾರಣ ಎನ್ನುವುದು ಅಧಿಕಾರಿಗಳ ಸ್ಪಷ್ಟನೆಯಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸಮಸ್ಯೆಯಾಗಿರುವುದು ತುರುವೇಕೆರೆ ತಾಲೂಕಿನಲ್ಲಿ. ಕಾರಣ ಅಲ್ಲಿ 13318 ಮಂದಿ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ರೈತರು ತಮ್ಮ ಉಗ್ರಾಣಗಳಿಂದ ಚೀಲದಲ್ಲಿ ರಾಗಿಯನ್ನು ತುಂಬಿಕೊಂಡು ನಫೆಡ್ ಕೇಂದ್ರಕ್ಕೆ ಬಂದ ಕೂಡಲೇ ನಫೆಡ್ ನವರು ಅದನ್ನು ಸುರಿದು ಸರ್ಕಾರಿ ಮುದ್ರೆಯಿರುವ ಚೀಲಕ್ಕೆ ತುಂಬಿ ಹೊಲಿಯುವ ಪ್ರಕ್ರಿಯೆ ಪ್ರತಿ ಚೀಲಕ್ಕೆ 10 ನಿಮಿಷ ತೆಗೆದುಕೊಳ್ಳುತ್ತಿರುವುದರಿಂದ ಖರೀದಿ ತುಂಬಾ ತಡವಾಗುತ್ತಿದೆ.
ಅಲ್ಲದೇ ರಾಗಿಯ ಗುಣಮಟ್ಟಸರಿಯಿಲ್ಲವೆಂದು ಸಾರಸಗಟವಾಗಿ ಅಧಿಕಾರಿಗಳು ರಾಗಿ ಮೂಟೆಯನ್ನು ತಿರಸ್ಕರಿಸುತ್ತಿರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಸದ್ಯ ಎಲ್ಲಾ ತಾಲೂಕುಗಳಲ್ಲೂ ಸಮಸ್ಯೆ ಇದ್ದರೂ ತುರುವೇಕೆರೆ ಮತ್ತು ತಿಪಟೂರಿನಲ್ಲಿ ಅತಿ ಹೆಚ್ಚು ಒತ್ತಡ ಉಂಟಾಗಿದೆ.
ಖರೀದಿ ಕೇಂದ್ರಕ್ಕೆ ಟ್ರ್ಯಾಕ್ಟರ್ ಅಥವಾ ಲಾರಿಗಳನ್ನು ಚೀಲಗಳನ್ನು ತುಂಬಿಕೊಂಡು ರೈತರು ಬರುತ್ತಾರೆ. ಆದರೆ ಕನಿಷ್ಠ 2 ರಿಂದ 3 ದಿವಸವಾದರೂ ಖರೀದಿಯಾಗದೇ ಇರುವುದರಿಂದ ಅಲ್ಲೇ ಇರಬೇಕಾದ ಸಮಸ್ಯೆ ಉಂಟಾಗಿದೆ. ಆದರೆ ನಫೆಡ್ ಕೇಂದ್ರದವರಾಗಲಿ ಇಲಾಖೆಯವರಾಗಲಿ ರೈತರಿಗೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲ ಎಂಬುದು ರೈತರ ದೂರಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ 11 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ ಇಷ್ಟುದೊಡ್ಡ ಮಟ್ಟದಲ್ಲಿ ರೈತರು ನೋಂದಣಿ ಮಾಡಿಸಿಕೊಂಡಿರುವುದರಿಂದ ಕನಿಷ್ಠ 20 ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂಬ ಮನವಿ ರೈತರದ್ದಾಗಿದೆ. ಅಲ್ಲದೇ ಸರ್ಕಾರಿ ಮುದ್ರೆ ಇರುವ ಚೀಲಗಳಲ್ಲೇ ತುಂಬಬೇಕಾದ ನಿಯಮವನ್ನು ಸಡಿಲಗೊಳಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ. ನಫೆಡ್ ಕೇಂದ್ರಕ್ಕೆ ಟ್ರಾಕ್ಟರ್‌ನಲ್ಲಿ ಹೋದರೆ ವಾಪಸ್ ಮನೆಗೆ ಬರುವುದು 2 ರಿಂದ 3 ದಿವಸವಾಗುತ್ತಿದೆ. ಹೀಗಾಗಿ ಖರೀದಿ ಕೇಂದ್ರಕ್ಕೆ ಇರುವ ಕಟ್ಟು ನಿಟ್ಟಿನ ನಿಬಂಧನೆಗಳನ್ನು ಸಡಿಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ರೈತರಿಗೆ ನೀಡಿರುವ ದಿನಾಂಕಕ್ಕಿಂತ ಮೊದಲೇ ನಫೆಡ್ ಕೇಂದ್ರಕ್ಕೆ ರಾಗಿ ಮಾರಲು ರೈತರು ಬರುತ್ತಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು.
ಮಂಟೇಸ್ವಾಮಿ ಜಂಟಿ ನಿರ್ದೇಶಕ, ಆಹಾರ ನಾಗರಿಕ ಸರಬರಾಜು ಇಲಾಖೆ.