ಬಿಡದಿಯಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸೆರೆಯಾಗಿದೆ. ಸ್ನೇಹಿತನ ತಂಗಿತ ಪ್ರೀತಿ ಸರಿ ಮಾಡಲು ಹೋಗಿ ಆತ ಕೊಲೆಯಾಗಿದ್ದಾನೆ.
ರಾಮನಗರ (ಮಾ.23): ಶನಿವಾರ ರಾತ್ರಿ ಬಿಡದಿಯಲ್ಲಿ ನಡೆದಿದ್ದ ಬೆಂಗಳೂರು ಮೂಲದ ಯುವಕನ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಸಫಲಗೊಂಡಿದ್ದಾರೆ. ಈ ಕೊಲೆಗೆ ಮೃತ ಸ್ನೇಹಿತನ ತಂಗಿಯ ಲವ್ ಬ್ರೇಕ್ ಅಪ್ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಬೆಂಗಳೂರಿನ ಶ್ರೀನಗರದ ನಿವಾಸಿ ಕುಮಾರ್ ಹಾಗೂ ಆತನ ಸ್ನೇಹಿತ ದರ್ಶನ್ ಬಂಧಿತರಾಗಿದ್ದು, ಮೃತನ ಸ್ನೇಹಿತ ಮಂಜುನಾಥ್, ಆಕೆಯ ಸಹೋದರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
undefined
ಶನಿವಾರ ರಾತ್ರಿ ಮಾಯಗಾನಹಳ್ಳಿ ಗ್ರಾಮದ ಸಮೀಪ ಇರುವ ನಿರ್ಜನ ರಸ್ತೆಯಲ್ಲಿ ಭರತ್ ಎಂಬ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಯುವಕನ ಎದೆಗೆ ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಲಾಗಿತ್ತು. ಮೃತ ವ್ಯಕ್ತಿಯನ್ನು ಬಿಡದಿಯಲ್ಲಿ ಕೊಲೆ ಮಾಡಿ ತಂದು ಇಲ್ಲಿಗೆ ಬಿಸಾಡಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಬಿಡದಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಸ್ನೇಹಿತರ ತಂಗಿಯ ಪ್ರೀತಿ ಉಳಿಸಲು ಹೋಗಿ ಶವವಾದ:
ಕೊಲೆಯಾದ ಯುವಕ ಭರತ್(20) ಬೆಂಗಳೂರಿನ ಶ್ರೀನಗರ ನಿವಾಸಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಸೇಲ್ಸ್‌ಮೆನ್ ಆಗಿ ಕೆಲಸ ಮಾಡುತ್ತಿದ್ದ. ಈತನ ಸ್ನೇಹಿತ ಮಂಜುನಾಥ್ ಎಂಬುವನ ಸಹೋದರಿ ಶ್ರೀನಗರದ ನಿವಾಸಿ ಕುಮಾರ್ ಎಂಬುವನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿ ಕೆಲ ತಿಂಗಳ ಹಿಂದೆ ತುಂಡಾಗಿತ್ತು. ಈಕೆಯ ಪ್ರಿಯಕರ ಮತ್ತೊಬ್ಬ ಯುವತಿಯ ಜೊತೆ ಪ್ರೀತಿಯಲ್ಲಿ ಬಿದಿದ್ದ. ಇದರಿಂದಾಗಿ ಕುಪಿತ ಗೊಂಡಿದ್ದ ಮೃತನ ಸ್ನೇಹಿತನ ಸಹೋದರಿ ಆಗಾಗ್ಗ ಕರೆ ಮಾಡಿ ಕುಮಾರ್‌ಗೆ ಧಮಕಿ ಹಾಕುತ್ತಿದ್ದಳು.
ವಿಡಿಯೋ ಕಾಲ್‌ನಲ್ಲಿ ಉತ್ತರ ಕರ್ನಾಟಕದ ಮಾಜಿ ಶಾಸಕರ ಪುತ್ರ ಬೆತ್ತಲೆ.. ಹನಿಟ್ರ್ಯಾಪ್ ಜಾಲ! .
ಶನಿವಾರ ರಾತ್ರಿ ತನ್ನ ಅಣ್ಣ ಮಂಜುನಾಥ್ ಮತ್ತು ಭರತ್ ಜೊತೆಗೂಡಿ ಮಹದೇಶ್ವರ ಬೆಟ್ಟಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದಾರೆ. ಬಿಡದಿಯ ಕೆಂಚನಕುಪ್ಪೆ ಗೇಟ್ ಸಮೀಪ ತನ್ನ ಪ್ರಿಯಕರ ಕುಮಾರ್‌ಗೆ ಭರತ್‌ನಿಂದ ಕರೆ ಮಾಡಿಸಿ ತನ್ನ ಸ್ನೇಹಿತನ ತಂಗಿಗೆ ಮೋಸ ಮಾಡಬೇಡ ಎಂದು ಧಮಕಿ ಹಾಕಿಸಿದ್ದಾಳೆ. ಈ ಸಂದರ್ಭದಲ್ಲಿ ಕುಮಾರ್ ಮತ್ತು ಭರತ್ ನಡುವೆ ಮಾತಿಗೆ ಮಾತು ಬೆಳೆದು ದೂರವಾಣಿ ಮೂಲಕ ಸಾಕಷ್ಟುಜಗಳ ನಡೆದಿದೆ ಎನ್ನಲಾಗಿದೆ.
ಡ್ರ್ಯಾಗನ್‌ನಿಂದ ಇರಿದು ಹತ್ಯೆ
ಇದರಿಂದ ಕುಪಿತಗೊಂಡ ಕುಮಾರ್ ತನ್ನ ಹಾಲಿ ಪ್ರೇಯಸಿಯ ಮೂಲಕ ದೂರವಾಣಿ ಕರೆ ಮಾಡಿಸಿ ಇವರು ಇರುವ ಸ್ಥಳ ತಿಳಿದುಕೊಂಡು, ತನ್ನ ಸ್ನೇಹಿತರಾದ ದರ್ಶನ್, ಪ್ರತಾಪ್, ನಿಖಿಲ್ ಮತ್ತು ನಿಖಿತ್ ಎಂಬುವರ ಜೊತೆಗೂಡಿ ಕಾರಿನಲ್ಲಿ ಬಂದು ಗಲಾಟೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಎರಡು ಕಡೆಯವರು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಕುಮಾರ್ ತನ್ನ ಬಳಿಯಿದ್ದ ಡ್ರ್ಯಾಗನ್‌ನಿಂದ ಭರತ್ ಎದೆಯ ಭಾಗಕ್ಕೆ ಚುಚ್ಚಿದ್ದು ತಕ್ಷಣ ಭರತ್ ಕುಸಿದು ನೆಲಕ್ಕುರುಳಿದ್ದಾನೆ. ಅಸ್ವಸ್ತಗೊಂಡಿದ್ದ ಭರತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶವವನ್ನು ಮಾಯಗಾನಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಕುಮಾರ್ ಮತ್ತು ಆತನ ಸಹಚರ ದರ್ಶನ್, ಮೃತನ ಸ್ನೇಹಿತನ ತಂಗಿ, ಮಂಜುನಾಥ್ ಎಂಬುವರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.