ರೈತರಿಗೆ ಕಹಿಯಾದ ಹುಣಸೆ : ಭಾರೀ ದರ ಕುಸಿತ

By Kannadaprabha NewsFirst Published Mar 23, 2021, 2:19 PM IST
Highlights

 ತರಕಾರಿ ಬೆಳೆಗಳ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತನಿಗೆ ಈಗ ದರ ಕುಸಿತದ ಸರದಿಗೆ ಹುಣಸೆ ಹಣ್ಣು ಸೇರಿದ್ದು ರೈತರ ಪಾಲಿಗೆ ಹುಣಿಸೆ ಕಹಿಯಾಗಿ ಪರಿಣಮಿಸಿದೆ

ಚಿಕ್ಕಬಳ್ಳಾಪುರ (ಮಾ.23):  ಜಿಲ್ಲೆಯ ಮಾರುಕಟ್ಟೆಯಲ್ಲಿ ತರಕಾರಿ ಬೆಳೆಗಳ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತನಿಗೆ ಈಗ ದರ ಕುಸಿತದ ಸರದಿಗೆ ಹುಣಸೆ ಹಣ್ಣು ಸೇರಿದ್ದು ರೈತರ ಪಾಲಿಗೆ ಹುಣಿಸೆ ಕಹಿಯಾಗಿ ಪರಿಣಮಿಸಿದೆ. ವಾರದಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರಿಣಾಮ ಹುಣಿಸೆ ಬೆಳೆಗಾರರನ್ನು ಸಾಕಷ್ಟು ಚಿಂತೆಗೀಡು ಮಾಡಿದೆ.

ಜಿಲ್ಲೆಯಲ್ಲಿ ರೈತರು ಮಾವು, ಗೋಡಂಬಿ ಬೆಳೆದಂತೆ ವಾರ್ಷಿಕ ವಾಣಿಜ್ಯ ಬೆಳೆಯಾಗಿ ಹುಣಿಸೆ ಕೂಡ ಬೆಳೆಯುತ್ತಾರೆ. ಬೇಸಿಗೆ ಬಂತು ಅಂದರೆ ಹುಣಸೆ ಕೊಯ್ಲಿಗೆ ಬಂದು ಮಾರುಕಟ್ಟೆಪ್ರವೇಶಿಸುತ್ತದೆ. ಸದ್ಯ ಜಿಲ್ಲೆಯಲ್ಲಿ ಹುಣಿಗೆ ಮಾರುಕಟ್ಟೆಆರಂಭವಾಗಿ ಒಂದರೆಡು ವಾರ ಮುಗಿದಿಲ್ಲ. ಆಗಲೇ ದರ ಕುಸಿತವಾಗಿದೆ.

ಕಳೆದ ವರ್ಷಕ್ಕಿಂತ ಸಾವಿರು ರು. ಕಡಿಮೆ

ಸದ್ಯ ಜಿಲ್ಲೆಯಲ್ಲಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ ಹುಣಸೆ 3200 ರಿಂದ 4000 ರು, ವರೆಗೂ ಮಾರಾಟವಾಗುತ್ತಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಕ್ವಿಂಟಾಲ್‌ ಮೇಲೆ ಬರೋಬ್ಬರಿ 1,000 ರು ಕಡಿಮೆ ಆಗಿದೆ. ಕಳೆದ ವರ್ಷ ಕ್ವಿಂಟಾಲ್‌ ಹುಣಸೆ 5,000 ರಿಂದ 5,500 ರು, ವರೆಗೂ ಮಾರಾಟಗೊಂಡಿತ್ತು. ಆದರೆ ಈ ಬಾರಿ ಕೂಡ ಕನಿಷ್ಠ ಕ್ವಿಂಟಾಲ್‌ 5000 ರು, ಮಾರಾಟಗೊಳ್ಳಬಹುದೆಂಬ ನಿರೀಕ್ಷೆ ಮಾರುಕಟ್ಟೆಯಲ್ಲಿ ಹುಸಿಯಾಗಿದ್ದು ಬಂಪರ್‌ ಬೆಲೆ ನಿರೀಕ್ಷಿಸಿದ್ದ ಜಿಲ್ಲೆಯ ಹುಣಗೆ ಹಣ್ಣು ಬೆಳೆಗಾರರಿಗೆ ಮಾರುಕಟ್ಟೆಕೈ ಕೊಟ್ಟಿದ್ದು ಇನ್ನೂ ಬೆಲೆ ಕುಸಿತವಾಗುವ ಆತಂಕ ಎದುರುರಾಗಿದೆ.

ಹುಣಸೆಹಣ್ಣು ಸೇವಿಸಿ ತೂಕ ಇಳಿಸಬಹುದು ಗೊತ್ತಾ.... ...

ಹುಣಸೆ ಹಣ್ಣನ್ನು ಮರಗಳಿಂದ ಕೊಯ್ಲು ಮಾಡಿ ಕಾಯಿ ಮಾಡುವವರೆಗೂ ಬೆಳೆಗಾರರಿಗೆ ಸಾಕಷ್ಟುಖರ್ಚು ಮಾಡುತ್ತದೆ. ಸಾಗಾಟ ವೆಚ್ಚ ಕೂಡ ದುಬಾರಿ ಆಗಿದೆ. ಇತಂಹ ಸಂದರ್ಭದಲ್ಲಿ ಹುಣಸೆ ಬೆಲೆ ಕುಸಿದಿರುವುದು ರೈತರು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯ ಸಿಗುತ್ತಿರುವ ದರ ಮಾಡಿದ ಖರ್ಚಿಗಿಂತ ಕೈ ಕಚ್ಚುವುದೇ ಜಾಸ್ತಿ ಎಂಬ ಮಾತು ಹುಣಸೆ ಬೆಳೆಗಾರರಿಂದ ಕೇಳಿ ಬರುತ್ತಿದೆ.

ಬೆಳೆಯೂ ಕಡಿಮೆ, ಬೆಲೆಯೂ ಕುಸಿತ

ಬರಪೀಡಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಇಲ್ಲದ ಪರಿಣಾಮ ನೂರಾರು ಎಕರೆ ಹುಣಸೆ ತೋಪುಗಳ ಜಿಲ್ಲೆಯ ಚಿಂತಾಮಣಿ ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿದ್ದು ಇವುಗಳ ಜೊತೆಗೆ ಇತರೆ ತಾಲೂಕಿನಲ್ಲಿರುವ ಹುಣಸೆ ಇಲ್ಲಿನ ಚಿಂತಾಮಣಿ ಮಾರುಕಟ್ಟೆಗೆ ಬರುತ್ತಿರುವುದರಿಂದ ರಾಜ್ಯದಲ್ಲಿ ಅತಿ ಹೆಚ್ಚು ಹುಣಸೆ ಮಾರಾಟ ಮಾಡುವ ಮಾರುಕಟ್ಟೆಯಾಗಿರುವುದು ವಿಶೇಷ. ಆದರೆ ಈ ಬಾರಿ ಉತ್ತಮ ಮಳೆಯಾಗಿ ಮಾವು ಬಂಪರ್‌ ಬೆಳೆ ಬರುವ ನಿರೀಕ್ಷೆಯಲ್ಲಿದ್ದರೂ ಹುಣಿಸೆ ಮಾತ್ರ ಈ ಬಾರಿ ಅರ್ಧಕ್ಕರ್ಧ ಇಳುವರಿ ಕುಸಿತ ಕಂಡಿದೆಯೆಂದು ಬೆಳೆಗಾರರು ಹೇಳುತ್ತಿದ್ದಾರೆ. ಹೀಗಾಗಿ ಬಂಪರ್‌ ಬೆಲೆ ನಿರೀಕ್ಷಿಸಿದ್ದ ಅವಳಿ ಜಿಲ್ಲೆಯ ಹುಣಸೆ ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವಂತೆ ಆಗಿದೆ,

 ಬೆಲೆ ಕುಸಿತ ಏಕೆ?

ಸಹಜವಾಗಿ ಪ್ರತಿ ವರ್ಷ ರಾಜ್ಯದ ಹುಣಿಸೆ ಹಣ್ಣಿಗೆ ಉತ್ತರ ಭಾರತದ ಕಡೆಯಿಂದ ಸಾಕಷ್ಟುಬೇಡಿಕೆ ಬರುತ್ತಿತ್ತು. ಆದರೆ ಈ ಬಾರಿ ಮಧ್ಯಪ್ರದೇಶ, ಉತ್ತರ ಪ್ರದೇಶ, ತೆಲಂಗಾಣ, ಛತ್ತೀಸಗಡ್‌ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹುಣಿಸೆ ಹಣಿನ ಅವಕ ವ್ಯಾಪಕವಾಗಿ ಬಂದಿದ್ದು ಆ ಭಾಗದ ವ್ಯಾಪಾರಸ್ಥರು ಯಾರು ರಾಜ್ಯದ ಹುಣಿಸೆ ಖರೀದಿಗೆ ಬಾರದ ಪರಿಣಾಮ ವಾರದಿಂದ ಹುಣಸೆ ಬೆಲೆ ಕುಸಿತವಾಗಿದೆಯೆಂದು ಚಿಂತಾಮಣಿ ಎಪಿಎಂಸಿ ವರ್ತಕ ಎಂ.ಎಂ.ಶ್ರೀನಿವಾಸ್‌ ಕನ್ನಡಪ್ರಭಗೆ ತಿಳಿಸಿದರು.

ಚಿಂತಾಮಣಿಯಲ್ಲಿ ಮಾತ್ರ ಮಾರುಕಟ್ಟೆ

ಅವಿಭಜಿತ ಕೋಲಾರ ಜಿಲ್ಲೆಯಲ್ಲಿಯೇ ಬೃಹತ್‌ ವಾಣಿಜ್ಯ ಕೇಂದ್ರವಾಗಿ ಗಮನ ಸೆಳೆದಿರುವ ಚಿಂತಾಮಣಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾತ್ರ ಹುಣಸೆ ಮಾರುಕಟ್ಟೆಆರಂಭವಾಗಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಡೆಯುವ ಹುಣಸೆ ಹಣ್ಣಿನ ಮಾರುಕಟ್ಟೆಗೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಲೋಡ್‌ ಹುಣಿಸೆ ಹಣ್ಣು ಸರಬರಾಜು ಆಗುತ್ತಿದ್ದು, ಕೋಟ್ಯಂತರ ರೂ, ವಾಣಿಜ್ಯ ವಹಿವಾಟು ನಡೆಯತ್ತಿದೆ. ಹುಣಸೆ ಮಾರಾಟ ಮಾಡುವ ಮಾರುಕಟ್ಟೆಗಳಲ್ಲಿ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಮೂರು ಅಥವಾ ನಾಲ್ಕನೇ ಸ್ಥಾನದಲ್ಲಿದ್ದು ಇಲ್ಲಿನ ಮಾರುಕಟ್ಟೆಗೆ ಅವಿಭಜಿತ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ತಾಲೂಕುಗಳಿಂದ ಹುಣಸೆ ಇಲ್ಲಿಗೆ ಬರುತ್ತಿದೆ.

click me!