ಕೆಂಪೇಗೌಡ ಲೇಔಟಲ್ಲಿ 180 ಎಕರೆಯ ಸೈಟ್‌ ಅಕ್ರಮವಾಗಿ ಪರಿವರ್ತಿಸಿ ಮಾರಾಟ..?

By Kannadaprabha NewsFirst Published Feb 9, 2023, 11:26 AM IST
Highlights

ಬಡಾವಣೆಯಲ್ಲಿ ಒಂದು ಬಾರಿ ಸಿಎ ನಿವೇಶನ, ಉದ್ಯಾನ ಅಥವಾ ಮೈದಾನ ಎಂದು ಅಧಿಸೂಚನೆಯಾದರೆ ಅದನ್ನು ಬದಲಿಸುವ ಅಧಿಕಾರ ಎಂಜಿನಿಯರ್‌ಗಳಿಗೆ ಇರುವುದಿಲ್ಲ. ಆದರೆ ಕಾನೂನು ಉಲ್ಲಂಘಿಸಿ ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿರುವುದು ಅಪರಾಧವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023): ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಾಗರಿಕ ಸೌಕರ್ಯ ಕಲ್ಪಿಸಲು ಮೀಸಲಿಟ್ಟ ನಿವೇಶನಗಳನ್ನು (ಸಿಎ ಸೈಟ್‌) ಅಕ್ರಮವಾಗಿ ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 35 ಎಂಜಿನಿಯರ್‌ಗಳು ಮತ್ತು ಏಳು ಮಂದಿ ಸರ್ವೇಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಲು ಬಿಡಿಎ ಮುಂದಾಗಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಖಾಸಗಿ ಸಂಸ್ಥೆಯೊಂದು ತನಿಖೆ ನಡೆಸಿ ಸಿದ್ಧಪಡಿಸಿರುವ ವರದಿಯ ಪ್ರಾಥಮಿಕ ಅಂಶಗಳ ಪ್ರಕಾರ, ಬಿಡಿಎ ಅಧಿಕಾರಿಗಳು ಅಕ್ರಮವಾಗಿ ಕನಿಷ್ಠ 12 ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿದ್ದಾರೆ. ಇದು ಕೆಟಿಸಿಪಿ ಕಾಯಿದೆ (ಕರ್ನಾಟಕ ಟೌನ್‌ ಆ್ಯಂಡ್‌ ಕಂಟ್ರಿ ಪ್ಲಾನಿಂಗ್‌ ಆಕ್ಟ್) ಹಾಗೂ ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆಯಾಗಿದೆ. ಬಡಾವಣೆಯಲ್ಲಿ ಒಂದು ಬಾರಿ ಸಿಎ ನಿವೇಶನ, ಉದ್ಯಾನ ಅಥವಾ ಮೈದಾನ ಎಂದು ಅಧಿಸೂಚನೆಯಾದರೆ ಅದನ್ನು ಬದಲಿಸುವ ಅಧಿಕಾರ ಎಂಜಿನಿಯರ್‌ಗಳಿಗೆ ಇರುವುದಿಲ್ಲ. ಆದರೆ ಕಾನೂನು ಉಲ್ಲಂಘಿಸಿ ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿರುವುದು ಅಪರಾಧವಾಗಿದೆ.

ಇದನ್ನು ಓದಿ: ಬೆಂಗಳೂರು: ಕೆಂಪೇಗೌಡ ಬಡಾವಣೆಗೆ ಬಿಡಿಎ ಅನ್ಯಾಯ..!

ಸಿಎ ನಿವೇಶನಗಳಲ್ಲದೆ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿಯಾಗಬೇಕಾದ 100 ಅಡಿ ಮತ್ತು 80 ಅಡಿ ರಸ್ತೆಯ ಸುತ್ತಮುತ್ತಲಿನ 180 ಎಕರೆ ಪ್ರದೇಶದ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಎಂಜಿನಿಯರ್‌ಗಳು ಪರಿವರ್ತಿಸಿದ್ದಾರೆ. ಬಿಡಿಎ ಎಂಜಿನಿಯರ್‌ಗಳು, ಉಪ ಕಾರ್ಯದರ್ಶಿ ಮತ್ತು ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ನಡೆದ ಅಕ್ರಮದಿಂದ ಬಿಡಿಎಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.

ಈ ಕುರಿತು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರು, ರೈತರಿಗೆ ಪರಿಹಾರ ರೂಪದಲ್ಲಿ ನೀಡಲಾಗಿರುವ ನಿವೇಶನಗಳನ್ನು ಪರಿವರ್ತಿಸಿರುವುದು ಅಕ್ರಮವಾಗಿದೆ. ಸಿಎ ನಿವೇಶನ ಹಾಗೂ ವಾಣಿಜ್ಯ ಬಳಕೆಯ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿರುವ ಎಂಜಿನಿಯರ್‌ಗಳ ಮೇಲೆ ತನಿಖಾ ವರದಿ ಆಧರಿಸಿ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಲಾಗುವುದು. ಕೆಲ ಎಂಜಿನಿಯರ್‌ಗಳು ಹಾಗೂ ದಲ್ಲಾಳಿಗಳು ಬಡಾವಣೆಯ ನಕ್ಷೆಯನ್ನು ಬದಲಿಸಲು ಒತ್ತಡ ಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ 35 ಮಂದಿ ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಿಎ ನಿವೇಶನಗಳನ್ನು ಉದ್ಯಾನವನ, ಆಟದ ಮೈದಾನ, ಜಿಮ್‌, ಅಂಚೆ ಕಚೇರಿ ಮತ್ತು ಸಮುದಾಯ ಕೇಂದ್ರಗಳ ನಿರ್ಮಾಣಕ್ಕೆ ಮೀಸಲಿಡಲಾಗುವುದು ಎಂದರು.

ಇದನ್ನೂ ಓದಿ: Bengaluru: ಕೆಂಪೇಗೌಡ ಲೇಔಟ್‌ ಸೈಟ್‌ ಉಳಿಸಿಕೊಳ್ಳಲು ಮತ್ತೆ ಚಾನ್ಸ್? 

2019ರ ಡಿಸೆಂಬರ್‌ನಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯಿಂದ ಬಿಡಿಎಗೆ ಸಲ್ಲಿಸಲಾಗಿದ್ದ ದೂರಿನಿಂದ ಈ ಅಕ್ರಮ ತಿಳಿದುಬಂದಿತ್ತು. ಬಡಾವಣೆಯ ಮೂಲ ನಕ್ಷೆ ಹಾಗೂ ಪುನರಾವರ್ತಿತ ನಕ್ಷೆಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: ಸೌಕರ‍್ಯವಿಲ್ಲದ ಕೆಂಪೇಗೌಡ ಲೇಔಟ್‌ನಲ್ಲಿ ಮನೆ ಕಟ್ಟುವ ಷರತ್ತು ಸಡಿಲಿಕೆಗೆ ಆಗ್ರಹ

click me!