ಕ್ವಾರಂಟೈನ್‌ಗೆ ಗ್ರಾಮಸ್ಥರ ಹಿಂದೇಟು: ಪುಟ್ಟ ಮಕ್ಕಳ ಜೊತೆ ಹೊಲದಲ್ಲೇ ರಾತ್ರಿ ಕಳೆದ ಕುಟುಂಬ..!

By Kannadaprabha NewsFirst Published May 16, 2020, 8:37 AM IST
Highlights

ತಹಸೀಲ್ದಾರ, ಗ್ರಾಮಸ್ಥರಿಂದ ಸಿಗದ ಸಹಕಾರ: ಪುಣೆಯಿಂದ ವಾಪಸ್ಸಾದ ಕುಟುಂಬ ಅತಂತ್ರ| ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶಖಾಪೂರ ಗ್ರಾಮದ ಅಮರೇಶ್ ಕುಟುಂಬ| ಸರ್ಕಾರದ ಆದೇಶದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರಿಗೆ ಮನವರಿಕೆ ಮಾಡುವ ಬದಲು, ಅದು ನನಗೆ ಸಂಬಂಧವಿಲ್ಲ ನೀವೇ ನೋಡ್ಕೋಬೇಕು ಎಂದ ತಹಸೀಲ್ದಾರ್‌| 

ಯಾದಗಿರಿ(ಮೇ.16):  ಕ್ವಾರಂಟೈನ್‌ಗೆ ಅಧಿಕಾರಿಗಳ ಅಸಡ್ಡೆ ಹಾಗೂ ಇನ್ನೊಂದೆಡೆ ಗ್ರಾಮಸ್ಥರ ವಿರೋಧದಿಂದಾಗಿ, ಕೊರೋನಾ ಹಾಟ್‌ಸ್ಪಾಟ್ ಪುಣೆಯಿಂದ ಗುರುವಾರ ನಗರಕ್ಕೆ ವಾಪಸ್ಸಾದ ಕುಟುಂಬವೊಂದು ಕ್ವಾರಂಟೈನ್‌ಗಾಗಿ ಪರದಾಡಿ, ಕೊನೆಗೆ ಹೊಲವೊಂದರಲ್ಲಿದ್ದ ಮರದ ಕೆಳಗೆ ಪುಟ್ಟ ಮಕ್ಕಳ ಸಮೇತ ಮಳೆ-ಚಳಿಯೆನ್ನದೆ ರಾತ್ರಿ ಕಳೆದ ಘಟನೆ ನಡೆದಿದೆ.

ಅನ್ಯ ರಾಜ್ಯಗಳಿಂದ ವಾಪಸ್ಸಾದ ವಲಸಿಗರು/ಕಾರ್ಮಿಕರನ್ನು ಕಡ್ಡಾಯವಾಗಿ ಇನ್ಸಟಿಟ್ಯೂಷನಲ್ ಕ್ವಾರಂಟೈನ್ ಮಾಡಲು ಸರ್ಕಾರ ಆದೇಶಿಸಿದೆ. ಆದರೆ, ಶುಕ್ರವಾರ ಪುಣೆಯಿಂದ ವಿಶೇಷ ಬಸ್ ಮೂಲಕ ಸುರಪುರಕ್ಕೆ ವಾಪಸ್ಸಾದ ಅಮರೇಶ್ ಕುಟುಂಬಕ್ಕೆ ಈ ದುಸ್ಥಿತಿ ಎದುರಾಗಿತ್ತು.

ಯಾದಗಿರಿ: ಸಾವಿರಾರು ಸಂಖ್ಯೆಯಲ್ಲಿ ವಲಸಿಗರ ಆಗಮನ, ಜಿಲ್ಲಾಡಳಿತಕ್ಕೆ ಸವಾಲಾದ ಕ್ವಾರಂಟೈನ್‌..!

ಆಯಾ ಗ್ರಾಮಗಳಲ್ಲಿನ ಶಾಲೆ/ವಸತಿ ಶಾಲೆಗಳಲ್ಲಿ ಅನ್ಯ ರಾಜ್ಯಗಳಿಂದ ವಾಪಸ್ಸಾದವರ ಕ್ವಾರಂಟೈನ್‌ಗೆ ಜಿಲ್ಲಾಡಳಿತ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ, ಶಖಾಪೂರ (ಎಸ್. ಎಚ್.) ಗ್ರಾಮದ ಅಮರೇಶ್ ಕುಟುಂಬ ಗ್ರಾಮಕ್ಕೆ ಗುರುವಾರ ರಾತ್ರಿ ವಾಪಸ್ಸಾದಾಗ ಕೆಲವರು ಕ್ವಾರಂಟೈನ್‌ಗೆ ವಿರೋಧಿಸಿದ್ದಾರೆ. ಸ್ವಂತ ಗ್ರಾಮದಲ್ಲೇ ವಿರೋಧ ವ್ಯಕ್ತವಾದ್ದರಿಂದ ಇವರು ಕಂಗಾಲಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಾತ್ರಿ 8.30ರ ಸುಮಾರಿಗೆ ತಹಸೀಲ್ದಾರ ನಿಂಗಣ್ಣ ಬಿರಾದರ್ ಅವರನ್ನು ಭೇಟಿಯಾದಾಗ, ನಿಮ್ಮ ಗ್ರಾಮಕ್ಕೇ ವಾಪಸ್ ಹೋಗಬೇಕು ಎಂದಿದ್ದಾರೆ. ಗ್ರಾಮದಲ್ಲಿ ವಿರೋಧ ವ್ಯಕ್ತವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರದ ಆದೇಶದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರಿಗೆ ಮನವರಿಕೆ ಮಾಡುವ ಬದಲು, ಅದು ನನಗೆ ಸಂಬಂಧವಿಲ್ಲ ನೀವೇ ನೋಡ್ಕೋಬೇಕು ಎಂದು ತಹಸೀಲ್ದಾರರು ಹೇಳಿದ್ದರಿಂದ, ದಿಕ್ಕು ತೋಚದೆ ನಾವು ವಾಪಸ್ಸಾದೆವು ಎಂದು ಅಮರೇಶ್ ಸಂಬಂಧಿ ಹುಲುಗಪ್ಪ ಗೌಡ ಅಲ್ಲಾದ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

“ನನಗೇನೂ ಸಂಬಂಧವಿಲ್ಲ, ನೀವೇ ಏನಾದ್ರೂ ಮಾಡ್ಕೊಳ್ಳಿ ಎಂದು ಕಡ್ಡಿ ಮುರಿದಂತೆ ತಹಸೀಲ್ದಾರರೇ ಹಾಗೆಂದ ಮೇಲೆ ಏನು ಮಾಡೋದು ಎಂದರಿತ ನಾವು ಅಮರೇಶ್ ಹಾಗೂ ಕುಟುಂಬಕ್ಕೆ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಮರದ ಕೆಳಗೆ ವ್ಯವಸ್ಥೆ ಮಾಡಲಾಯಿತು. ಕೊನೆಗೆ ಶುಕ್ರವಾರ ಬೆಳಿಗ್ಗೆ ಗ್ರಾಮ ಲೆಕ್ಕಿಗರು ಹಾಗೂ ಇತರರನ್ನು ಸಂಪರ್ಕಿಸಿದಾಗ, ಸುರಪುರದ ಕ್ವಾರಂಟೈನ್ ಸೆಂಟರ್‌ಗೆ ಕರೆದೊಯ್ದಿದ್ದಾರೆ ಎಂದು ಎಂದು ಹುಲುಗಪ್ಪ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯಂತಹ ಕೊರೋನಾ ಭೀತಿ ಹೆಚ್ಚಿರುವ ಪ್ರದೇಶಗಳಿಂದ ವಾಪಸ್ಸಾಗಿರುವ ವಲಸಿಗ ಕುಟುಂಬಕ್ಕೆ ರಾತ್ರಿಯಿಡೀ ಪರದಾಡಿದ್ದಲ್ಲದೆ, ಇವರ ಕ್ವಾರಂಟೈನ್ ವಿಚಾರದಲ್ಲಿ ನಿರ್ಲಕ್ಷ್ಯ ತೋರಲಾಗಿದೆ. ತಮ್ಮವರನ್ನೇ ಗ್ರಾಮದೊಳಗೆ ವಿರೋಧಿಸಿದ ಗ್ರಾಮಸ್ಥರ ಅಮಾನವೀಯ ವರ್ತನೆ ಹಾಗೂ ಇದರ ಗಂಭೀರತೆ ಅರಿತೂ ಕೈಚೆಲ್ಲಿದ ತಾಲೂಕು ದಂಡಾಧಿಕಾರಿಗಳ ವರ್ತನೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೋನಾ ಮುಂಜಾಗ್ರತೆಗಾಗಿನ ಪ್ರಯತ್ನಗಳು ದಂಡವಾಗದಿರಲಿ. ಅವರವರ ಗ್ರಾಮಗಳಲ್ಲಿನ ಶಾಲೆಗಳಲ್ಲೇ ಕ್ವಾರಂಟೈನ್ ಕಡ್ಡಾಯ ಎಂದು ಆದೇಶವಾಗಿದೆ. ನಮ್ಮಲ್ಲಿ ಯಾವುದೇ ರೂಂಗಳು ಖಾಲಿಯಿಲ್ಲ, ವೆಕೆನ್ಸಿಯಿಲ್ಲ. ಗ್ರಾಮಸ್ಥರು ವಿರೋಧಿಸಿದ್ದರೆ ಮನವರಿಕೆ ಮಾಡುವಂತೆ ಸಿಬ್ಬಂದಿಗಳಿಗೆ ಹೇಳಿದ್ದೇನೆ ಎಂದು ಸುರಪುರ ತಹಸೀಲ್ದಾರ ನಿಂಗಣ್ಣ ಬಿರಾದರ್ ಅವರು ಹೇಳಿದ್ದಾರೆ.
 

click me!