
ಗದಗ(ಜೂ.22): ಕಂಕಣ ಸೂರ್ಯ ಗ್ರಹಣ, ಮಣ್ಣೆತ್ತಿನ ಅಮವಾಸೆ ದಿನವಾದ ಭಾನುವಾರ ಗದಗ ಜಿಲ್ಲೆಯಲ್ಲಿ ಕೊರೋನಾ ಸ್ಪೋಟಗೊಂಡಿದ್ದು ಒಂದೇ ದಿನ, ಇದುವರೆಗಿನ ಅತೀ ಹೆಚ್ಚು 18 ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಹಿಂದೆ ಮೇ 23ರಂದು ಒಂದೇ ದಿನ 15 ಜನರಿಗೆ ಕೊರೋನಾ ಪಾಜಿಟಿವ್ ಪತ್ತೆಯಾಗಿದ್ದು ಇದುವರೆಗಿನ ಗರೀಷ್ಠವಾಗಿತ್ತು. ಆದರೆ ಭಾನುವಾರ ಅದನ್ನು ಮೀರಿಸಿದ್ದು, ಒಮ್ಮೆಲೇ 18 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಆರ್ಭಟಿಸಲಿದೆ ಎನ್ನುವ ಮನ್ಸೂಚನೆ ನೀಡಿದೆ.
ಗದಗ: ಭಯ ಹುಟ್ಟಿಸುತ್ತಿದೆ RMP ವೈದ್ಯರ ಟ್ರಾವೆಲ್ ಹಿಸ್ಟರಿ
ಇದುವರೆಗೂ ಗದಗ ನಗರ ಮತ್ತು ಗದಗ ತಾಲೂಕಿಗೆ ಮಾತ್ರ ಸೀಮಿತವಾಗಿದ್ದ ಕೊರೋನಾ ಮಹಾಮಾರಿ ಜಿಲ್ಲೆಯ ಶಿರಹಟ್ಟಿ ಮತ್ತು ರೋಣ ತಾಲೂಕಿಗೂ ವ್ಯಾಪಿಸಿದ್ದು, ದೊಡ್ಡ ಆಂತಕಕ್ಕೆ ಕಾರಣವಾಗಿದೆ. ಗದಗ ಸೆಟ್ಲಮೆಂಟ್ ನಿವಾಸಿಯಲ್ಲಿ ಈ ಮೊದಲು ಸೋಂಕು ಕಾಣಿಸಿಕೊಂಡಿದ್ದು ಅವನ ಸಂಪರ್ಕದಿಂದಾಗಿ 7 ಜನರಿಗೆ ಹಾಗೂ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಪಾಸಿಟಿವ್ ಆಗಿರುವ ವೃದ್ಧನ ಸಂಪರ್ಕದಿಂದ 6 ಜನರಿಗೆ, ಶಿರಹಟ್ಟಿತಾಲೂಕಿನ ಮಜ್ಜೂರು ತಾಂಡಾದ ಒಬ್ಬರಿಗೆ ಶಿರಹಟ್ಟಿಪಟ್ಟಣದ ಓರ್ವರಿಗೆ ಹಾಗೂ ರೋಣ ತಾಲೂಕಿನ ಕುರುಡಗಿ ಗ್ರಾಮದ ಒಬ್ಬರಿಗೆ ಹಾಗೂ ಮಹಾರಾಷ್ಟ್ರದಿಂದ ಮರಳಿ ಜಿಲ್ಲೆಗೆ ಬಂದಿರುವ ಇಬ್ಬರಿಗೂ ಸೋಂಕು ಖಚಿತವಾಗಿದೆ.
ಭಾನುವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ 29 ವರ್ಷದ ಮಹಿಳೆ (ಪಿ-8723), 35 ವರ್ಷದ ಪುರುಷ (ಪಿ-8724) 65 ವರ್ಷದ ವೃದ್ಧ (ಪಿ-8725) 75 ವರ್ಷದ ವೃದ್ಧೆ (ಪಿ-8726) ಈ ನಾಲ್ಕು ಜನರಿಗೆ ಐಎಲ್‌ಐ ನಿಂದ ಸೋಂಕು ತಗಲಿದೆ, ಕೋಟುಮಚಗಿ ಗ್ರಾಮದ ವೃದ್ಧ (ಪಿ-7389) ರ ಸಂಪರ್ಕದಿಂದ 27 ವರ್ಷದ ಪುರುಷ (ಪಿ8727), 28 ವರ್ಷದ ಮಹಿಳೆ (ಪಿ-8728), 53 ವರ್ಷದ ಮಹಿಳೆ (ಪಿ-8729) 6 ವರ್ಷದ ಗಂಡು ಮಗು (ಪಿ-8730), 31 ವರ್ಷದ ಮಹಿಳೆ (ಪಿ-8731), 55 ವರ್ಷದ ಪುರುಷ (ಪಿ-8732) ಸೇರಿದಂತೆ ಒಟ್ಟು 6 ಜನರಿಗೆ ಸೋಂಕು ಧೃಢವಾಗಿದೆ.
ಇನ್ನು (ಪಿ-7387 ಮತ್ತು ಪಿ-7388) ಸಂಪರ್ಕದಿಂದಾಗಿ 24 ವರ್ಷದ ಪುರುಷ (ಪಿ-8733), 21 ವರ್ಷದ ಯುವತಿ (ಪಿ-8734), 33 ವರ್ಷದ ಪುರುಷ (ಪಿ-8735), 68 ವರ್ಷದ ವೃದ್ಧೆ (ಪಿ-8736), 6 ವರ್ಷದ ಹೆಣ್ಣು ಮಗು (ಪಿ-8737), 31 ವರ್ಷದ ಪುರುಷ (ಪಿ-8738) ಒಟ್ಟು ಜನರಿಗೆ ಸೋಂಕು ದೃಢವಾಗಿದ್ದು, ಪಿ-7386 ರ ಸಂಪರ್ಕದಿಂದಾಗಿ 12 ವರ್ಷದ ಗಂಡು ಮಗು (ಪಿ-8739), 5 ವರ್ಷದ ಗಂಡು ಮಗು (ಪಿ-8740) ಇಬ್ಬರಿಗೆ ಸೋಂಕು ಖಚಿತವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ (ಭಾನುವಾರದ 18 ಸೇರಿ) 78ಕ್ಕೆ ಏರಿಕೆಯಾಗಿದ್ದು, ಇವರಲ್ಲಿ ಇಬ್ಬರು ಮೃತಪಟ್ಟಿದ್ದು, 44 ಜನ ಗುಣಮುಖರಾಗಿದ್ದು, 32 ಸಕ್ರೀಯ ಪ್ರಕರಣಗಳಿದ್ದು ಇವರೆಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೋನಾ ಈಗ ಜಿಲ್ಲೆಯ ಮೂರು ತಾಲೂಕಿಗೆ ವ್ಯಾಪಿಸಿದ್ದು, ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ತನ್ನ ಅಟ್ಟಹಾಸ ಈಗಷ್ಟೇ ತೋರ್ಪಡಿಸುತ್ತಿದೆ. ಇದುವರೆಗೂ ಬಂದಿರುವ ಹೆಚ್ಚಿನ ಪ್ರಕರಣಗಳಲ್ಲಿ ಬೇರೆ ರಾಜ್ಯಗಳ ನಂಟಿತ್ತು. ಆದರೆ ಭಾನುವಾರ ಬಂದಿರುವ 18 ಪ್ರಕರಣಗಳಲ್ಲಿ ಯಾವುದೇ ಟ್ರ್ಯಾವೆಲ್ ಹಿಸ್ಟರಿ ಇಲ್ಲದೇ ಇಬ್ಬರು ವೃದ್ಧರಿಗೆ ಮೊದಲು ಸೋಂಕು ಕಂಡು ಬಂದು, ಈಗ ಅವರಿಂದಲೇ ಸೋಂಕು ವ್ಯಾಪಿಸುತ್ತಿದ್ದು ಇವರೆಲ್ಲಾ ಗದಗ ಜಿಲ್ಲೆಯವರೇ. ಯಾವುದೇ ಕ್ವಾರಂಟೈನ್‌ನಲ್ಲಿ ಇರದೇ ಎಲ್ಲೆಂದರಲ್ಲಿ ಸಂಚರಿಸಿದ್ದು ಇವರಿಂದ ಇನ್ನು ಸೋಂಕು ವ್ಯಾಪಕ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ನಿಚ್ಚಳವಾಗಿದೆ.