"ನಾನು ಕರೆದಾಗ ಬರಬೇಕು": ಸಾಗರದಲ್ಲಿ ಬ್ಲ್ಯಾಕ್‌ಮೇಲ್‌ಗೆ 17 ವರ್ಷದ ವಿದ್ಯಾರ್ಥಿನಿ ಬಲಿ

Published : Aug 25, 2026, 07:20 PM IST
women sad

ಸಾರಾಂಶ

ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ವಿದ್ಯಾರ್ಥಿನಿ ಕಿಡಿಗೇಡಿಯೊಬ್ಬನ ಬ್ಲ್ಯಾಕ್‌ಮೇಲ್‌ ಹಾಗೂ ಕಿರುಕುಳಕ್ಕೆ ಬೇಸತ್ತು ವಿಷಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಫೋಟೋಗಳನ್ನು ಇಟ್ಟುಕೊಂಡು 'ನಾನು ಕರೆದಾಗ ಬರಬೇಕು' ಎಂದು ಬೆದರಿಸುತ್ತಿದ್ದ ಆರೋಪಿ ವಿರುದ್ಧ ಕ್ರಮ ಜರೂಗಿಸಲಾಗಿದೆ.

ಶಿವಮೊಗ್ಗ: ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ನೋವಿನ ಘಟನೆಯೊಂದು ನಡೆದಿದೆ. 19 ವರ್ಷದ ಹುಡುಗನೊಬ್ಬನ ನಿರಂತರ ಬ್ಲ್ಯಾಕ್‌ಮೇಲ್ ಹಾಗೂ ಮಾನಸಿಕ ಕಿರುಕುಳಕ್ಕೆ ಮನನೊಂದ 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿಷಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ. "ನಾನು ಕರೆದಾಗಲೆಲ್ಲಾ ನೀನು ಬರಬೇಕು" ಎಂದು ಕಿಡಿಗೇಡಿಯು ನೀಡುತ್ತಿದ್ದ ಬೆದರಿಕೆಯೇ ಈ ಮುಗ್ಧ ಜೀವ ಬಲಿಯಾಗಲು ಕಾರಣ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ವಿವರ

ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಈ ವಿದ್ಯಾರ್ಥಿನಿ ಸ್ಥಳೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಿಡಿಗೇಡಿ ಯುವಕನೊಬ್ಬ ಕಳೆದ ಒಂದೂವರೆ ವರ್ಷಗಳಿಂದ ಈಕೆಯ ಬೆನ್ನು ಬಿದ್ದಿದ್ದ ಎಂಬ ಆರೋಪ ಇದೆ. ಈ ಹಿಂದೆ ಆಕೆಗೆ ಮೊಬೈಲ್ ಫೋನ್ ನೀಡಿ ಸಂಪರ್ಕ ಬೆಳೆಸಲು ಪ್ರಯತ್ನಿಸಿದ್ದ. ಈ ವಿಷಯ ತಿಳಿದ ಪೋಷಕರು ಆತನಿಗೆ ಎಚ್ಚರಿಕೆ ನೀಡಿದ್ದರೂ, ಆತ ತನ್ನ ಚಾಳಿಯನ್ನು ಮುಂದುವರಿಸಿದ್ದ ಎಂಬ ಆರೋಪ ಮಾಡಲಾಗಿದೆ.

ಬ್ಲ್ಯಾಕ್‌ಮೇಲ್ ಹಾಗೂ ಕಿರುಕುಳ

ವಿದ್ಯಾರ್ಥಿನಿ ಕಾಲೇಜಿಗೆ ಹೋಗುವ ದಾರಿಯಲ್ಲಿ ಬೈಕ್‌ನಲ್ಲಿ ಹಿಂಬಾಲಿಸಿ ಚುಡಾಯಿಸುತ್ತಿದ್ದ ಆರೋಪಿ, ಇತ್ತೀಚೆಗೆ ಮಿತಿ ಮೀರಿದ್ದ. ಯುವತಿಯ ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಇಟ್ಟುಕೊಂಡು "ನಾನು ಕರೆದಾಗಲೆಲ್ಲಾ ನೀನು ನನ್ನ ಬಳಿ ಬರಬೇಕು" ಎಂದು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಈ ಮಾನಸಿಕ ಹಿಂಸೆಯನ್ನು ಪೋಷಕರಿಗೆ ಹೇಳಲಾಗದೆ ಮತ್ತು ಸಮಾಜದ ಮರ್ಯಾದೆಗೆ ಅಂಜಿ ವಿದ್ಯಾರ್ಥಿನಿ ತೀವ್ರ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.

ಆಗಸ್ಟ್ 18ರಂದು ಸಂಜೆ ಕಾಲೇಜಿನಿಂದ ಮರಳಿದ ಬಳಿಕ ವಿದ್ಯಾರ್ಥಿನಿ ಮನೆಯಲ್ಲಿದ್ದ ಕಳೆನಾಶಕವನ್ನು ಸೇವಿಸಿದ್ದಳು. ಆರಂಭದಲ್ಲಿ ಈ ವಿಷಯವನ್ನು ಮರೆಮಾಚಿದ್ದರೂ, ಆಗಸ್ಟ್ 20ರ ರಾತ್ರಿ ಆರೋಗ್ಯ ಬಿಗಡಾಯಿಸಿದಾಗ ಪೋಷಕರು ಆಸ್ಪತ್ರೆಗೆ ದಾಖಲಿಸಿದರು. ಶಿವಮೊಗ್ಗ ಹಾಗೂ ಮಣಿಪಾಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಇಂದು ಮುಂಜಾನೆ 5:15ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಬಾಲಕಿಯು ಆರೋಪಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೋಷಕರಿಗೆ ವಿವರಿಸಿದ್ದಾಳೆ.

ಪೊಲೀಸ್ ಕ್ರಮ

ಮೃತ ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಮೇರೆಗೆ ಸಾಗರ ಗ್ರಾಮಾಂತರ ಪೊಲೀಸರು ಆರೋಪಿ ವಿರುದ್ಧ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಯಾವುದೇ ಕಾರಣಕ್ಕೂ ಯುವಜನತೆ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಜೀವ ಮತ್ತು ಜೀವನ ಅತ್ಯಂತ ಅಮೂಲ್ಯ ಎಂದು ಮನವಿ ಮಾಡಿಕೊಂಡರು.

PREV
Read more Articles on
click me!

Recommended Stories

'ಮೇ ಹೆಚ್ ಪಿ ಬೋಲ್ ರಹಾ ಹೂಂ...! 2013ರಲ್ಲೇ ಸತ್ತಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಬದುಕಿದ್ದಾನಾ?
SSLC, PUCಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 'ನಮ್ಮೂರ ಹೆಮ್ಮೆ' ಪೌರ ಸನ್ಮಾನ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!