
ತೀರ್ಥಹಳ್ಳಿ: ಕಸ್ತೂರಿರಂಗನ್ ವರದಿಯ ಹಿಂದೆ ಪಶ್ಚಿಮ ಘಟ್ಟವನ್ನೇ ತೆರವುಗೊಳಿಸುವ ಹುನ್ನಾರವಿದೆ. ರಾಜಕೀಯ ಧುರೀಣರು ವರದಿಯನ್ನು ತಮ್ಮ ಬೆಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಸೂಕ್ಷ್ಮತೆಗಳ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಇಡೀ ಮಲೆನಾಡು ನಿರ್ಜನ ಪ್ರದೇಶವಾದೀತು ಎಂದು ಮಲೆನಾಡು ಹೋರಾಟ ಕ್ರಿಯಾಸಮಿತಿ ಸಂಚಾಲಕ ನೆಂಪೆ ದೇವರಾಜ್ ಎಚ್ಚರಿಸಿದರು.
ಕಸ್ತೂರಿರಂಗನ್ ವರದಿಯನ್ನು ಕೈ ಬಿಡುವಂತೆ ಆಗ್ರಹಿಸಿ ಮಲೆನಾಡು ಹೋರಾಟ ಕ್ರಿಯಾಸಮಿತಿ ವತಿಯಿಂದ ಸೋಮವಾರ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ, ಕಸ್ತೂರಿರಂಗನ್ ವರದಿ ಮಲೆನಾಡಿನ ರೈತರಿಗೆ ಮಾರಕವಾಗಿ ಪರಿಣಮಿಸಿದೆ. ರಾಜಕೀಯ ಧುರೀಣರಿಗೆ ಕಸ್ತೂರಿರಂಗನ್ ವರದಿಯ ಬಗ್ಗೆ ಕಾಳಜಿಗಿಂತ ಮುಖ್ಯವಾಗಿ ತಮ್ಮ ರಾಜಕೀಯ ಹಿತಾಸಕ್ತಿ ಮುಖ್ಯವಾಗಿದೆ. ಈ ಎಲ್ಲ ಸೂಕ್ಷ್ಮತೆಗಳ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಇಡೀ ಮಲೆನಾಡು ನಿರ್ಜನ ಪ್ರದೇಶವಾದೀತು. ಈ ವರದಿಯನ್ನು ವಿರೋದಿಸಿ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅವಿರತ ಹೋರಾಟ ನಡೆಸಲು ತಿರ್ಮಾನಿಸಿದ್ದು, ಈ ಹೋರಾಟಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದು ಹೇಳಿದರು.
ಈ ಪ್ರದೇಶದ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲದೇ, ವೈಜ್ಞಾನಿಕವಾಗಿ ದೆಹಲಿಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಮಾಡಿದ ವರದಿಯಾಗಿದೆ. ಈ ವರದಿಯ ಹಿಂದೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿರುವ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ಇದೆ. ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಈ ಭಾಗವನ್ನು ನಿರ್ಜನ ಪ್ರದೇಶ ಮಾಡುವ ಮೂಲಕ ಪಶ್ಚಿಮ ಘಟ್ಟವನ್ನು ಉದ್ಯಮಿಗಳಿಗೆ ಮೋಜಿನ ತಾಣವಾಗಿ ಟೂರಿಸಂ ತಾಣವಾಗಿ ರೂಪಿಸುವ ತಂತ್ರಗಾರಿಯೂ ಇದೆ. ಪರಿಸರ ಸೂಕ್ಷ್ಮ ವಲಯದ ನೆಪದಲ್ಲಿ ಅಡಕೆಗೆ ಔಷಧ ಸಿಂಪರಣೆಗೆ ತಡೆ ಮತ್ತು ರಸಗೊಬ್ಬರ ಹಾಕದಂತೆ ನಿರ್ಭಂಧ ಹೇರುವ ಪ್ರಯತ್ನ ನಡೆದಿದೆ. ರಸಗೊಬ್ಬರ ಹಾಕದೇ ಈ ಮಣ್ಣಿನಲ್ಲಿ ಬೆಳೆ ಬೆಳೆಯುವುದು ಅಸಾಧ್ಯ ಎಂದರು.
ಶಿವಾನಂದ ಕರ್ಕಿ ಮಾತನಾಡಿ, ಕಸ್ತೂರಿರಂಗನ್ ವರದಿಯಂತಹ ಕರಾಳ ಮಸೂದೆಯನ್ನು ಪ್ರಶ್ನಿಸಲಾಗದೇ ದಾಸ್ಯದಿಂದ ಬದುಕುವಂತಾಗಿದೆ. ಶಾಸನ ಮಾಡುವ ಶಾಸಕರುಗಳಿಗೆ ಜನರ ಸಮಸ್ಯೆಯೇ ಮರೆತು ಹೋಗಿದೆ. ಸದನದಲ್ಲಿ ಈ ಬಗ್ಗೆ ಚಕಾರ ಎತ್ತದೇ ಧಾರ್ಮಿಕ ವಿಚಾರಗಳ ಮೂಲಕ ಜನರು ಪ್ರಶ್ನೆ ಮಾಡದಂತೆ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ. ಈಗ ಮೈ ಮರೆತರೆ ನಮ್ಮ ಭವಿಷ್ಯ ಕರಾಳವಾದೀತು ಎಂದರು.
ಪ್ರೊ.ಜೆ.ಎಲ್. ಪದ್ಮನಾಭ್ ಮಾತನಾಡಿ, ಕಸ್ತೂರಿರಂಗನ್ ವರದಿ ಮಲೆನಾಡಿಗೆ ಮರಣ ಶಾಸನವಾಗಿದೆ. ಮಲೆನಾಡಿನ ಜನರ ಬೆನ್ನಿಗೆ ಇರಿಯುವ ಈ ವರದಿ ವಿರೋದಿ ಹೋರಾಟದ ಮುಂಚೂಣಿಯ ನೇತೃತ್ವವನ್ನು ಯುವ ಜನತೆ ವಹಿಸಬೇಕಿದೆ ಎಂದು ಹೇಳಿದರು.
ಮಲೆನಾಡು ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಹೊಸಕೊಪ್ಪ ಸುಂದರೇಶ್, ಹುಲ್ಲತ್ತಿ ದಿನೇಶ್, ಕೋಣಂದೂರು ಅಶೋಕ್, ಜೋಡಿಗೆರೆ ದಿವಾಕರ್, ಹೊಸಕೊಪ್ಪ ಈಶ್ವರ್, ಸುಧಾಕರ್ ಕುಪ್ಪಳಿ, ಹೊನ್ನಾನಿ ದೇವರಾಜ್, ಕಿರಣ್ ಬೀಸು ಇದ್ದರು.
ಸಾಗರ: ಕಸ್ತೂರಿರಂಗನ್ ವರದಿ ಜಾರಿ ಖಂಡಿಸಿ ಆ. 27ರಂದು ಜಿಲ್ಲಾ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10ಕ್ಕೆ ಶ್ರೀಮಹಾಗಣಪತಿ ದೇವಸ್ಥಾನದಿಂದ ಪ್ರತಿಭಟನಾ ರ್‍ಯಾಲಿ ನಡೆಯಲಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ರೈತರ ಬಗ್ಗೆ ಕಾಳಜಿ ಇದ್ದರೆ ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕಸ್ತೂರಿ ರಂಗನ್ ವರದಿ ಕುರಿತು ಪದೇಪದೇ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಇದು ಮಲೆನಾಡು ರೈತರ ನೆತ್ತಿಯ ಮೇಲಿನ ತೂಗುಕತ್ತಿಯಾಗಿದೆ. ಇದರಿಂದ ರೈತರು ಶಾಶ್ವತವಾಗಿ ಹೊರಗೆ ಬರಬೇಕು. ರಾಜ್ಯ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದ ನಂತರ ತಿರಸ್ಕರಿಸುವುದು ಮಾಮೂಲಿ. ಆದರೆ ಮತ್ತೆ ಯಾವಾಗ ಅಧಿಸೂಚನೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ದೈಹಿಕ ಸರ್ವೆ ನಡೆಸಲು ಮನವಿ ಮಾಡಬೇಕು. ಸೆಟಲೈಟ್ ಸರ್ವೆ ಮೂಲಕ ಕಸ್ತೂರಿ ರಂಗನ್ ಅವರು ತಯಾರಿಸಿದ ವರದಿಯಲ್ಲಿ ಜನವಸತಿ ಪ್ರದೇಶ ಹೆಚ್ಚಿದೆ. ಇದು ಜಾರಿಗೆ ಬಂದರೆ ದೊಡ್ಡಪ್ರಮಾಣದಲ್ಲಿ ರೈತರು ಗುಳೆ ಹೋಗ ಬೇಕಾಗುತ್ತದೆ. ಆದರೆ ರಾಜ್ಯ ಸರ್ಕಾರ ಸರ್ವಪಕ್ಷ ನಿಯೋಗದ ಮೂಲಕ ಕೇಂದ್ರಕ್ಕೆ ಪುನರ್ ಸರ್ವೆಗೆ ಮನವಿ ಮಾಡಬೇಕು ಎಂದು ಆಗ್ರಹಿಸಿದರು.
ಕಸ್ತೂರಿ ರಂಗನ್ ವರದಿಯಡಿ ರಾಜ್ಯದಲ್ಲಿ 1449 ಗ್ರಾಮಗಳು ಪರಿಸರ ಸೂಕ್ಷ್ಮ ಪಟ್ಟಿಯಲ್ಲಿ ಸೇರಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 446 ಗ್ರಾಮಗಳಿದ್ದು, ಸಾಗರ ತಾಲೂಕಿನಲ್ಲಿ 115 ಗ್ರಾಮಗಳಿವೆ. ಇದರ ಜೊತೆಗೆ ಮಜಿರೆ ಗ್ರಾಮಗಳು ಸೇರಿದರೆ 200ಕ್ಕೂ ಹೆಚ್ಚು ಗ್ರಾಮಗಳು ಪರಿಸರಸೂಕ್ಷ್ಮ ಪಟ್ಟಿಗೆ ಸೇರಬಹುದು. ಸಾಗರ ಸಮೀಪದ ಸಂಗಳ, ಚಿಪ್ಪಳಿ, ಮತ್ತಿಕೊಪ್ಪದಂತಹ ಗ್ರಾಮಗಳು ಪರಿಸರಸೂಕ್ಷ್ಮ ಪಟ್ಟಿಯಲ್ಲಿದೆ. ಆದ್ದರಿಂದ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಕರಡು ಅಧಿಸೂಚನೆ ತಿರಸ್ಕರಿಸಿದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಗುವುದಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ನಿಲುವು ತೆಗೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ರೈತ ಸಂಘ ಹಮ್ಮಿಕೊಂಡ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ರಮೇಶ್ ಕೆಳದಿ, ಡಾ.ರಾಮಚಂದ್ರಪ್ಪ ಮನೆಘಟ್ಟ, ಚಂದ್ರಪ್ಪ ಆಲಳ್ಳಿ, ಹರೀಶ್ ಪಡವಗೋಡು, ರಮೇಶ್ ಪಡವಗೋಡು ಹಾಜರಿದ್ದರು.