
ಹೊಸಪೇಟೆ(ಜೂ.02): ಸಾಹಿತಿ ಕುಂ.ವೀರಭದ್ರಪ್ಪಗೆ ಮತ್ತೆ ಬೆದರಿಕೆ ಪತ್ರ ಬಂದಿದ್ದು, ಅವರಿಗೆ ಬಂದ 16ನೇ ಬೆದರಿಕೆ ಪತ್ರ ಇದಾಗಿದೆ ಎಂದಿರುವ ಅವರು ಈ ಪತ್ರವನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಾಹಿತಿ ಕುಂವೀ ಅವರ ಕೊಟ್ಟೂರಿನ ಮನೆಗೆ ಈ ಪತ್ರಗಳು ಬರುತ್ತಿದ್ದು, ಪ್ರತಿ ಬಾರಿಯೂ ಅವರು ಹೀಗೆ ಬಂದ ಪತ್ರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪದೇ ಪದೇ ಇಂಥ ಬೆದರಿಕೆ ಪತ್ರಗಳು ಅವರಿಗೆ ಬರುತ್ತಿವೆ. ‘ನಿಮ್ಮ ಜೀವ ಅಧರ್ಮದಿಂದ ತುಂಬಿದೆ, ಇಂದಲ್ಲ, ನಾಳೆ ಅಜ್ಞಾನದ ದೀಪ ಆರುವುದು ನಿಶ್ಚಿತ. ಕರ್ನಾಟಕ ರಾಜ್ಯದಲ್ಲಿ ಈಗ ಕಂಸನ ಆಡಳಿತ ಪ್ರಾರಂಭ ಆಗಿದೆ. ಹಿಂದೂ ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ, ನಿಮ್ಮಂಥ ದುರ್ಜನ ದೇಶದ್ರೋಹಿಗಳಿಗೆ, ಮುಸ್ಲಿಂ ಮತಾಂಧರಿಗೆ, ಮತಾಂತರಿ ಕ್ರೈಸ್ತರಿಗೆ ಇದು ಸಂಪ್ರಿಯಾ ಸರ್ಕಾರ, ಉರಿಯಿರಿ ಮಕ್ಕಳಾ ಉರಿಯಿರಿ’ ಎಂಬ ಕ್ರೋಧದ ಸಾಲುಗಳಿರುವ ಈ ಪತ್ರವನ್ನು ‘ಸಹಿಷ್ಣು ಹಿಂದೂ’ ಹೆಸರಿನಲ್ಲಿ ಬರೆಯಲಾಗಿದೆ.
ನಟ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣ, ಸಿಸಿಬಿಯಿಂದ ಆಪ್ತನ ಬಂಧನ!
‘ಈ ಬೆದರಿಕೆ ಪತ್ರಗಳನ್ನು ನಾನು ಪೊಲೀಸರಿಗೆ ನೀಡಿರುವೆ. ಪ್ರತಿ ಬಾರಿ, ಪತ್ರ ಬಂದಾಗಲೂ ಪೊಲೀಸರಿಗೆ ಒಪ್ಪಿಸಿರುವೆ’ ಎಂದು ತಿಳಿಸಿದ ಸಾಹಿತಿ ಕುಂ.ವೀರಭದ್ರಪ್ಪ, ಹೀಗೆ ಬಂದಿರುವ ಪತ್ರಗಳು ನನಗೆ ಪ್ರೇಮ ಪತ್ರಗಳಿದ್ದಂತೆ ಎಂದೂ ಕುಹಕವಾಡಿದ್ದಾರೆ.