
ಉದ್ಯಾನಗಳ ನಗರಿ ಎಂದೇ ಜಾಗತಿಕ ಮಟ್ಟದಲ್ಲಿ ಹಿಂದೊಮ್ಮೆ ಗುರುತಿಸಿಕೊಂಡಿದ್ದ, ಈಗಲೂ ಅದೇ ಹೆಸರನ್ನು ಉಳಿಸಿಕೊಂಡಿರುವ ನಗರ ಎಂದರೆ ಅದು ಬೆಂಗಳೂರು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲೂ ಹಸಿರು ನಾಶ ಮಾಡುವುದು ಅನಿವಾರ್ಯ ಎನ್ನುವಂತಾಗಿದೆ. ಬೆಂಗಳೂರು ಬೆಳೆಯುತ್ತಿದೆ. ದಿನ ಬೆಳಗಾದರೆ ಲಕ್ಷ ಲಕ್ಷ ಮಂದಿ ಕೆಲಸ ಹುಡುಕಿಕೊಂಡು ಬೆಂಗಳೂರನ್ನು ತಲುಪುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾದಂತೆ, ವಸತಿ ಪ್ರದೇಶವೂ ಬೆಳೆಯಬೇಕು ಎನ್ನುವ ಕಾರಣದಿಂದ ಜೊತೆಗೆ ಅಭಿವೃದ್ಧಿಯೂ ಬೇಕು ಎಂದಾಗ ಗಿಡ-ಮರಗಳಿಗೆ ಕೊಡಲಿ ಏಟು ಬೀಳಲೇಬೇಕಾಗಿರುವ ಅನಿವಾರ್ಯತೆ ಉಂಟಾಗಿದೆ.
ಇದೇ ಕಾರಣಕ್ಕೆ, ಹಸಿರೇ ಉಸಿರು ಎನ್ನುವ ಧ್ಯೇಯ ಇಟ್ಟುಕೊಂಡು, ಭವಿಷ್ಯದ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರನ್ನು ಮತ್ತೊಮ್ಮೆ ಹಸಿರು ನಗರರನ್ನಾಗಿಸಲಸು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಹೊಸ ಯೋಜನೆಯನ್ನು ರೂಪಿಸಿದೆ. ಹಸಿರು ಪರಿಸರ ಜಾಗೃತಿ ಯೋಜನೆ ಇದಾಗಿದೆ. ಇದಕ್ಕೆ ನಾಳೆ ಅರ್ಥಾತ್ ಜೂನ್ 27ರಂಮದು ಚಾಲನೆ ದೊರಕಲಿದೆ. ಈ ಉತ್ತಮ ಕಾರ್ಯಕ್ಕೆ ನಟ ಸುದೀಪ್ ಅವರು ಬೆಂಬಲ ಘೋಷಿಸಿದ್ದು, ಜನರಲ್ಲಿಯೂ ಹಸಿರನ್ನು ಉಳಿಸುವ ಸಂದೇಶ ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಾಳೆ (ಜೂನ್ 27) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು, ಪರಿಸರ ಸಂರಕ್ಷಣೆಯ ಭಾಗವಾಗಿ ಹಮ್ಮಿಕೊಂಡಿರುವ #GreenBengaluruByBDA ವಿಶೇಷ ಹಸಿರು ಆಂದೋಲನದ ಅಡಿಯಲ್ಲಿ ನಗರದಾದ್ಯಂತ ಒಟ್ಟು 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಹಾಗೂ ಐತಿಹಾಸಿಕ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಪರಿಸರ ಸ್ನೇಹಿ ಕಾರ್ಯಕ್ರಮಕ್ಕೆ ಕೈಜೋಡಿಸುವಂತೆ ಸುದೀಪ್ ಲೈವ್ನಲ್ಲಿ ಬಂದು ಜನರನ್ನು ಕೇಳಿಕೊಂಡಿದ್ದಾರೆ. ನಮ್ಮ ಹೆಮ್ಮೆಯ ಬೆಂಗಳೂರಿನ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಸಾರ್ವಜನಿಕರು ಸಕ್ರಿಯವಾಗಿ ಇದರಲ್ಲಿ ಭಾಗವಹಿಸಬೇಕು ಎಂದು ನಟ ಕರೆ ನೀಡಿದ್ದಾರೆ.
ಜಾಗತಿಕ ಹವಾಮಾನ ವೈಪರೀತ್ಯ ಹಾಗೂ ಹೆಚ್ಚುತ್ತಿರುವ ನಗರದ ವಾಯು ಮಾಲಿನ್ಯ ಮತ್ತು ಉಷ್ಣಾಂಶ ನಿಯಂತ್ರಣಕ್ಕೆ ಸಸಿಗಳನ್ನು ನೆಟ್ಟು ಪೋಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಆದ್ದರಿಂದ ಈ ಬೃಹತ್ ಹಸಿರು ಅಭಿಯಾನವು ಆಯೋಜನೆಗೊಂಡಿದ್ದು, ಬೆಂಗಳೂರಿನ ವಿವಿಧ ಬಡಾವಣೆಗಳು, ಕೆರೆ ದಂಡೆಗಳು ಹಾಗೂ ಪಾರ್ಕ್‌ಗಳ ಆವರಣದಲ್ಲಿ ಸಾರ್ವಜನಿಕರು, ಸ್ವಯಂಸೇವಕರು, ವಿದ್ಯಾರ್ಥಿಗಳು ಮತ್ತು ಪರಿಸರ ಪ್ರೇಮಿಗಳು ಒಂದಾಗಿ ಗಿಡಗಳನ್ನು ನೆಡಲಿದ್ದಾರೆ. ಭವಿಷ್ಯದ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ಆರೋಗ್ಯಕರವಾದ ಹಸಿರು ವಾತಾವರಣವನ್ನು ಉಡುಗೊರೆಯಾಗಿ ನೀಡಲು ಬಿಡಿಎ ಹಮ್ಮಿಕೊಂಡಿರುವ ಈ ಬೃಹತ್ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಿ ಹಸಿರನ್ನು ಉಳಿಸಿ ಎಂದು ಸುದೀಪ್ ಹೇಳಿದ್ದಾರೆ. ಬಿಡಿಎ ಅಧಿಕಾರಿಗಳ ತಂಡವು ಜೂನ್ 27ರ ಈ ಬೃಹತ್ ನೆಡುತೋಪು ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಹಾಗೂ ವಿವಿಧ ಸಂಘಟನೆಗಳನ್ನು ಸ್ವಾಗತಿಸಿದ್ದು, ನೆಟ್ಟ ಸಸಿಗಳನ್ನು ಸತತವಾಗಿ ಪೋಷಿಸಲು ಕಟ್ಟುನಿಟ್ಟಿನ ಯೋಜನೆ ರೂಪಿಸಿದೆ.