Kodagu: ಬಸ್ಸಿಲ್ಲದೆ ಶಾಲೆ ಬಿಟ್ಟ 14 ವಿದ್ಯಾರ್ಥಿಗಳು: ಕೋವಿಡ್ ನಂತರ ಹೆರೂರಿಗೆ ಬಾರದ ಬಸ್ಸುಗಳು

By Govindaraj SFirst Published Jan 30, 2023, 8:28 PM IST
Highlights

ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು ಎಂದು ಸರ್ಕಾರವೇನೋ ಹೇಳುತ್ತದೆ. ಆದರೆ ಕೋವಿಡ್ ನಂತರದ ಸಮಯದಲ್ಲಿ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಈ ಊರಿನ 14 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವಂತೆ ಆಗಿದೆ. ಸರ್ವರಿಗೂ ಶಿಕ್ಷಣ ಕೊಡಬೇಕು ಎನ್ನುವ ಉದ್ದೇಶವನ್ನೇನೋ ಸರ್ಕಾರ ಹೊಂದಿದೆ. 

ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.30): ವಿದ್ಯಾರ್ಥಿಗಳು ಶಾಲೆಗಳಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು ಎಂದು ಸರ್ಕಾರವೇನೋ ಹೇಳುತ್ತದೆ. ಆದರೆ ಕೋವಿಡ್ ನಂತರದ ಸಮಯದಲ್ಲಿ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಈ ಊರಿನ 14 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವಂತೆ ಆಗಿದೆ. ಸರ್ವರಿಗೂ ಶಿಕ್ಷಣ ಕೊಡಬೇಕು ಎನ್ನುವ ಉದ್ದೇಶವನ್ನೇನೋ ಸರ್ಕಾರ ಹೊಂದಿದೆ. ಆದರೆ ಅಂತಹ ಉದ್ದೇಶವಿದ್ದರೆ ಸಾಕೇ..? ಅದಕ್ಕೆ ಪೂರಕವಾದ ಯಾವುದೇ ಸೌಲಭ್ಯಗಳಿಲ್ಲದಿದ್ದರೆ ಆ ಉದ್ದೇಶ ಈಡೇರುವುದಾದರೂ ಹೇಗೆ. ಹೌದು ಸಾರಿಗೆ ಸೌಲಭ್ಯವಿಲ್ಲದೆ ಇಲ್ಲಿ 14 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ಇಂತಹ ಸ್ಥಿತಿ ಇರುವುದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹೆರೂರು ಹಾಡಿಯಲ್ಲಿ. 

120 ಕ್ಕೂ ಕುಟುಂಬಗಳಿರುವ ಇಲ್ಲಿಂದ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 8 ಕಿಲೋ ಮೀಟರ್ ದೂರದಲ್ಲಿರುವ ಬಸವನಹಳ್ಳಿ, ಕಾನ್‍ಬೈಲು ಮತ್ತು ಏಳನೇ ಹೊಸಕೋಟೆ ಶಾಲೆಗಳಿಗೆ ಹೋಗಬೇಕು. ಶಾಲೆಗೆ ಹೋಗಬೇಕೆಂದರೆ ನಾಲ್ಕು ಕಿಲೋ ಮೀಟರ್ ಉದ್ದದ ವನ್ಯಜೀವಿ ಕಾಡಿನಲ್ಲಿ ನಡೆದ ಸಾಗಬೇಕು. ನಿತ್ಯ ಆನೆ, ಹುಲಿಗಳು ಓಡಾಡುವ ಈ ಕಾಡಿನಲ್ಲಿ ನಡೆದು ಶಾಲೆಗೆ ಹೋಗುವುದಾದರೂ ಹೇಗೆ ಎನ್ನುವ ದೊಡ್ಡ ಸಮಸ್ಯೆ ಎದುರಾಗಿದೆ. ಕಾಡಿನಲ್ಲಿ ನಾಲ್ಕು ಕಿಲೋಮೀಟರ್ ನಡೆಯುವ ಜೊತೆಗೆ ಇನ್ನೆರಡು ಕಿಲೋಮೀಟರ್ ಮಾಮೂಲಿ ರಸ್ತೆಯಲ್ಲಿಯೇ ನಡೆಯಬೇಕು. ಹೀಗಾಗಿ ಬಸವನಹಳ್ಳಿ ಶಾಲೆಗೆ ಹೋಗುತ್ತಿದ್ದ 12 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಷ್ಟೇ ಬಾಕಿ. ಮತ್ತೆ ಆ ಶಾಲೆಯತ್ತ ತಿರುಗಿ ನೋಡಿಲ್ಲ. 

ಕೈ ಮುಗಿದು ಪ್ರಾರ್ಥಿಸುವೆ, ಬಾಲ​ಕೃಷ್ಣರ ಸೋಲಿಸಬೇಡಿ: ಸಿದ್ದ​ರಾ​ಮಯ್ಯ

ಇನ್ನು ಆರ್ಥಿಕವಾಗಿ ಸ್ವಲ್ಪ ಸುಧಾರಣೆಯಲ್ಲಿರುವ ಕುಟುಂಬಗಳು ತಮ್ಮ ಮಕ್ಕಳನ್ನು ಬೈಕು, ಆಟೋಗಳಲ್ಲಿ ಶಾಲೆಗೆ ಕರೆದೊಯ್ದು ಬಿಡುತ್ತಿದ್ದಾರೆ. ಆದರೆ ಸಂಜೆ ಶಾಲೆ ಮುಗಿದ ಮೇಲೆ ವಾಪಸ್ ಮನೆಗೆ ಕರೆತರುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಬಹುತೇಕ ಕುಟುಂಬಗಳು ಕೂಲಿ, ನಾಲಿ ಮಾಡಿ ಬದುಕುತ್ತಿರುವುದರಿಂದ ಕೂಲಿಯಿಂದ ವಾಪಸ್ ಮನೆಗೆ ಬರುವುದೇ ತೀರ ತಡವಾಗುವುದರಿಂದ ಆರೇಳು ಕಿಲೋಮೀಟರ್ ದೂರದ ಶಾಲೆಗೆ ಹೋಗಿ ಮತ್ತೆ ತಮ್ಮ ಮಕ್ಕಳನ್ನು ಕರೆತರಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರಾದ ಧರ್ಮಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶಾಲೆಗಳಿಗೆ ಬರುತ್ತಿದ್ದ ಮಕ್ಕಳು ಶಾಲೆ ಬಿಡುತ್ತಿದ್ದಂತೆ ಎರಡು ಮೂರು ಬಾರಿ ಊರಿಗೆ ಭೇಟಿನೀಡಿ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರಲು ಪ್ರಯತ್ನಿಸಿದೆವು. 

ಆದರೆ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಯಾರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದೆ ಬರುತ್ತಿಲ್ಲ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳಾಗಿರುವುದರಿಂದ ಆಟೋಗಳಿಗೆ ಹಣ ನೀಡಿ ಶಾಲೆಗೆ ಕಳುಹಿಸುವುದಿಲ್ಲ. ನಾವು ಶಿಕ್ಷಕರೆಲ್ಲಾ ಸೇರಿ ಆಟೋವೊಂದನ್ನು ಬುಕ್ ಮಾಡಿ ಹೆರೂರಿನ ಮಕ್ಕಳನ್ನು ಶಾಲೆಗೆ ಕರೆತರಲು ಮಾತನಾಡಿದೆವು. ಆದರೆ ಆಟೋದವರು ತಿಂಗಳೊಂದಕ್ಕೆ 9 ಸಾವಿರ ಕೇಳಿದರು. 10 ತಿಂಗಳಿಗೆ 90 ಸಾವಿರ ವ್ಯಯಿಸಬೇಕಾಗುವುದು ಎಂದು ಹೇಳಿ ಚಿಂತಿಸಿ ಸುಮ್ಮನಾದೆವು ಎಂದು ಏಳನೇ ಹೊಸಕೋಟೆ ಮುಖ್ಯ ಶಿಕ್ಷಕ ಸೋಮಯ್ಯ ಬೇಸರ ವ್ಯಕ್ತಪಡಿಸಿದರು. ಕೋವಿಡ್ ಸೋಂಕು ಬರುವುದಕ್ಕೂ ಮೊದಲು ಹೆರೂರಿಗೆ ಬೆಳಿಗ್ಗೆ ಮತ್ತು ಸಂಜೆ ಬಸ್ ಹೋಗಿ ಬರುತ್ತಿತ್ತು. ಆದರೆ ಕೋವಿಡ್ ನಂತರ ಹೆರೂರಿಗೆ ಹೋಗಿ ಬರುತ್ತಿದ್ದ ಬಸ್ಸು ಬರುತ್ತಿಲ್ಲ. 

ಮಾಸಿಕ ಪೆನ್ಷನ್ ಜಾರಿಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಬಂದರೂ ನಿತ್ಯ ಸರಿಯಾಗಿ ಬರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವಂತೆ ಆಗಿದೆ. ಬೈಕ್ ಇರುವ ಕೆಲವರು ತಮ್ಮ ಮಕ್ಕಳನ್ನು ಬೈಕಿನಲ್ಲಿ ಕರೆದು ತಂದು ಬಿಡುತ್ತಾರೆ ಎಂದು ಬಸವನಹಳ್ಳಿ ಶಾಲೆ ಮುಖ್ಯ ಶಿಕ್ಷಕಿ ಐದು ಅವರು ಸಹ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಮೊದಲೇ ತಿಳುವಳಿಕೆ ಕೊರತೆಯಿಂದ ಹಿಂದುಳಿದಿರುವ ಪರಿಶಿಷ್ಟ ಪಂಗಡದ ಕುಟುಂಬಗಳು ತಮ್ಮ ಮಕ್ಕಳಿಗಾದರೂ ಉತ್ತಮ ಶಿಕ್ಷಣ ಕೊಡಿಸಿ ಅವರ ಬದುಕು ಬದಲಾಯಿಸೋಣ ಎಂದು ಕೊಂಡಿದ್ದವರಿಗೆ ಸಾರಿಗೆ ಸೌಲಭ್ಯದ ಕೊರತೆಯಿಂದ ಆ ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುವಂತೆ ಆಗಿರುವುದು ಮತ್ತಷ್ಟು ವಿಪರ್ಯಾಸದ ಸಂಗತಿ.

click me!