ನಿಶ್ಚಿತಾರ್ಥಕ್ಕೆ ಬಂದು ಬಾಕಿ ಆದ 18 ಮಂದಿ ಮರಳಿ ತವರಿಗೆ

By Kannadaprabha NewsFirst Published May 3, 2020, 7:55 AM IST
Highlights

ನಿಶ್ಚಿತಾರ್ಥಕ್ಕೆ ಬಂದು ಕಳೆದ ಒಂದೂವರೆ ತಿಂಗಳಿನಿಂದ ಪುತ್ತೂರು ತಾಲೂಕಿನ ಸಾಲ್ಮರದ ವಧುವಿನ ಮನೆಯಲ್ಲಿಯೆ ಬಾಕಿಯಾಗಿದ್ದ ಅವರ ಸಂಬಂಧಿಕರನ್ನು ಪುತ್ತೂರು ಶಾಸಕರ ವಾರ್‌ ರೂಂ ಮೂಲಕ ಅವರವರ ಮನೆಗೆ ಮೇ 2ರಂದು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು(ಮೇ.03): ನಿಶ್ಚಿತಾರ್ಥಕ್ಕೆ ಬಂದು ಕಳೆದ ಒಂದೂವರೆ ತಿಂಗಳಿನಿಂದ ಪುತ್ತೂರು ತಾಲೂಕಿನ ಸಾಲ್ಮರದ ವಧುವಿನ ಮನೆಯಲ್ಲಿಯೆ ಬಾಕಿಯಾಗಿದ್ದ ಅವರ ಸಂಬಂಧಿಕರನ್ನು ಪುತ್ತೂರು ಶಾಸಕರ ವಾರ್‌ ರೂಂ ಮೂಲಕ ಅವರವರ ಮನೆಗೆ ಮೇ 2ರಂದು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

ಕಡು ಬಡತನದಲ್ಲಿರುವ ನಗರ ಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಗುಂಪಕಲ್ಲು ನಿವಾಸಿ, ಪರಿಶಿಷ್ಟಜಾತಿಗೆ ಸೇರಿದ ತುಕ್ರು ಎಂಬವರ ಮಗಳು ಶಾರದಾ ಎಂಬವರಿಗೆ ಮಾ.21ರಂದು ಶೃಂಗೇರಿಯ ವರನ ಮನೆಯಲ್ಲಿ ನಿಶ್ಚಿತಾರ್ಥ ನಡೆದಿತ್ತು.

ಕ್ವಾರಂಟೈನ್‌ಗೆ ಸಿದ್ಧರಿದ್ದರೆ ಮಾತ್ರವೇ ಉಡುಪಿಗೆ ಬನ್ನಿ

ನಿಶ್ಚಿತಾರ್ಥ ಸಮಾರಂಭಕ್ಕೆ ಮಡಿಕೇರಿ, ಮಂಗಳೂರು, ನಿಂತಿಕಲ್ಲು ಕಡೆಯಿಂದ ಸಂಬಂಧಿಕರು ಆಗಮಿಸಿದ್ದರು. ಇವರೆಲ್ಲ ಸಂಪ್ರದಾಯದಂತೆ ವರನ ಮನೆಗೂ ಹೋಗಿದ್ದರು. ಅಲ್ಲಿಂದ ವಾಪಾಸು ವಧುವಿನ ಮನೆಗೆ ಬಂದು ಊರಿಗೆ ಹೊರಡುವಷ್ಟರಲ್ಲಿ ದೇಶವ್ಯಾಪಿಯಾಗಿ ಕೊರೋನಾ ಲಾಕ್‌ಡೌನ್‌ ಘೋಷಣೆಯಾಗಿತ್ತು. ಹಾಗಾಗಿ ವಧುವಿನ ಮನೆಗೆ ಬಂದಿದ್ದ 18 ಮಂದಿ ಸಂಬಂಧಿಕರಿಗೆ ಊರಿಗೆ ವಾಪಾಸ್‌ ಹೋಗಲಾರದೆ ಸುಮಾರು ಒಂದೂವರೆ ತಿಂಗಳಿಂದ ತುಕ್ರು ಮನೆಯಲ್ಲೇ ಉಳಿದಿದ್ದರು.

ಹೊರ ಜಿಲ್ಲೆ, ರಾಜ್ಯಕ್ಕೆ ಪ್ರಯಾಣಿಸ್ತೀರಾ..? ಹೀಗಿದೆ ಮಾರ್ಗಸೂಚಿ

ಈಬಗ್ಗೆ ಮಾಹಿತಿ ಪಡೆದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ತಮ್ಮ ವಾರ್‌ ರೂಂ ಮೂಲಕ ಅವರು ಅವರವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಕಿಟ್‌ ವಿತರಣೆ: ತುಕ್ರು ಕುಟುಂಬಕ್ಕೆ ಮತ್ತು 10 ಮಂದಿ ಸಂಬಂಧಿಕರಿಗೆ ಶಾಸಕರ ವಾರ್‌ ರೂಂನಿಂದ ಅಗತ್ಯ ದಿನಸಿ ಸಾಮಗ್ರಿಗಳ ಕಿಟ್‌ ವಿತರಿಸಲಾಯಿತು.

click me!