
ಗದಗ: ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ಶಾಸನ ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರಲ್ಲಿ ಕುತೂಹಲ ಮೂಡಿಸಿದೆ. ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿರುವ ಈ ತುಂಡು ಶಾಸನವು 13 ಸಾಲುಗಳನ್ನು ಒಳಗೊಂಡಿದ್ದು, ಚಾಲುಕ್ಯ ಚಕ್ರವರ್ತಿ 2ನೇ ಜಗದೇಕಮಲ್ಲನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಶಾಸನದಲ್ಲಿ ಕುಂತಳನಾಡು ಹಾಗೂ ಮಾಸವಾಡಿ ಆಡಳಿತ ಘಟಕಗಳ ಕುರಿತು ಪ್ರಸ್ತಾಪವಿದ್ದು, ಜಗದೇಕಮಲ್ಲದೇವನ ಕಾಲದ ಒಬ್ಬ ಮಹಾಮಂಡಳೇಶ್ವರನ ಪ್ರಶಸ್ತಿಯನ್ನು ಹೊಗಳಲಾಗಿದೆ. ಆದರೆ ಶಾಸನದ ಬಹುತೇಕ ಭಾಗ ತುಂಡಾಗಿ ಹಾನಿಗೊಳಗಾಗಿರುವುದರಿಂದ ಹೆಚ್ಚಿನ ವಿವರ ಲಭ್ಯವಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಶಾಸನದ ಆರಂಭದಲ್ಲಿ ಶಿವಸ್ತುತಿ ಇರುವುದರಿಂದ ಇದು ಶಿವಾಲಯಕ್ಕೆ ಭೂದಾನ ನೀಡಿದ ಕುರಿತು ಇರಬಹುದೆಂದು ಅಂದಾಜಿಸಲಾಗಿದೆ. ಶಾಸನದಲ್ಲಿ ಸ್ಪಷ್ಟ ಕಾಲದ ಉಲ್ಲೇಖ ಇಲ್ಲದಿದ್ದರೂ, ಜಗದೇಕಮಲ್ಲನ ಆಳ್ವಿಕೆಯ ಅವಧಿಯಾದ ಕ್ರಿಶ 1139ರಿಂದ 1149ರ ನಡುವಿನ ಕಾಲಘಟ್ಟದಲ್ಲಿ ಇದು ರಚನೆಯಾಗಿರಬಹುದು ಎಂದು ಹೇಳಲಾಗಿದೆ. ಲಿಪಿ ಶೈಲಿಯ ಆಧಾರದ ಮೇಲೂ ಇದನ್ನು 12ನೇ ಶತಮಾನದ ಶಾಸನವೆಂದು ಗುರುತಿಸಲಾಗಿದೆ. ಬಸಪ್ಪ ಮುಸುಕಿನಬಾವಿ ಅವರು ಶಾಸನವನ್ನು ಗುರುತಿಸಿದ್ದು, ಶಾಸನವನ್ನು ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಹಾಗೂ ಶಾಸನ ಸಂಶೋಧಕ ಡಾ. ರವಿಕುಮಾರ ಕೆ. ನವಲಗುಂದ ಅವರು ಅಧ್ಯಯನ ಮಾಡಿ ವಿವರಗಳನ್ನು ನೀಡಿದ್ದಾರೆ ಎಂದು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಹಾಗೂ ಆಯುಕ್ತ ಡಾ. ಶರಣು ಗೋಗೇರಿ ಮಾಹಿತಿ ನೀಡಿದ್ದಾರೆ.