ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 2ನೇ ಹಂತದ ಲಾಕ್ ಡೌನ್ ಘೋಷಿಸಿ, ನಿಷೇಧಾಜ್ಞೆ, ಕರ್ಫ್ಯೂ ಜಾರಿಗೊಳಿಸಿಲಾಗಿದೆ. ಆದರೂ ಜೀವಭಯವಿಲ್ಲದೇ ಬೀದಿಗಿಳಿಯುವ ಜನರಿಗೆ ಈಗ ಪೊಲೀಸ್ ಇಲಾಖೆ ಶುಕ್ರವಾರದಿಂದ ಶಾಕ್ ಟ್ರೀಟ್‌ಮೆಂಟೊಂದನ್ನು ಶುರುಮಾಡಿದೆ. ಅದೇ ಜನರ ಬಂಧನ.
ದಾವಣಗೆರೆ(ಏ.19): ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 2ನೇ ಹಂತದ ಲಾಕ್ ಡೌನ್ ಘೋಷಿಸಿ, ನಿಷೇಧಾಜ್ಞೆ, ಕರ್ಫ್ಯೂ ಜಾರಿಗೊಳಿಸಿಲಾಗಿದೆ. ಆದರೂ ಜೀವಭಯವಿಲ್ಲದೇ ಬೀದಿಗಿಳಿಯುವ ಜನರಿಗೆ ಈಗ ಪೊಲೀಸ್ ಇಲಾಖೆ ಶುಕ್ರವಾರದಿಂದ ಶಾಕ್ ಟ್ರೀಟ್‌ಮೆಂಟೊಂದನ್ನು ಶುರುಮಾಡಿದೆ. ಅದೇ ಜನರ ಬಂಧನ.
ಅನಗತ್ಯವಾಗಿ ರಸ್ತೆಗಳಲ್ಲಿ ತಿರುಗಾಡುತ್ತಿದ್ದ 125ಕ್ಕೂ ಹೆಚ್ಚು ಜನರನ್ನು ಈಗಾಗಲೇ ನಗರದ ವಿವಿಧೆಡೆ ಪೊಲೀಸರು ಬಂಧಿಸಿದ್ದು, ಇವರಲ್ಲಿ ಮಹಿಳೆಯರೂ ಸೇರಿರುವುದು ಗಮನಿಸಬೇಕಾದ ಸಂಗತಿ.
ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ PSI..!
ಲಾಕ್ ಡೌನ್ ಮಧ್ಯೆಯೂ ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ, ಕಾರು, ಆಟೋ, ಲಾರಿ ಸೇರಿದಂತೆ 3500ಕ್ಕೂ ಹೆಚ್ಚು ವಾಹನಗಳನ್ನು ಕಳೆದ ಕೆಲ ದಿನಗಳಿಂದ ಪೊಲೀಸರು ಜಪ್ತಿ ಮಾಡಿದ್ದಾರೆ. ಇದರ ಮಧ್ಯೆ ಈಗ ಸುಮ್ಮನೆ ಬೀದಿ, ರಸ್ತೆ ಸುತ್ತವ ಜನರಿಗೂ ವೈರಸ್ ಪಾಠ ಹೇಳಿ, ಬಂಧಿಸುವ ದಿಟ್ಟಕ್ರಮ ಜರುಗಿಸುತ್ತಿದೆ.
ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಗುಂಪು ಸೇರಿದ್ದವರು, ವಿನಾಕಾರಣ ಸುತ್ತಾಡುತ್ತಿದ್ದವರು, ಮೈದಾನ, ಪಾರ್ಕ್, ಕಟ್ಟೆ, ಕಟ್ಟಡಗಳ ಹಿಂಭಾಗ, ಸಂದಿಗೊಂದಿಯಲ್ಲಿ ಕುಳಿತಿದ್ದವರನ್ನು ಪೊಲೀಸರು ಹುಡುಕಿ ಹುಡುಕಿ ಬಂಧಿಸುತ್ತಿದ್ದಾರೆ. ಬಗ್ಗದವರ ಕೊರಳ ಪಟ್ಟಿಗೂ ಕೈ ಹಾಕಿ ವಶಕ್ಕೆ ಪಡೆದಿದ್ದಾರೆ. ಮಹಿಳಾಮಣಿಗಳಿಗೂ ಬಿಸಿ ಮುಟ್ಟಿಸಲು ಮಹಿಳಾ ಪೊಲೀಸ್ ಸಿಬ್ಬಂದಿಯ ದುರ್ಗಾ ಪಡೆ ಲಾಠಿ ಹಿಡಿದೆತ್ತಿ ಕಾರ್ಯಾಚರಣೆಗಿಳಿದಿದೆ.
ಮಧ್ಯದಾರಿಯಲ್ಲೇ ಹೆರಿಗೆ, ತಾಯಿ ಮಗುವಿಗೆ ಮರುಜನ್ಮ ನೀಡಿದ ಬೆಂಗಳೂರಿನ ಡಾ. ರಮ್ಯ
ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿಯಾದಾಗಿನಿಂದಲೂ ಕೇಂದ್ರ, ರಾಜ್ಯ ಸರ್ಕಾರಗಳು ಪ್ರತಿಯೊಬ್ಬರೂ ಮನೆಯಲ್ಲಿ ಇರುವಂತೆ ಸಾಕಷ್ಟುಮನವಿ ಮಾಡಿವೆ. ಅಧಿಕಾರಿಗಳು ಜನರ ಕಾಲು ಕಟ್ಟಿಹಾಕಲು ಇಲ್ಲಿಲ್ಲದಂತೆ ಶ್ರಮಿಸುತ್ತಿದ್ದಾರೆ. ಆದರೆ, ಕೆಲವರು ಮಾತ್ರ ನಿರ್ಲಕ್ಷ್ಯ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ದಂಡಾಧಿಕಾರಿಯಾದ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಜನರ ಚಳಿ ಬಿಡಿಸಲು ಕ್ರಮ ಕೈಗೊಂಡಿದ್ದಾರೆ.
ವಿನಾಕಾರಣ ಸುತ್ತಾಡುವವರ ಬಂಧಿಸುತ್ತಿರುವ ಪೊಲೀಸರು ಮಿನಿ ಬಸ್ಸು, ಪೊಲೀಸ್ ವ್ಯಾನ್‌ಗಳಲ್ಲಿ ಹತ್ತಿಸಿಕೊಂಡು ಹೋದರು. ಮತ್ತೊಂದು ಕಡೆ ಅನವಶ್ಯಕವಾಗಿ ಸುತ್ತುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ, ಅವುಗಳ ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿ ಕೇಸ್ ದಾಖಲಿಸಿ, ಅಂಥವರನ್ನೂ ಪೊಲೀಸರು ವಶಕ್ಕೆ ಪಡೆದರು.
ಭಿತ್ತಿಪತ್ರ ಹಿಡಿದು ತಲೆತಗ್ಗಿಸಿ ನಿಂತರು
ಬಂಧಿಸಿ, ಡಿಎಆರ್ ಮೈದಾನಕ್ಕೆ ಕರೆ ತಂದ ಜನರ ಕೈಗೆ ‘ಕ್ಷಮಿಸಿ, ನಾನು ಲಾಕ್‌ಡೌನ್ ಉಲ್ಲಂಘಿಸಿದ್ದೇನೆ...’ ಎಂಬ ಭಿತ್ತಿಪತ್ರ ಕೊಟ್ಟು, ಆ ಎಲ್ಲರ ಫೋಟೋ, ವಿಡಿಯೋ ಮಾಡಿಕೊಳ್ಳಲಾಯಿತು. ಮತ್ತೆ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಆದೇಶ ಉಲ್ಲಂಘಿಸುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಪತ್ರವನ್ನು ಸಹ ಬರೆಸಿಕೊಳ್ಳಲಾಯಿತು. ರಿಂಗ್ ರಸ್ತೆಯ ಜಿಲ್ಲಾಧಿಕಾರಿ ನಿವಾಸದ ಬಳಿಯಿಂದ ಆರಂಭಗೊಂಡ ಡಿಸಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ ನೇತೃತ್ವದ ಅಧಿಕಾರಿ, ಸಿಬ್ಬಂದಿ ನಗರ ಸಂಚಾರ ವಿನೋಬ ನಗರ 2ನೇ ಮುಖ್ಯರಸ್ತೆ, ಹಳೇ ಪಿ.ಬಿ. ರಸ್ತೆ, ವೀರ ಮದಕರಿ ನಾಯಕ ವೃತ್ತ, ಹಗೇದಿಬ್ಬ ವೃತ್ತ, ಆಜಾದ್ ನಗರ, ಬಾಷಾ ನಗರ, ಸೈಯದ್ ಮುಸ್ತಫಾ ನಗರ ಸೇರಿದಂತೆ ವಿವಿಧೆಡೆ ಸಾಗಿತು.