ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಿಂದ ಕೊರೋನಾ ರೋಗ ಹೊಡೆದೋಡಿಸಲು ಸರ್ಕಾರಗಳಿಗೆ ನೆರವು ಅಗತ್ಯ| ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 1 ಕೋಟಿ ನೀಡಲು ಆಡಳಿತ ಮಂಡಳಿ ತೀರ್ಮಾನ| ಶೀಘ್ರ ಚೆಕ್ ವಿತರಣೆ: ರಮೇಶ್ ಕತ್ತಿ|
ಸಂಕೇಶ್ವರ(ಏ.18): ಕೊರೋನಾ ಇಡೀ ದೇಶವನ್ನೇ ತಲ್ಲಣಿಸಿದ್ದು, ಜನರನ್ನು ರಕ್ಷಿಸಲು ಸರ್ಕಾರಕ್ಕೆ ಎಲ್ಲರ ಸಹಾಯ ಸಹಕಾರ ಅವಶ್ಯಕವಿದ್ದು, ಈ ನಿಟ್ಟಿನಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್‌ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಮಾಜಿ ಸಂಸದ ರಮೇಶ ಕತ್ತಿ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಿಂದ ಕೊರೋನಾ ರೋಗ ಹೊಡೆದೋಡಿಸಲು ಸರ್ಕಾರಗಳಿಗೆ ನೆರವು ಅಗತ್ಯ ಇರುವುದನ್ನು ಮನಗಂಡು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 1 ಕೋಟಿ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಗೆ ಚೆಕ್ ತಲುಪಿಸಲಾಗುವುದು ಎಂದರು.
undefined
ಕೊರೋನಾ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಸಾವಿರ ದೇಣಿಗೆ ನೀಡಿದ ಬಾಲಕಿ
ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ ದೇಶದಲ್ಲಿ ಲಾಕ್‌ಡೌನ್ ಅನಿವಾರ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿತ್ವ ಇಂದು ದೇಶದ ಜನರಿಗೆ ನೆಮ್ಮದಿಯ ಬದುಕು ತಂದುಕೊಟ್ಟಿದೆ. ಪ್ರತಿಯೊಬ್ಬರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೊತೆಗೆ ಮನೆಯಲ್ಲಿಯೇ ಇದ್ದು ಕುಟುಂಬದ ಜೊತೆಗೆ ಸಮಾಜ ರಕ್ಷಣೆಯ ಹೊಣೆ ಹೊರಬೇಕಾಗಿದೆ ಎಂದರು.
ಸಮಾಜದಲ್ಲಿ ಕೊರೋನಾ ಭಯ ಹುಟ್ಟಿಸಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ 41 ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೂ 200ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ, ರೈತರಿಗೆ, ಕೂಲಿಕಾರರಿಗೆ ತೊಂದರೆಯಾಗುತ್ತಿದ್ದರೂ ದೇಶದ ರಕ್ಷಣೆ ಉದ್ದೇಶದಿಂದ ಸರ್ಕಾರಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಹೆಚ್ಚಿನ ದರಕ್ಕೆ ದಿನಸಿ:
ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳ ಕೊರತೆ ಸೃಷ್ಟಿಸುವ ಮೂಲಕ ಹೋಲ್‌ಸೇಲ್ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಜಿಲ್ಲಾಡಳಿತ ಜನರ ರಕ್ಷಣೆಗೆ ನಿಲ್ಲಬೇಕು ಎಂದರು.