ಕೊಪ್ಪಳದಲ್ಲಿ ಮತ್ತೊಂದು ಹೇಯ ಕೃತ್ಯ: ದೇಗುಲ ಪ್ರವೇಶಿಸಿದ ದಲಿತನಿಗೆ 11,000 ದಂಡ

By Kannadaprabha News  |  First Published Sep 26, 2021, 7:13 AM IST

*  ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನಲ್ಲಿ ಹೇಯ ಅಸ್ಪೃಶ್ಯತೆ ಘಟನೆ ಬೆಳಕಿಗೆ
*  ದೇವಸ್ಥಾನದ ಮೈಲಿಗೆ ನಿವಾರಣೆ, ಶುದ್ಧೀಕರಣ 
*  ಪಶ್ಚಾತಾಪಕ್ಕೆ 5 ಲಕ್ಷ ದಂಡ ಕಟ್ಟಲು ಆಜ್ಞಾಪಿಸಿದ್ದ ಕೆಲ ಮುಖಂಡರು
 


ಕಾರಟಗಿ(ಸೆ.26):  ಕೊಪ್ಪಳ(Koppal) ಜಿಲ್ಲೆ ಕುಷ್ಟಗಿ ತಾಲೂಕಿನ ಮಿಯಾಪೂರ ಗ್ರಾಮದಲ್ಲಿ ದಲಿತ ಬಾಲಕ ಮಂದಿರ ಪ್ರವೇಶಿಸಿದ ಅಸ್ಪೃಶ್ಯತೆ ಪ್ರಕರಣ ಮಾಸುವ ಮುನ್ನವೇ ಕಾರಟಗಿ ಪಟ್ಟಣದ ಹೊರವಲಯದಲ್ಲಿಯೂ ಇಂಥದ್ದೆ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಸ್ವಯಂ ಪ್ರೇರಣೆಯಿಂದ ದೇವಸ್ಥಾನದ ಪೂಜಾರಿ ಸೇರಿದಂತೆ ಆಡಳಿತ ಮಂಡಳಿಯ ಒಟ್ಟು 8 ಜನರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿದ್ದಾರೆ.

ಕಾರಟಗಿ ಹೊರವಲಯದ ನಾಗನಕಲ್‌ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ(Temple) ಇಲ್ಲಿನ ರಾಜೀವಗಾಂಧಿ ನಗರದ ಬಳಿ ವಾಸಿಸುವ ಪರಿಶಿಷ್ಟಜಾತಿಗೆ ಸೇರಿದ ಸಿಂಧೋಳ್ಳಿ ಸಮಾಜದ ಯುವಕನ್ನೊಬ್ಬ ಪೂಜೆ ಸಲ್ಲಿಸಿ ಹೊರ ಬರುವುದನ್ನು ಗಮನಿಸಿದ ದೇವಸ್ಥಾನದ ಪೂಜಾರಿ, ಯುವಕ ದೇಗುಲ ಪ್ರವೇಶಿಸಿದಕ್ಕೆ ನಿಂದಿಸಿದ್ದಾನೆ. ಅಲ್ಲದೇ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಿಗೆ ವಿಷಯ ತಿಳಿಸಿ ಪಂಚಾಯಿತಿ ನಡೆಸಿ ದೇವಸ್ಥಾನದೊಳಗೆ ಪ್ರವೇಶಿಸಿದಕ್ಕೆ ಆಕ್ಷೇಪಿಸಿ ದೇವಸ್ಥಾನ ಸ್ವಚ್ಛತೆ ಮತ್ತು ಶುದ್ಧೀಕರಣಕ್ಕೆ ಮಾರೆಪ್ಪ ಕರೆಮಾರೆಪ್ಪ ಸಿಂಧೋಳ್ಳಿ ಎಂಬ ಯುವಕನಿಗೆ .11 ಸಾವಿರ ದಂಡ ವಿಧಿಸಿದ್ದರು. ಕಳೆದ ಸೆ. 16ರಂದು ಈ ಪ್ರಕರಣ ನಡೆದದ್ದು ಜನರಿಂದ ಮಾಹಿತಿ ಪಡೆದ ಇಲ್ಲಿನ ಪೊಲೀಸರು ಸ್ವಯಂ ಪ್ರೇರಣೆಯಿಂದ ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tap to resize

Latest Videos

ಕೊಪ್ಪಳ: ಮಿಯ್ಯಾಪುರ ಘಟನೆ ಮರುಕಳಿಸದಂತೆ ಪಣತೊಟ್ಟ ಪೊಲೀಸ್‌ ಇಲಾಖೆ

ನಾಗನಕಲ್‌ ಗ್ರಾಮದ ದೇವಸ್ಥಾನದ ಪೂಜಾರಿ ಬಸವರಾಜ ಬಡಿಗೇರ, ಆಡಳಿತ ಮಂಡಳಿಯ ರೇವಣಯ್ಯಸ್ವಾಮಿ ಗಾಲಿಮಠ, ಶೇಖರಪ್ಪ ರೇವಣಕಿ, ಶಂಕ್ರಪ್ಪ ಗುಂಜಳ್ಳಿ, ಪ್ರಶಾಂತ ತಮ್ಮಣ್ಣನವರ, ಬಸವರಾಜ ತಳವಾರ, ಕಾಡಪ್ಪ ನಾಯಕ ಮತ್ತು ದುರುಗೇಶ ಸಂಕನಾಳ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಈಗಾಗಲೇ ನಾಲ್ವರನ್ನು ತಮ್ಮ ವಶಕ್ಕೆ ತೆಗೆದುಕೊಂಡ ಪೊಲೀಸರು(Police) ವಿಚಾರಣೆಗೆ ಗಂಗಾವತಿಗೆ ಕರೆದೊಯ್ದಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ಕಾರಟಗಿ ಪಿಎಸ್‌ಐ ಯಂಕಪ್ಪ ತಿಳಿಸಿದ್ದಾರೆ.

5 ಲಕ್ಷ ದಂಡಕ್ಕೆ ಆಜ್ಞೆ:

ದಲಿತ(Dalit) ಯುವಕ ದೇವಸ್ಥಾನಕ್ಕೆ ಹೋಗಿ ಖುದ್ದಾಗಿ ಪೂಜೆ ಸಲ್ಲಿಸಿ ಬಂದಿದ್ದು ದೇವಸ್ಥಾನ ಮೈಲಿಯಾಗಿದ್ದರಿಂದ ನಾಗನಕಲ್‌ ಗ್ರಾಮದ ದೇವಸ್ಥಾನಕ್ಕೆ ಸೇರಿದ ಕೆಲ ಪ್ರಮುಖರು ಪ್ರಾರಂಭದಲ್ಲಿ ಸಿಂಧೋಳ್ಳಿ ಸಮಾಜದವರು ದೇವಸ್ಥಾನದ ಮೈಲಿಗೆ ನಿವಾರಣೆ, ಶುದ್ಧೀಕರಣಕ್ಕೆ ಮತ್ತು ಪಶ್ಚಾತಪ್ಪಕ್ಕೆ ಸೇರಿ ಒಟ್ಟು ಕನಿಷ್ಠ 5 ಲಕ್ಷ ದಂಡ ಕಟ್ಟುವಂತೆ ಆದೇಶಿಸಿದ್ದರು. ಆದರೆ, ಕೆಲವರು ಇದನ್ನು ಆಕ್ಷೇಪಿಸಿದ್ದರಿಂದ ಕೊನೆಗೆ 11 ಸಾವಿರ ದಂಡ ಕಟ್ಟಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲಾಗಿತ್ತು.

ಕಳೆದ 2 ದಿನಗಳಿಂದ ಈ ಅಸ್ಪೃಶ್ಯತೆ(Untouchability) ಪ್ರಕರಣದ ಸುದ್ದಿ ಹರಿದಾಡುತ್ತಿದ್ದರಿಂದ ಶುಕ್ರವಾರ ಗ್ರಾಮಕ್ಕೆ ತಹಸೀಲ್ದಾರ್‌ ರವಿ ಅಂಗಡಿ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಪಿಐ ಉದಯರವಿ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ನಂತರ ಎಲ್ಲರ ಸಭೆ ನಡೆಸಿ ಆಸ್ಪೃಶ್ಯತೆ ಹೋಗಲಾಡಿಸುವಂತೆ ತಿಳಿ ಹೇಳಿ ಜಾಗೃತಿ ಸಭೆ ನಡೆಸಿದ್ದರು.

ದೇಗುಲ ಪ್ರವೇಶಿಸಿದ 2 ವರ್ಷದ ದಲಿತ ಮಗು : ದಂಡ ವಿಧಿಸಿದ ಮುಖಂಡರು!

ಘಟನೆ ಕುರಿತು ಮಾರೆಪ್ಪ ಸೇರಿ ಸಿಂಧೋಳ್ಳಿ ಜನಾಂಗದ ಮುಖಂಡರಿಗೆ ಪ್ರಕರಣ ದಾಖಲಿಸುವಂತೆ ಹಲವು ಬಾರಿ ಪೊಲೀಸರು ತಿಳಿ ಹೇಳಿದ್ದರೂ ಅವರಾರ‍ಯರೂ ದೂರು ನೀಡಲು ಮುಂದಾಗಿರಲಿಲ್ಲ. ಪರಿಸ್ಥಿತಿ ಮತ್ತು ವಿಷಯದ ಗಂಭೀರತೆ ಅರಿತ ಕಾರಟಗಿ ಪೊಲೀಸರೇ ಶನಿವಾರ ಪೂಜಾರಿ ಸೇರಿ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈಗಾಗಲೇ ಪ್ರಕರಣದ ಪ್ರಾಥಮಿಕ ಮಾಹಿತಿ ಆದರಸಿ ಸ್ವಯಂ ದೂರು ದಾಖಲು ಮಾಡಲಾಗಿದೆ. ತನಿಖೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಎಸ್ಪಿ ಶ್ರೀಧರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮತ್ತೆ ಮತ್ತೆ ಇಂಥ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಾಗನಕಲ್‌ ಗ್ರಾಮದಲ್ಲಿಯೂ ಹಿಂದೆಯೇ ನಡೆದಿರುವ ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ಕ್ರಮ ಕೈಕೊಳ್ಳಲಾಗುತ್ತಿದೆ. ಹಾಗೂ ಜಿಲ್ಲಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೊಪ್ಪಳ ಡಿಸಿ ವಿಕಾಸ ಕಿಶೋರ್‌ ಸುರಳ್ಕರ್‌ ಹೇಳಿದ್ದಾರೆ.  
 

click me!