* 108 ಆ್ಯಂಬುಲೆನ್ಸ್ ಸಿಬ್ಬಂದಿಗೆ 2 ತಿಂಗಳಿಂದ ವೇತನವಿಲ್ಲ
* ಸರ್ಕಾರದಿಂದ ಅನುದಾನ ಬಿಡುಗಡೆಯಾಗುವಲ್ಲಿ ವಿಳಂಬ
* ಸೋಂಕು ಹರಡುವ ಆತಂಕದಲ್ಲೇ ಕೆಲಸ ಮಾಡುತ್ತಿರುವ ಕೊರೋನಾ ವಾರಿಯರ್ಸ್
ನಾರಾಯಣ ಹೆಗಡೆ
ಹಾವೇರಿ(ಮೇ.10): ಕೊರೋನಾ ಪಾಸಿಟಿವ್ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆತರುವುದು, ಸೋಂಕಿನಿಂದ ಮೃತಪಟ್ಟವರನ್ನು ಸಂಬಂಧಿಕರಿಗೆ ಹಸ್ತಾಂತರಿಸುವುದು ಸೇರಿದಂತೆ ಆರೋಗ್ಯ ತುರ್ತು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸಿಬ್ಬಂದಿ ಎರಡು ತಿಂಗಳಿಂದ ವೇತನವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸದ್ಯದ ಕೊರೋನಾ ಮಹಾಮಾರಿ ತೀವ್ರಗತಿಯಲ್ಲಿ ಏರುತ್ತಿರುವ ಕಠಿಣ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಮುಂಚೂಣಿ ಕೊರೋನಾ ವಾರಿಯರ್ಸ್ ಎನಿಸಿರುವ 108 ಆ್ಯಂಬುಲೆನ್ಸ್ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಮಾಚ್‌ರ್ ತಿಂಗಳಿಂದ ರಾಜ್ಯದ 3300 ನೌಕರರು ಜೀವನ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕಳೆದ ವರ್ಷ ಸರ್ಕಾರ ಮುಂಚೂಣಿ ಕೊರೋನಾ ವಾರಿಯರ್ಸ್‌ಗೆ ಪ್ರತಿದಿನ ನೀಡುತ್ತಿದ್ದ 500 ವಿಶೇಷ ಭತ್ಯೆಯೂ ಬಂದ್ ಆಗಿದೆ. ಜತೆಗೆ, ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಜೀವರಕ್ಷಕ ಸಾಮಗ್ರಿಗಳನ್ನೂ ಪೂರೈಸಿಲ್ಲ. ಇದರಿಂದ 108 ವಾಹನದ ಸಿಬ್ಬಂದಿ ನಿತ್ಯವೂ ಆತಂಕದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಎರಡನೇ ಅಲೆಯ ಉಬ್ಬರ, ತತ್ತರಿಸುತ್ತಿರುವ ಹಾವೇರಿ
ಸಂಕಷ್ಟದಲ್ಲಿ 108 ಸಿಬ್ಬಂದಿ:
ಕೊರೋನಾ ಎರಡನೇ ಅಲೆ ಶುರುವಾದ ಮೇಲೆ 108 ಆ್ಯಂಬುಲೆನ್ಸ್ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತಾಗಿದೆ. ಕೊರೋನಾ ಸೋಂಕಿತರಷ್ಟೇ ಅಲ್ಲದೇ ಇನ್ನಿತರ ಆರೋಗ್ಯ ತುರ್ತು ಸಂದರ್ಭದಲ್ಲೂ ಇವರು ಶ್ರಮಿಸುತ್ತಿದ್ದಾರೆ. ಕುಟುಂಬದ ಆರೋಗ್ಯದ ದೃಷ್ಟಿಯಿಂದ 108 ಸಿಬ್ಬಂದಿಯಲ್ಲಿ ಅನೇಕರು ಮನೆಗೆ ಹೋಗುತ್ತಿಲ್ಲ. ಹೆಂಡತಿ, ಮಕ್ಕಳ ಮುಖ ನೋಡದೆ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ. ಎರಡು ತಿಂಗಳಿಂದ ವೇತನವಿಲ್ಲದೇ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ಹಿಂದೆ ವಾರಿಯರ್ಸ್‌ಗೆ ನೀಡುತ್ತಿದ್ದ ದಿನದ ಭತ್ಯೆಯನ್ನೂ ಬಂದ್ ಮಾಡಿದ್ದರಿಂದ ದೊಡ್ಡ ಸಮಸ್ಯೆಯಾಗಿದೆ. ಹೋಟೆಲ್‌ಗಳೂ ಮುಚ್ಚಿದ್ದರಿಂದ ಊಟ, ತಿಂಡಿಗೂ ನಾವು ಪರದಾಡುತ್ತಿದ್ದೇವೆ. ಜೀವರಕ್ಷಕ ಸಲಕರಣೆಯೂ ಸಮರ್ಪಕವಾಗಿ ನೀಡದ್ದರಿಂದ ನಮಗೂ ಸೋಂಕು ಹರಡುವ ಆತಂಕದಲ್ಲೇ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆರೋಗ್ಯ ಕವಚ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಆರೋಗ್ಯ ಕವಚ 108 ಆ್ಯಂಬುಲೆನ್ಸ್ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಹನುಮಂತ್ ಎಂ.ಬಿ. ಅವರು ತಾವು ಎದುರಿಸುತ್ತಿರುವ ಸಂಕಷ್ಟದ ಕುರಿತಾದ ವೀಡಿಯೋ ಹರಿಬಿಟ್ಟಿದ್ದು, ತಮ್ಮ ಅಳಲು ತೋಡಿಕೊಂಡಿದ್ದಾರೆ. ನಮಗೂ ಮಕ್ಕಳಿದ್ದಾರೆ. ವಯಸ್ಸಾದ ಪಾಲಕರಿದ್ದಾರೆ. ಆದರೆ, ನಮ್ಮ ಜೀವ ರಕ್ಷಣೆಗೆ ಅಗತ್ಯ ಸಾಮಗ್ರಿ ಪೂರೈಕೆಯಾಗುತ್ತಿಲ್ಲ. ಎರಡು ತಿಂಗಳಿಂದ ವೇತನವಿಲ್ಲದೇ ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಸೋಂಕಿನ ಭೀತಿಯಿಂದ ನಾವು ಕುಟುಂಬದಿಂದ ಬೇರೆಯಾಗಿ ಉಳಿದಿದ್ದೇವೆ. ಸರ್ಕಾರ ಮತ್ತು ಸಂಸ್ಥೆ ಆದಷ್ಟುಬೇಗ ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಹಾವೇರಿ ಜಿಲ್ಲೆಯ ಹನುಮಂತ್ ಅವರು ವೀಡಿಯೋದಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರದಿಂದ ಅನುದಾನ ಬಿಡುಗಡೆಯಾಗುವಲ್ಲಿ ವಿಳಂಬವಾಗಿದ್ದರಿಂದ 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ಎರಡು ತಿಂಗಳಿಂದ ವೇತನ ನೀಡಲು ಸಾಧ್ಯವಾಗಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಜಿವಿಕೆ ಫೌಂಡೇಶನ್ ಮುಖ್ಯಸ್ಥ ಹನುಮಂತಪ್ಪ ಆರ್.ಜಿ. ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona