ಕೊಪ್ಪಳ: ರೆಮ್‌ಡಿಸಿವಿರ್‌ ಅಕ್ರಮ ಪತ್ತೆಯ ತನಿಖೆಯೇ ನಿಗೂಢ

By Kannadaprabha News  |  First Published May 10, 2021, 8:25 AM IST

* ದೊಡ್ಡ ದೊಡ್ಡ ಕುಳಗಳು ಅಕ್ರಮದಲ್ಲಿ ಭಾಗಿ
* ಖಾಸಗಿ, ಸರ್ಕಾರಿ ಆಸ್ಪತ್ರೆಯಿಂದಲೇ ನಡೆಯುತ್ತಿತ್ತಂತೆ ಕರಾಳ ದಂಧೆ
* ಐವರು ಆರೋಪಿಗಳ ಬಂಧನ
 


ಕೊಪ್ಪಳ(ಮೇ.10): ರೆಮ್‌ಡಿಸಿವಿರ್‌ ಅಕ್ರಮದ ಜಾಲ ಈಗ ಕೊಪ್ಪಳ ಜಿಲ್ಲೆಯಲ್ಲಿಯೂ ಪತ್ತೆಯಾಗಿದ್ದು, ತನಿಖೆಯೇ ನಿಗೂಢವಾಗಿ ಉಳಿದಿದೆ.

ದಾಳಿ ನಡೆದು ಮೂರು ದಿನಗಳಾದರೂ ತನಿಖಾ ತಂಡ ಸ್ಪಷ್ಟ ಮಾಹಿತಿ ನೀಡದೆ ಇರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ದೊಡ್ಡ ದೊಡ್ಡ ಕುಳಗಳು ಇದರಲ್ಲಿ ಭಾಗಿಯಾಗಿದ್ದರಿಂದಲೇ ತನಿಖೆಗೆ ಮೀನಾಮೇಷ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ, ತನಿಖೆಯಲ್ಲಿ ಇನ್ನಷ್ಟೇ ಸತ್ಯ ಬೆಳಕಿಗೆ ಬರಬೇಕಿದೆ. ರೆಮ್‌ಡಿಸಿವಿರ್‌ ಔಷಧಿ ಅಕ್ರಮ ಜಾಲ ಪತ್ತೆಯಾಗಿರುವ ಬೆನ್ನಲ್ಲೇ ಅದು ಹೇಗೆ ನಡೆಯುತ್ತಿತ್ತು ಎನ್ನುವ ಕುರಿತು ವದಂತಿಗಳು ಹರಡುತ್ತಿವೆ.

Tap to resize

Latest Videos

ರೆಮ್‌ಡಿಸಿವಿರ್‌ ಅಕ್ರಮದಲ್ಲಿ ಪತ್ತೆಯಾಗಿರುವ ವ್ಯಕ್ತಿ ತನಿಖೆಯ ವಿಚಾರಣೆ ವೇಳೆಯಲ್ಲಿ ಮೂರ್ಛೆ ಹೋಗಿದ್ದು ನಿಜವೇ ಅಥವಾ ಆತನಿಗೆ ಬ್ರೇನ್‌ ಸ್ಟ್ರೋಕ್‌ ಆಗಿದೆಯೇ? ಎನ್ನುವ ಚರ್ಚೆ ನಡೆದಿದೆ. ಈ ವಿಚಾರ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ತನಿಖೆಯ ಹೊಣೆ ಹೊತ್ತವರೇ ಇದಕ್ಕೆ ಉತ್ತರ ನೀಡಬೇಕಿದೆ. ಘಟನೆಯ ಸುತ್ತ ಹಲವಾರು ಅನುಮಾನಗಳು ಒಡಮೂಡಿದ್ದು, ಇದರಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಪಾತ್ರವಿದೆಯಾ ಅಥವಾ ಖಾಸಗಿ ಆಸ್ಪತ್ರೆಯ ವೈದ್ಯರ ಪಾತ್ರವಿತ್ತೆ ಎಂಬು​ದು ಬೆಳಕಿಗೆ ಬರಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಎಸ್‌ಪಿ, ಜಿಲ್ಲಾಧಿಕಾರಿ ದಾಳಿ: ಗಂಗವಾತಿಯಲ್ಲಿ ರೆಮ್‌ಡಿಸಿವಿರ್‌ ಅಕ್ರಮ ದಾಸ್ತಾನು ಪತ್ತೆ

ಐವರ ಬಂಧನ:

ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ ಸೋಮವಾರ ಮಧ್ಯಾಹ್ನದ ವೇಳೆಗೆ ಅಧಿಕೃತ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪ್ರಕಟಣೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ಎನ್ನುವ ತಲೆಬರಹದಡಿ ಐವರನ್ನು ಬಂಧಿಸಿರುವ ಮಾಹಿತಿ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?:

ಕೊಪ್ಪಳ ಜಿಲ್ಲೆಯಲ್ಲಿ ಜೀವ ರಕ್ಷಕ ಔಷಧಿಯಾದ ರೆಮ್‌ಡಿಸಿವಿರ್‌ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ಬಂದಿರುತ್ತದೆ. ಈ ಜಾಲವನ್ನು ಭೇದಿಲು ಕೊಪ್ಪಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್‌, ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡು ವಿವಿಧ ತಂಡಗಳನ್ನು ರಚಿಸಲಾಗಿದೆ.

ಈ ತಂಡದಲ್ಲಿದ್ದ ಅಧಿಕಾರಿಗಳಾದ ಉಪವಿಭಾಗಾಧಿಕಾರಿ ಕನಕರಡ್ಡಿ, ಸಿಇಎನ್‌ ಪಿಐ ಚಂದ್ರಶೇಖರ್‌, ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಮತ್ತು ಪೊಲೀಸ್‌ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕೊಪ್ಪಳ ನಗರದ ಕೆಲವು ಆಸ್ಪತ್ರೆ ಮತ್ತು ಔಷಧಿ ಅಂಗಡಿ, ಖಾಸಗಿ ಸ್ಥಳಗಳಲ್ಲಿ ದಾಳಿ (ಯಾವ ಆಸ್ಪತ್ರೆ, ಯಾವ ಔಷಧಿ ಅಂಗಡಿ ಎನ್ನುವ ಮಾಹಿತಿಯೇ ಇಲ್ಲ) ಮಾಡಿರುತ್ತಾರೆ. ಈ ದಾಳಿಯ ಕಾಲಕ್ಕೆ ರೆಮ್‌ಡಿಸಿವಿರ್‌ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿತರಾದ ರಾಧಾಕೃಷ್ಣ ಸೀಲಂ ಈಳಿಗೇರಿ ಟೆಕ್ನಿಷಿಯನ್‌, ಅಭಿಷೇಕ ಶಿವಪ್ಪ ಮೆಟ್ರಿ, ಚಂದ್ರಪ್ಪ ಹಾಸ್ಪಿಟಲ್‌ನಲ್ಲಿ ನರ್ಸಿಂಗ್‌ ಕೆಲಸ, ಮಣಿಕಂಠ ಹಟ್ಟಿ ನರ್ಸಿಂಗ್‌ ಕೆಲಸ, ಶಂಕರ ದುರಗಪ್ಪ ಹೊಸಳ್ಳಿ ಸಿಟಿ ಹಾಸ್ಪಿಟಿಲ್‌ ಕೊಪ್ಪಳ, ಅಕ್ಷಯ ಕೋರಿಶೆಟ್ಟರ್‌ ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದವರನ್ನು ದಸ್ತಗಿರಿ ಮಾಡಲಾಗಿದೆ. ಇವರಿಂದ 13 ರೆಮ್‌ಡೆಸಿವಿರ್‌ ಔಷಧಿಯ ವಯಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್‌ ಹಾಗೂ ದಾಖಲೆಗಳಗಳನ್ನು ವಶಪಡಿಸಿಕೊಳ್ಳಲಾಗಿದೆ.
 

click me!