ಶನಿವಾರ ಮತ್ತೆ 8 ಜನರಿಗೆ ವೈರಸ್ ಇರುವುದು ದೃಢ| ಜಿಂದಾಲ್ ಪ್ರಕರಣದಲ್ಲಿ ಮೊದಲು ಹಾಗೂ ದ್ವಿತೀಯ ಸಂಪರ್ಕಿತರಲ್ಲಿ ವೈರಸ್ ಇರುವುದು ಖಚಿತ| ಉಳಿದ ಮೂರು ಪ್ರಕರಣಗಳ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್. ಜನಾರ್ದನ್|
ಬಳ್ಳಾರಿ(ಜೂ.14): ಜಿಲ್ಲೆಯ 11 ಜನರಿಗೆ ಕೊರೋನಾ ವೈರಸ್ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ. ಈ ಪೈಕಿ 8 ಜನರು ಜಿಂದಾಲ್ ನೌಕರರಾಗಿದ್ದಾರೆ. ಇದರಿಂದ ಜಿಂದಾಲ್‌ನ ಕೊರೋನಾ ಸೋಂಕಿತರ ಸಂಖ್ಯೆ 103ಕ್ಕೇರಿದಂತಾಗಿದೆ.
ಶನಿವಾರ ದೃಢಪಟ್ಟ ಇತರ ಮೂವರಲ್ಲಿ ಓರ್ವ ಸಿರುಗುಪ್ಪ ತಾಲೂಕು ಹೊಸಹಳ್ಳಿ ಗ್ರಾಮದವರಾಗಿದ್ದು, ಬಳ್ಳಾರಿಯ ವಿಶಾಲನಗರ ಹಾಗೂ ಕೊಟ್ಟೂರು ತಾಲೂಕಿನ ಕೋಗಳಿಯ ಓರ್ವ ಮಹಿಳೆಯಾಗಿದ್ದಾರೆ.
ಜಿಂದಾಲ್ ಪ್ರಕರಣದಲ್ಲಿ ಮೊದಲು ಹಾಗೂ ದ್ವಿತೀಯ ಸಂಪರ್ಕಿತರಲ್ಲಿ ವೈರಸ್ ಇರುವುದು ಖಚಿತವಾಗಿದೆ. ಉಳಿದ ಮೂರು ಪ್ರಕರಣಗಳ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಲ್. ಜನಾರ್ದನ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಕೊರೋನಾ ಭೀತಿ: ಜಿಂದಾಲ್ ನೌಕರರನ್ನು ಗ್ರಾಮಕ್ಕೆ ಬಿಡದ ಜನರು
ಜಿಂದಾಲ್ ತಾತ್ಕಾಲಿಕ ಸ್ಥಗಿತಕ್ಕೆ ಆಗ್ರಹ:
ಜಿಂದಾಲ್‌ನಲ್ಲಿ ಕೊರೋನಾ ವೈರಸ್ ಏರಿಕೆಯಾಗುತ್ತಿರುವುದರಿಂದ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಬೇಕು ಎಂದು ಕರ್ನಾಟಕ ಜನಸೈನ್ಯ ಸಂಘಟನೆ ಆಗ್ರಹಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ. ಎರ್ರಿಸ್ವಾಮಿ, ಜಿಂದಾಲ್‌ನಲ್ಲಿ ಸಾವಿರಾರು ಜನ ಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದ ವೈರಸ್ ನಿಯಂತ್ರಣ ಕಷ್ಟಸಾಧ್ಯವಾಗಲಿದೆ. ಕುಟುಂಬ ಸದಸ್ಯರಿಗೂ ಹಬ್ಬುವ ಸಾಧ್ಯತೆ ಹಿನ್ನೆಲೆಯಲ್ಲಿ ಕೂಡಲೇ ಕಾರ್ಖಾನೆಯನ್ನು ಸ್ಥಗಿತಗೊಳಿಸಬೇಕು. ವೈರಸ್ ನಿಯಂತ್ರಣಕ್ಕೆ ಬಂದ ಬಳಿಕ ಮತ್ತೆ ತೆಗೆಯಬೇಕು ಎಂದು ಆಗ್ರಹಿಸಿದರು.
ಜಾಗೃತಿ ಕಾರ್ಯ ಚುರುಕು
ಜಿಂದಾಲ್‌ನಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸೋಂಕಿತರು ಕಂಡು ಬಂದಿರುವ ಗ್ರಾಮಗಳು ಹಾಗೂ ಜಿಂದಾಲ್ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಚುರುಕುಗೊಳಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಜ್ವರ, ಶೀತ, ಕೆಮ್ಮು ಇದ್ದರೆ ಕೂಡಲೇ ಫಿವರ್ ಕ್ಲಿನಿಕ್‌ಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮನೆಯಲ್ಲಿರುವ ವೃದ್ಧರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಲಾಯಿತು. ಜಿಲ್ಲಾ ಆರೋಗ್ಯ ಇಲಾಖೆಯ ಆರೋಗ್ಯ ಶಿಕ್ಷಣ ಅಧಿಕಾರಿಗಳು ಜಾಗೃತಿ ಕಾರ್ಯದಲ್ಲಿ ಭಾಗವಹಿಸಿದ್ದರು.
ವಾಟ್ಸ್‌ಆ್ಯಪ್ ಸಂದೇಶಗಳನ್ನು ನಂಬಬೇಡಿ
ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುವ ಅನಧಿಕೃತ ಸಂದೇಶಗಳನ್ನು ಸಾರ್ವಜನಿಕರು ನಂಬಬಾರದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ. ಕೊರೋನಾ ವೈರಸ್‌ನಿಂದ ಜಿಂದಾಲ್ ನೌಕರ ಮೃತಪಟ್ಟಿದ್ದಾನೆ ಎಂದು ಸುಳ್ಳು ವದಂತಿಯೊಂದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಆ ರೀತಿಯ ಯಾವುದೇ ಘಟನೆ ನಡೆದಿಲ್ಲ. ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿದ್ದಾರೆ.