ಅಡಕೆ ಕೊಳೆರೋಗ: ಅಧಿಕ ಮಳೆಯಿಂದಾಗಿ ಬರಬಹುದಾದ ರೋಗದ ಬಗ್ಗೆ ರೈತರಿಗೆ ಸಲಹೆ

By Kannadaprabha News  |  First Published Jun 14, 2020, 11:57 AM IST

 ಅಧಿಕ ಮಳೆಯಿಂದಾಗಿ ಅಡಕೆ ಬೆಳೆಗೆ ಬರಬಹುದಾದ ಕೊಳೆ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸೂಕ್ತ ಹತೋಟಿ ಕ್ರಮಗಳನ್ನು ಕೈಗೊಳ್ಳುವಂತೆ ತೀರ್ಥಹಳ್ಳಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ರೈತರಿಗೆ ಸಲಹೆ ನೀಡಿದೆ.


ತೀರ್ಥಹಳ್ಳಿ(ಜೂ. 14):  ಅಧಿಕ ಮಳೆಯಿಂದಾಗಿ ಅಡಕೆ ಬೆಳೆಗೆ ಬರಬಹುದಾದ ಕೊಳೆ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸೂಕ್ತ ಹತೋಟಿ ಕ್ರಮಗಳನ್ನು ಕೈಗೊಳ್ಳುವಂತೆ ತೀರ್ಥಹಳ್ಳಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ರೈತರಿಗೆ ಸಲಹೆ ನೀಡಿದೆ.

ಮುಂಗಾರಿನ ಆರಂಭದಲ್ಲಿ ವಾಡಿಕೆಗಿಂತ ಅಧಿಕ ಮಳೆ ಹಾಗೂ ಜುಲೈ ತಿಂಗಳಿನಲ್ಲಿಯೂ ಮಳೆಯ ಪ್ರಮಾಣ ಹೆಚ್ಚಾಗುವ ಸಂಭವ ಇರುವುದರಿಂದ ಅಡಕೆ ಕೊಳೆ ರೋಗದ ನಿರ್ವಹಣೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಡಕೆಯ ಕೊಳೆ ರೋಗದ ಉಲ್ಬಣಕ್ಕೆ ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಪೋಷಕಾಂಷಗಳ ಕೊಚ್ಚಣೆ ಮತ್ತು ಸೂರ್ಯನ ಬೆಳಕಿನ ಕೊರತೆ ಮುಂತಾದ ಹಲವು ಕಾರಣಗಳಿವೆ.

Latest Videos

undefined

ಕೊರೋನಾ ಸೋಂಕು ಸ್ಪೋಟ ಸಾಧ್ಯತೆ, ಎಚ್ಚರ ಅಗತ್ಯ: ಬಿವೈ ರಾಘವೇಂದ್ರ

ಕೊಳೆಯಿಂದಾಗಿ ಹಸಿರು ಎಳೆ ಕಾಯಿಉದುರುವಿಕೆ ಹಾಗೂ ಬೆಳೆದ ಕಾಯಿಗಳಲ್ಲಿ ನೀರ್ಗೊಳೆ ಕಂಡು ಬರುತ್ತವೆ. ಇದಾದ ಮುಂದಿನ ದಿನಗಳಲ್ಲಿ ಬಲಿತ ಕಾಯಿಗಳ ಮೇಲೆ ಬೂದುಕೊಳೆ ಬಂದು ಹಾನಿ ಹೆಚ್ಚಾಗುವ ಸಂಭವವಿರುತ್ತದೆ. ಚಳಿಗಾಲ ಪ್ರಾರಂಭವಾಗುವ ಅಕ್ಟೋಬರ್‌ ತಿಂಗಳಿನಿಂದ ಫೆಬ್ರವರಿವರೆಗೂ ಅಡಕೆ ಕಾಯಿ ಕೊಳೆಗೆ ಕಾರಣವಾದ ಶಿಲೀಂಧ್ರದ ರೋಗಾಣುಗಳು ಸೋಗೆಗಳ ಬುಡಭಾಗದಲ್ಲಿ ಅಭಿವೃದ್ದಿ ಹೊಂದಿ ಶಿರಕೊಳೆ ಮತ್ತು ಸುಳಿಕೊಳೆ ರೋಗಕ್ಕೆ ತುತ್ತಾಗಿ ಅಡಕೆ ಮರಗಳು ಸಾಯುವ ಸಂಭವ ಹೆಚ್ಚಾಗುತ್ತವೆ.

ಹಾಗಾಗಿ ಈ ವರ್ಷ ಅಡಿಕೆಯ ಕೊಳೆ ರೋಗವನ್ನು ಸಮರ್ಪಕವಾಗಿ ಹತೋಟಿ ಮಾಡಲು ರೈತರು ಹೆಚ್ಚಿನ ಕಾಳಜಿ ವಸಬೇಕಾಗಿದೆ ಎಂದಿರುವ ಕೇಂದ್ರ, ಈ ಕೆಳಕಂಡ ಕ್ರಮಗಳನ್ನು ಅನುಸರಿಸಲು ರೈತರಿಗೆ ಶಿಫಾರಸ್ಸು ಮಾಡಿದೆ.

ತೋಟದಲ್ಲಿ ಅಡಕೆ ಮರಗಳ ಕೆಳಗೆ ಬಿದ್ದಿರುವ ರೋಗಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರಗಳನ್ನು ಆರಿಸಿ ತೆಗೆದು ಸುಡುವುದು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು.

ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೊಗಲು ವ್ಯವಸ್ಥೆ ಮಡಬೇಕು.

ತೋಟದಲ್ಲಿ ಸರಾಗವಾಗಿ ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು.

ಮಳೆ ಇಲ್ಲದ ಸಮಯದಲ್ಲಿ ರೋಗಪೀಡಿತ ಮರಗಳಿಗೆ ಶೇ. 1 ರ ಬೋರ್ಡೋ ದ್ರಾವಣದಿಂದ ಅಡಕೆ ಗೊನೆಗಳು ಹಾಗೂ ತೊಂಡೆ ಭಾಗಗಳು ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ ಸಿಂಪರಣೆ ಮಾಡಬೇಕು.

ಆದ್ದರಿಂದ ಬೋರ್ಡೋ ದ್ರಾವಣವನ್ನು ಸಿಂಪಡಣೆ ಸೂಕ್ತ ರೀತಿಯಲ್ಲಿ ಮಾಡಬೇಕು. ಅಡಕೆ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಲು ಹೆಚ್ಚಿನ ಮಾಹಿತಿಗಾಗಿ ಮುಖ್ಯಸ್ಥರನ್ನು ಸಂಪರ್ಕಿಸಬೇಕಾಗಿ ಕೇಂದ್ರದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಸೀಬಿನಕೆರೆ, ತೀರ್ಥಹಳ್ಳಿ ದೂರವಾಣಿ ಸಂ. 08181 220589/590, ಮೋ. ಸಂ. 9480838992 ಸಂಪರ್ಕಿಸಬಹುದಾಗಿದೆ.

click me!