Union Budget 2024: ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿಗೆ ಕೇವಲ 1 ಸಾವಿರ ರೂ..!

By Kannadaprabha News  |  First Published Feb 2, 2024, 10:30 PM IST

ಬಜೆಟ್‌ನಲ್ಲಿ ಹಣಕಾಸು ಸಚಿವರು 1 ಸಾವಿರ ಕೋಟಿ ರುಪಾಯಿ ಅಂದಾಜು ಮೊತ್ತದ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆಗೆ 1 ಸಾವಿರ ರುಪಾಯಿ ಮಂಜೂರು ಮಾಡಿ ಗಮನ ಸೆಳೆದಿದ್ದಾರೆ.


ಶೇಷಮೂರ್ತಿ ಅವಧಾನಿ

ಕಲಬುರಗಿ(ಫೆ.02): ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ ಪಾಲಿಗೆ ಕೇಂದ್ರದ ಬಜೆಟ್ ನಿರಾಶಾದಾಯಕವಾಗಿದೆ. ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನವಾಗಿರುವ ಕಲಬುರಗಿಗೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಹೇಳಿಕೊಳ್ಳುವಂತಹ ಯಾವುದೂ ಕೊಡುಗೆಗಳು ಘೋಷಣೆಯಾಗಿಲ್ಲ. ಆದರೆ ಈ ಬಜೆಟ್‌ನಲ್ಲಿ ಹಣಕಾಸು ಸಚಿವರು 1 ಸಾವಿರ ಕೋಟಿ ರುಪಾಯಿ ಅಂದಾಜು ಮೊತ್ತದ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆಗೆ 1 ಸಾವಿರ ರುಪಾಯಿ ಮಂಜೂರು ಮಾಡಿ ಗಮನ ಸೆಳೆದಿದ್ದಾರೆ.

Latest Videos

undefined

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಬಜೆಟ್‌ ಮಂಡನೆಯಾಗುತ್ತಿರೋದರಿಂದ ಹಿಂದುಳಿದ ಈ ಜಿಲ್ಲೆಯ ಜನ ಹಲವು ರಂಗಗಳಲ್ಲಿ ಕೊಡುಗೆ ನಿರೀಕ್ಷಿಸಿದ್ದರು. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನನುದಾನ, ಹಿಂದುಳಿದ ಭಾಗಕ್ಕೆ ಈಶಾನ್ಯ ರಾಜ್ಯಗಳಂತೆ ಹೆಚ್ಚಿನ ಅನುದಾನ ಘೋಷಣೆ, ಕಲಬುರಗಿಯಲ್ಲಿರೋ ಇಎಸ್‌ಐಸಿ ವೈದ್ಯಕೀಯ ಸಂಕೀರ್ಣವನ್ನ ಏಮ್ಸ್ ಆಗಿ ಪರಿವರ್ತಿಸುವುದು, ಹೊಸ ಹೊದ್ದಾರಿ, ಈಗಿರುವ ಹುಮ್ನಾಬಾದ್‌- ಹುಬ್ಬಳ್ಳಿ ಹೆದ್ದಾರಿ ಚತುಷ್ಪಥ ಹೆದ್ದಾರಿಯನ್ನಾಗಿಸುವ ಯೋಜನೆ, ಕಲಬುರಗಿ ರೈಲ್ವೆ ವಿಭಾಗಿಯ ಕಚೇರಿ ಸೇರಿದಂತೆ ಹಲವು ರಂಗಗಳಲ್ಲಿ ಜನರ ನಿರೀಕ್ಷೆಗಳು ಬೆಟ್ಟದಷ್ಟಿದ್ದರೂ ಸಹ ಯಾವುದಕ್ಕೂ ಬಜೆಟ್‌ನಲ್ಲಿ ಸ್ಪಂದನೆಯೇ ದೊರಕದ್ದಕ್ಕೆ ಈ ಭಾಗದಲ್ಲಿ ಮೋದಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಕೇಂದ್ರ ಮಂಡಿಸಿರುವುದು ಬಜೆಟ್ ಹೊರತು ಚುನಾವಣೆ ಬಜೆಟ್ ಅಲ್ಲ: ಮಾಜಿ ಸಚಿವ ಎಸ್.ಎ.ರಾಮದಾಸ್

ರೇಲ್ವೆ ವಿಭಾಗೀಯ ಕಚೇರಿಗೆ ಚಿಲ್ಲರೆ ಕಾಸು:

2013ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಆಗಿನ ರೇಲ್ವೆ ಮಂತ್ರಿ ಡಾ. ಖರ್ಗೆ ಘೋಷಿಸಿದ್ದ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆಗೆ ಈ ಬಜೆಟ್‌ನಲ್ಲಿ 1 ಸಾವಿರ ರುಪಾಯಿ ನೀಡಲಾಗಿದೆ. 1 ಸಾವಿರ ಕೋಟಿ ರು. ಮೊತ್ತದ ಯೋಜನೆಗೆ ಈ ರೀತಿಯಲ್ಲಿ 3ನೇ ಬಾರಿಗೆ ಕೇಂದ್ರ ಚಿಲ್ಲರೆ ಕಾಸು ನೀಡುತ್ತ ಹಿಂದುಳಿದವರನ್ನು ಅಣುಕಿಸುತ್ತಿದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ.

ಈಗಾಗಲೇ ರಾಜ್ಯ ಸರ್ಕಾರ ವಿಭಾಗೀಯ ಕಚೇರಿಗೆ 20 ಎಕರೆ ಜಮೀನು ನೀಡಿದ್ದು ಅದಕ್ಕೆ 50 ಲಕ್ಷ ರು. ಮೌಲ್ಯದ ಬೇಲಿ ಹಾಕಲಾಗಿದೆ. ಅಲ್ಲೊಂದು ಫಲಕ ಬಿಟ್ಟರೆ ಇನ್ನಾವುದೇ ಪ್ರಗತಿ ಕಂಡಿಲ್ಲ. ಈಗ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಚಿಲ್ಲರೆ ಕಾಸು ನೀಡಿದ್ದರಿಂದ ಈ ಹಣದಲ್ಲಿ ಮಾಸಿ ಹೋಗಿರುವ ಫಲಕಕ್ಕೆ ಬಣ್ಣ ಬಳಿಯಲೂ ಆಗದು ಎಂದು ಜನ ಲೇವಡಿ ಮಾಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರದ ಯೋಜನೆ ನೋಡಿ ಬಿಜೆಪಿ ಕಲಿಯಬಹುದಿತ್ತು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಕಲಬುರ ಕೇಂದ್ರವಾಗಿರುವಂತೆ 1 ಸಾವಿರ ಕಿಮೀ ಉದ್ದದ ರೈಲು ಮಾರ್ಗ ಗುರುತಿಸಿ ಪ್ರತ್ಯೇಕ ವಿಭಾಗೀಯ ಕಚೇರಿ ರಚನೆಗೆ ಯೋಜನೆ ಸಿದ್ಧಗೊಂಡಿದ್ದು 1 ಸಾವಿರ ಕೋಟಿಯ ಈ ಯೋಜನೆ ಕಡತ ಅದಾಗಲೇ ರೇಲ್ವೆ ಸಚಿವಾಲಯದಲ್ಲಿದ್ದರೂ ಕ್ಯಾರೆ ಎನ್ನಲಾಗತ್ತಿಲ್ಲ. ಹೀಗಾಗಿ ಈ ಭಾಗದ ಜನ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ರಾಜಧಾನಿ ಬೆಂಗಳೂರಿಗೆ ಹೋಗಲು ಆಗದೆ ಪರದಾಡುವಂತಾಗಿದೆ.

ಏನಕೇನ ಕಾರಣಳನ್ನು ಹೇಳುತ್ತ ರೇಲ್ವೆ ಸಚಿವಾಲಯ ಈ ಭಾಗದ ಪ್ರಮುಖ ವಿಭಾಗೀಯ ಕಚೇರಿ ಬೇಡಿಕೆಯನ್ನ ಕಳೆದ 12 ವರ್ಷದಿಂದ ಮೂಲೆಗುಂಪು ಮಾಡಿದೆ. ಪ್ರವಾಸೋದ್ಯಮ, ರಸ್ತೆ ಜಾಲ, ಹೆದ್ದಾರಿ ಜಾಲದಲ್ಲಿಯೂ ಈ ಪ್ರದೇಶಗಳನ್ನು ಕಡೆಗಣಿಸಲಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನ ನಿರೀಕ್ಷೆಗಳಿದ್ದರೂ ಕೇಂದ್ರ ಸ್ಪಂದಿಸಿಲ್ಲವೆಂದು ಜನ ಅಸಮಾಧಾನ ಹೊರಹಾಕುತ್ತಿದ್ದಾರೆ.

click me!