ಮತ್ತೆ ಮುನ್ನಲೆಗೆ ಬಂದ ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರ ಬೇಡಿಕೆ..!

By Kannadaprabha NewsFirst Published Feb 2, 2024, 10:15 PM IST
Highlights

ಕೊಡಗು ಜಿಲ್ಲೆ ಈ ಹಿಂದೆ ಮಂಗಳೂರು- ಕೊಡಗು ಲೋಕಸಭಾ ಕ್ಷೇತ್ರವಾಗಿತ್ತು. ಬಳಿಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವಾಯಿತು. ಈ ಬಾರಿ ಕೊಡಗಿಗೆ ಪ್ರತ್ಯೇಕವಾಗಿ ಲೋಕಸಭಾ ಕ್ಷೇತ್ರ ಬೇಕು ಎಂಬುವುದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ.

ವಿಘ್ನೇಶ್‌ ಎಂ. ಭೂತನಕಾಡು

ಮಡಿಕೇರಿ(ಫೆ.02): ಕೊಡಗು ಜಿಲ್ಲೆಯನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನಾಗಿ ಮಾಡಬೇಕು ಎಂಬ ಕೂಗಿಗೆ ಅನೇಕ ದಶಕಗಳ ಇತಿಹಾಸವಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ. ಕೊಡಗು ಜಿಲ್ಲೆ ಈ ಹಿಂದೆ ಮಂಗಳೂರು- ಕೊಡಗು ಲೋಕಸಭಾ ಕ್ಷೇತ್ರವಾಗಿತ್ತು. ಬಳಿಕ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವಾಯಿತು. ಈ ಬಾರಿ ಕೊಡಗಿಗೆ ಪ್ರತ್ಯೇಕವಾಗಿ ಲೋಕಸಭಾ ಕ್ಷೇತ್ರ ಬೇಕು ಎಂಬುವುದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ.

2026ಕ್ಕೆ ಕೊಡಗಿಗೆ ಪ್ರತ್ಯೇಕ ಲೋಕಸಭೆ ಕ್ಷೇತ್ರ ಆಗುವ ನಿರೀಕ್ಷೆಯಿದೆ. ಇತ್ತೀಚೆಗೆ ಮಡಿಕೇರಿಯಲ್ಲಿ ಸಂಸದ ಪ್ರತಾಪ ಸಿಂಹ ಮಾತನಾಡಿ ಮುಂದಿನ ಬಾರಿ ಕೊಡಗು ಪ್ರತ್ಯೇಕ ಲೋಕಸಭೆ ಆಗಲಿದೆ ಎಂದಿದ್ದಾರೆ. ಕೊಡಗಿನಲ್ಲಿ 4.5 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಸುಮಾರು 6 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದೆ. ಆದ್ದರಿಂದ ಕೊಡಗು ಪ್ರತ್ಯೇಕ ಕ್ಷೇತ್ರದ ಬೇಡಿಕೆ ಹೆಚ್ಚಾಗಿದೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಹಾಲಿ ಇರುವ 28 ಕ್ಷೇತ್ರಗಳ ಪೈಕಿ 36 ಕ್ಷೇತ್ರ ಆಗುವ ಸಾಧ್ಯತೆಗಳಿದೆ ಎನ್ನಲಾಗುತ್ತಿದೆ.

ದೇಶ ತುಂಡರಿಸುವುದೇ ಕಾಂಗ್ರೆಸ್ ಸಂಸ್ಕೃತಿ: ಕೋಟ ಶ್ರೀನಿವಾಸ ಪೂಜಾರಿ

ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ಕೂಡ ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಆಗಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಕೊಡಗು ಪ್ರತ್ಯೇಕ ಕ್ಷೇತ್ರಕ್ಕೆ ಸರ್ಕಾರಕ್ಕೆ ಒತ್ತಡ ಹಾಕಬೇಕೆಂದು ಆಗ್ರಹಿಸಿದ್ದಾರೆ. ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ನಮ್ಮದೇ ಸರ್ಕಾರ ಇತ್ತು. ಆದ್ದರಿಂದ ಕೊಡಗಿಗೆ ಖಂಡಿತಾ ಕ್ಷೇತ್ರ ನೀಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒತ್ತಾಯಿಸಿದ್ದಾರೆ.

ಕೊಡಗು ಮಂಗಳೂರಿಗೆ ಸೇರ್ಪಡೆ: ಕೊಡಗು ಸರ್ಕಾರ ಅಸ್ತಿತ್ವದಲ್ಲಿದ್ದಾಗ 1952ರಲ್ಲಿ ಲೋಕಸಭೆಗೆ ನಿಡ್ಯಮಲೆ ಸೋಮಣ್ಣ ಆಯ್ಕೆಯಾದರು. 1962ರಿಂದ ಕೊಡಗು ಜಿಲ್ಲೆಯನ್ನು ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಳಿಸಲಾಯಿತು. 1967ರಲ್ಲಿ ಸಿ.ಎಂ. ಪೂಣಚ್ಚ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. 1971ರಲ್ಲಿ ಕೆ.ಕೆ. ಶೆಟ್ಟಿ ಆಯ್ಕೆಯಾದರು. 1977ರಿಂದ 1989ರ ವರೆಗೆ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಜನಾರ್ದನ ಪೂಜಾರಿ ಸಂಸದರಾಗಿದ್ದರು. 1991ರಿಂದ 1999ರ ವರೆಗೆ ಬಿಜೆಪಿಯ ಧನಂಜಯ್ ಕುಮಾರ್ ಆಯ್ಕೆಗೊಂಡರು.

2009ರಲ್ಲಿ ಮಂಗಳೂರಿನೊಂದಿಗೆ ಸೇರಿಕೊಂಡಿದ್ದ ಕೊಡಗು, ಮೈಸೂರಿನೊಂದಿಗೆ ವಿಲೀನವಾಗಿ ಲೋಕಸಭಾ ಕ್ಷೇತ್ರವಾಗಿ ರಚನೆಗೊಂಡಿತು. ಸಂಸದರಾಗಿ ಕಾಂಗ್ರೆಸ್ ನ ಚ್.ವಿಶ್ವನಾಥ್ ಆಯ್ಕೆಗೊಂಡರು. 2014 ಹಾಗೂ 2019ರಲ್ಲಿ ಬಿಜೆಪಿಯ ಪ್ರತಾಪ ಸಿಂಹ ಆಯ್ಕೆಗೊಂಡರು.

ಕೊಡಗು- ಮೈಸೂರು ಕ್ಷೇತ್ರದಲ್ಲಿ ಕೊಡಗಿನಲ್ಲಿ 2,27,339 ಪುರುಷ ಹಾಗೂ 2,36,059 ಮಹಿಳೆ, 16 ಇತರೆ ಒಟ್ಟು 4,63,414 ಮತದಾರರಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 13,31,772 ಪುರುಷ, 13,67,843 ಮಹಿಳೆ ಹಾಗೂ 220 ಇತರೆ ಸೇರಿ ಒಟ್ಟು 26,99,835 ಮಂದಿ ಮತದಾರರಿದ್ದಾರೆ.

ಕ್ಷೇತ್ರ ಆದರೆ ಲಾಭ ಹೆಚ್ಚು : ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರ ಆಗುವುದರಿಂದ ಜಿಲ್ಲೆಗೆ ಲಾಭ ಹೆಚ್ಚಿದೆ. ಜಿಲ್ಲೆಯವರಿಗೇ ಅಭ್ಯರ್ಥಿ ಸ್ಥಾನ ದೊರಕುವ ಸಾಧ್ಯತೆಗಳಿದೆ. ಅಲ್ಲದೆ ಸಂಸದರಿಗೆ ದೊರಕುವ ಅನುದಾನಗಳಿಂದ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಬಹುದಾಗಿದೆ. ಪ್ರತ್ಯೇಕವಾಗಿ ಕೊಡಗಿನ ಜನರ ಪರ ಲೋಕಸಭೆಯಲ್ಲಿ ಸಮಸ್ಯೆಗಳನ್ನು ಗಮನ ಸೆಳೆಯಲು ಅವಕಾಶ ದೊರಕಿದಂತಾಗುತ್ತದೆ. 

ನಾನು ಕೂಡ ಆಕಾಂಕ್ಷಿ : ಅಪ್ಪಚ್ಚು ರಂಜನ್

ಲೋಕಸಭಾ ಚುನಾವಣೆಗೆ ಕೆಲ ತಿಂಗಳುಗಳಷ್ಟೇ ಬಾಕಿ ಇದೆ. ಈಗಾಗಲೇ ಮೈಸೂರು- ಕೊಡಗು ಹಾಲಿ ಸಂಸದ ಪ್ರತಾಪ್ ಸಿಂಹ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ತಾನು ಕೂಡ ಈ ಬಾರಿ ಲೋಕಸಭಾ ಚುನಾವಣೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಈ ಕುರಿತು ರಾಜ್ಯ, ರಾಷ್ಟ್ರ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಅಪ್ಪಚ್ಚು ರಂಜನ್ ಹೇಳುತ್ತಾರೆ.

ಹಿಂದೂ ದೌರ್ಜನ್ಯ ವಿರುದ್ಧ ಸರ್ಕಾರಕ್ಕೆ ಜನರ ಪಾಠ: ಅಪ್ಪಚ್ಚು ರಂಜನ್

ಕೊಡಗಿನವರಿಗೆ ಆದ್ಯತೆ ನೀಡಬೇಕು ಎಂದು ನನ್ನ ಪರವಾಗಿ ಈಗಾಗಲೇ ಜಿಲ್ಲೆಯ ಬಿಜೆಪಿ ಪ್ರಮುಖರು ಮನವಿ ಮಾಡಿದ್ದಾರೆ. ಈ ಕುರಿತು ರಾಜ್ಯ- ರಾಷ್ಟ್ರ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ರಂಜನ್ ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಲೋಕಸಭಾ ಚುನಾವಣೆಯಲ್ಲಿ ಕೊಡಗಿನ ಅಭ್ಯರ್ಥಿಗಳಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ತಾನು ಆಕಾಂಕ್ಷಿಯಾಗಿದ್ದು, ತನಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ ಎಂದು ರಂಜನ್ ಹೇಳುತ್ತಾರೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಪ್ರತಿಕ್ರಿಯಿಸಿ, ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಯಿಂದ ಪ್ರತಾಪ ಸಿಂಹ ಅವರ ಬದಲು ಬೇರೆ ಅಭ್ಯರ್ಥಿಗೆ ಅವಕಾಶ ನೀಡಿದರೆ, ಕೊಡಗಿನವರಿಗೇ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಆದರೆ ಪಕ್ಷ ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

click me!