ಸರ್ಕಾರಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ 1000 ರು.ಬಹುಮಾನ ನೀಡುವ ಮೂಲಕ ಶಾಲೆಗೆ ಸೇರಲು ಪ್ರೋತ್ಸಾಹಿಸಲಾಗುತ್ತಿದೆ.
ವಿಘ್ನೇಶ್ ಎಂ.ಭೂತನಕಾಡು
ಮಡಿಕೇರಿ [ಸೆ.01]: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರೋತ್ಸಾಹಧನ ನೀಡುವ ಮೂಲಕ ಶಾಲೆಗೆ ಹೊಸ ವಿದ್ಯಾರ್ಥಿಗಳನ್ನು ಸೇರಿಸಲು ವಿರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯ ದಂಪತಿ ಮುಂದಾಗಿದ್ದಾರೆ. ಹೀಗಾಗಿ ಶಾಲೆಗೆ ದಾಖಲಾಗುವ ಹೊಸ ವಿದ್ಯಾರ್ಥಿಗಳಿಗೆ ತಲಾ 1000 ರು. ವಿತರಿಸುತ್ತಿದ್ದಾರೆ.
ಟಿ.ಶೆಟ್ಟಿಗೇರಿಯ ಮಾಯಣಮಾಡ ಮಂದಯ್ಯ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ದಾನಿಗಳಾದ ಮಾಯಣಮಾಡ ಎಂ.ಪೂಣಚ್ಚ-ಬೋಜಮ್ಮ ದಂಪತಿ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರೋತ್ಸಾಹಧನ ವಿತರಿಸುತ್ತಿದ್ದಾರೆ. ಕಳೆದ ವರ್ಷದಿಂದ ಈ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವ ದಂಪತಿ, ಹಿಂದಿನ ವರ್ಷ ಶಾಲೆಗೆ ದಾಖಲಾಗಿದ್ದ 35 ಹೊಸ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿದ್ದಾರೆ. ಈ ಬಾರಿ ಹೊಸದಾಗಿ ದಾಖಲಾದ 32 ವಿದ್ಯಾರ್ಥಿಗಳಿಗೆ ಅ.2ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರೋತ್ಸಾಹಧನ ವಿತರಿಸಲಿದ್ದಾರೆ.
ದಾನದ ಹಿನ್ನೆಲೆ:
2002ರಲ್ಲಿ ದಾನಿ, ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಮಾಯಣಮಾಡ ಪೂಣಚ್ಚ ಅವರು ತನ್ನ ತಂದೆ ಮಾಯಣಮಾಡ ಮಂದಯ್ಯ ಹೆಸರಿನಲ್ಲಿ 22 ಲಕ್ಷ ರು. ವೆಚ್ಚದಲ್ಲಿ ಶಾಲೆ ಸ್ಥಾಪನೆ ಮಾಡಿದ್ದರು. ದಾನಿ ಪೂಣಚ್ಚ ಅವರ ಪುತ್ರ ಪ್ರಶಾಂತ್ ಆಸ್ಪ್ರೇಲಿಯಾದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದು, ಅವರ ಸಲಹೆಯಂತೆ ಶಾಲೆಗೆ ಹೊಸದಾಗಿ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ರು.1000 ನೀಡಲಾಗುತ್ತಿದ್ದಾರೆ.
ಹೆಚ್ಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ನನ್ನ ತಂದೆಯ ಹೆಸರಿನಲ್ಲಿ ಸ್ಥಾಪಿಸಿದ ಶಾಲೆಯಲ್ಲಿ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ. ನಾನು ಬದುಕಿರುವವರೆಗೂ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತೇನೆ.
-ಮಾಯಣಮಾಡ ಎಂ.ಪೂಣಚ್ಚ, ಸರ್ಕಾರಿ ಪ್ರೌಢಶಾಲೆಯ ದಾನಿ, ಟಿ.ಶೆಟ್ಟಿಗೇರಿ.