ಕಂಬಳ, ಯಕ್ಷಗಾನ ಪ್ರವಾಸೋದ್ಯಮ: ಸಿ.ಟಿ.ರವಿ ಸೂಚನೆ

By Kannadaprabha NewsFirst Published Oct 1, 2019, 10:37 AM IST
Highlights

ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟಕಂಬಳ ಕ್ರೀಡೆ, ಯಕ್ಷಗಾನ ಇತ್ಯಾದಿಗಳನ್ನು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಕೆ ಮಾಡುವಂತೆ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಂದೆ ಕರಾವಳಿಯ ಸಂಸ್ಕೃತಿಯ ಭಾಗವಾದ ಯಕ್ಷಗಾನ ಹಾಗೂ ಕಂಬಳ ಪ್ರವಾಸೋದ್ಯಮದಲ್ಲಿಯೂ ಮಿಂಚಲಿದೆ.

ಮಂಗಳೂರು(ಅ.30): ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟಕಂಬಳ ಕ್ರೀಡೆ, ಯಕ್ಷಗಾನ ಇತ್ಯಾದಿಗಳನ್ನು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಕೆ ಮಾಡುವಂತೆ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿ, ಕರಾವಳಿಯ ವಿಶಿಷ್ಟಕಲೆ, ಜಾನಪದಗಳನ್ನು ಒಳಗೊಳಿಸಿಕೊಂಡರೆ ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ. ಕರಾವಳಿ ಉತ್ಸವ ಇವೆಲ್ಲವನ್ನೂ ಸೇರಿಸಬಹುದು. ಇದರ ಸಾಧ್ಯತೆಗಳ ಕುರಿತು ಸಮಗ್ರ ವರದಿ ತಯಾರಿಸಿ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

13 ಫ್ಲೋಟಿಂಗ್ ಜೆಟ್ಟಿ:

ಮಂಗಳೂರಿನಲ್ಲಿ 13 ಕಡೆ ನದಿ ತೀರದಲ್ಲಿ ಫ್ಲೋಟಿಂಗ್ ಜೆಟ್ಟಿನಿರ್ಮಿಸಿ ಸೂಕ್ತ ಮೂಲಸೌಕರ್ಯ ಕಲ್ಪಿಸಿದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಇಲಾಖೆ ಅಧಿಕಾರಿ ತಿಳಿಸಿದರು. ಈ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸಿದ ಬಳಿಕ ಖಾಸಗಿ ಸಹಭಾಗಿತ್ವದಲ್ಲಿ ಹೌಸ್‌ ಬೋಟ್‌, ಕ್ರೂಸ್‌ ರೆಸ್ಟೋರೆಂಟ್‌ ಇನ್ನಿತರ ಆಕರ್ಷಣೆಗಳನ್ನು ಕೈಗೊಳ್ಳಲು ಅವಕಾಶವಿದೆ. ಅದಕ್ಕಾಗಿ ಸಮಗ್ರ ಡಿಪಿಆರ್‌ ತಯಾರಿಸುವಂತೆ ಆದೇಶಿಸಿದರು.

ಸಾಂಸ್ಕೃತಿಕ ಭವನ:

ಜಿಲ್ಲೆಯಲ್ಲಿ 20 ಸಾಂಸ್ಕೃತಿಕ ಭವನಗಳ ಪೈಕಿ 17ಕ್ಕೆ ಜಾಗ ಮೀಸಲಿರಿಸಲಾಗಿದೆ. ಮೂರು ಭವನಗಳಿಗೆ ಜಾಗ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇನ್ನೊಂದು ತಿಂಗಳೊಳಗೆ ಜಾಗ ಸಿಗದೆ ಇದ್ದರೆ ಆ ಯೋಜನೆಯನ್ನು ರದ್ದುಗೊಳಿಸಿ ವಾಪಸ್‌ ಮಾಡಿ ಎಂದು ಸಚಿವರು ತಿಳಿಸಿದರು. ಬಂಟ್ವಾಳದಲ್ಲಿ 4.65 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಂಜೆ ಮಂಗೇಶ ರಾವ್‌ ಭವನ ಕಾಮಗಾರಿಗೆ ಇದುವರೆಗೆ 1.6 ಕೋಟಿ ರು. ಮಾತ್ರ ಬಿಡುಗಡೆಯಾಗಿದೆ. 3.34 ಕೋಟಿ ರು. ಬಾಕಿಯಿದೆ ಎಂದು ಅಧಿಕಾರಿ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ವಿಚಾರದಲ್ಲಿ ಗೊಂದಲ ಇಲ್ಲ: ಪ್ರಹ್ಲಾದ ಜೋಷಿ

ಸಸಿಹಿತ್ಲು ಬೀಚ್‌ನ್ನು ಅಂತಾರಾಷ್ಟ್ರೀಯ ಸರ್ಫಿಂಗ್‌ ತಾಣ ಮಾಡುವ ಚಿಂತನೆ ಎಂದು ಹೇಳಿದ ಸಿ.ಟಿ. ರವಿ, ದ.ಕ. ಜಿಲ್ಲೆಯಲ್ಲಿರುವ 16 ರಾಜ್ಯ ಮಟ್ಟದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಮಗ್ರ ವರದಿ ತಯಾರಿಸಿ ನೀಡಿದರೆ ಹಂತಹಂತವಾಗಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು. ಖಾಸಗಿ ಸಹಭಾಗಿತ್ವದಲ್ಲಿ ಸ್ಪೋರ ಪ್ರಮೋಷನ್‌ ಮಾಡಲು ವರದಿ ಸಲ್ಲಿಕೆ ಮಾಡುವಂತೆಯೂ ಅವರು ಸೂಚಿಸಿದರು.

ಮಂಗಳೂರು: ಬ್ಯಾಂಕ್‌ಗಳ ಗ್ರಾಹಕ ವ್ಯವಹಾರ ಸಮಯ ವಿಸ್ತರಣೆ

ಪ್ರವಾಸೋದ್ಯಮ ಸಬ್ಸಿಡಿ: ಪ್ರವಾಸೋದ್ಯಮ ಅಭಿವೃದ್ಧಿಗೆ ತ್ರೀಸ್ಟಾರ್‌, ಫೈವ್‌ ಸ್ಟಾರ್‌ ಹೊಟೇಲ್‌ಗಳು ಎಲ್ಲೆಲ್ಲಿ ಅಗತ್ಯವಿದೆ, ಎಂಬ ಬಗ್ಗೆ ಅಧ್ಯಯನ ವರದಿ ಸಲ್ಲಿಸಿ. ಅಲ್ಲಿ ಜಾಗ ಲಭ್ಯವಿದ್ದವರಿಗೆ ಹೊಟೇಲ್‌ ಆರಂಭಿಸಲು ಸಬ್ಸಿಡಿ ನೀಡಲಾಗುವುದು ಎಂದರು. ಶಾಸಕರಾದ ರಾಜೇಶ್‌ ನಾೖಕ್‌, ವೇದವ್ಯಾಸ ಕಾಮತ್‌, ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌, ಅಪರ ಜಿಲ್ಲಾಧಿಕಾರಿ ರೂಪಾ ಇದ್ದರು.

ಮಕ್ಕಳಿಗೆ ಗಾಂಧೀಜಿ ಮಾಹಿತಿ

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ದ.ಕ. ಜಿಲ್ಲೆಗೆ ಆಗಮಿಸಿದ್ದ ಜಾಗಗಳನ್ನು ಗುರುತಿಸಿ ಅವುಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಕೆ ಮಾಡಬಹುದು. ಈ ಜಾಗಗಳಲ್ಲಿ ಮಕ್ಕಳಿಗೆ ಗಾಂಧೀಜಿ ಆಗಮಿಸಿದ ಕುರಿತು, ಅವರ ಸ್ವಚ್ಛತೆ, ಸಾಮರಸ್ಯ, ಸರಳತೆ ಇತ್ಯಾದಿ ತತ್ವಗಳನ್ನು ತಿಳಿಹೇಳಬಹುದು ಎಂದು ಸಚಿವ ಸಿ.ಟಿ. ರವಿ ಸಲಹೆ ನೀಡಿದರು.

click me!