ನ್ಯೂಇಯರ್‌ ಸೆಲೆಬ್ರೆಷನ್‌: ಬೆಂಗ್ಳೂರಲ್ಲಿ 1000 ಕೋಟಿ ಹೊಸ ವರ್ಷ ವಹಿವಾಟು?

By Kannadaprabha News  |  First Published Dec 29, 2024, 9:00 AM IST

ಪಾರ್ಟಿ ಪ್ರಿಯರ ನೆಚ್ಚಿನ ನಗರಿ, ಪಬ್ ಕ್ಯಾಪಿಟಲ್ ಎಂದೂ ಹೆಸರಾಗಿರುವ ಬೆಂಗಳೂರು ಹೊಸ ವರ್ಷ ಆಚರಣೆಗೆ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದೇಶ ಸೇರಿ ದೇಶದ ನಾನಾ ಭಾಗಗಳಿಂದ ಬರುವ ಜನರು ಇಲ್ಲಿ ಅದ್ದೂರಿ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ನಗರದ ವಿವಿಧ ದರ್ಜೆಯ ಸ್ಟಾರ್ ಹೋಟೆಲ್, ಐಷಾರಾಮಿ ಹೊಟೆಲ್ ಬಗೆ ಬಗೆಯ ಕಾರ್ಯಕ್ರಮ ಆಯೋಜಿಸಿವೆ. 


ಬೆಂಗಳೂರು(ಡಿ.29):  ಸಂಭ್ರಮಾಚರಣೆ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಸಜ್ಜಾಗಿದ್ದು, ಡಿ.31 ಹಾಗೂ ಜ.1 ಎರಡೂ ದಿನ ಸೇರಿ ಬರೋಬ್ಬರಿ 1 ಸಾವಿರ ಕೋಟಿ ರು. ವಹಿವಾಟನ್ನು ನಗರದ ಆತಿಥ್ಯ ಉದ್ಯಮ ನಿರೀಕ್ಷೆ ಮಾಡಿದೆ. ಈಗಾಗಲೇ ನಗರದಲ್ಲಿ ಶೇ.80ರಷ್ಟು ಹೋಟೆಲ್, ಪಬ್, ರೆಸ್ಟೋರೆಂಟ್‌ಗಳ ಮುಂಗಡ ಬುಕ್ಕಿಂಗ್ ಹಾಗೂ ಟೇಬಲ್ ಬುಕ್ಕಿಂಗ್ ಆಗಿದೆ. ಹಾಗೆಯೇ ದರಗಳು ಕೂಡ ಶೇ. 10-20 ರಷ್ಟು ಅಧಿಕವಾಗಿವೆ. ಅಂತಿಮ ಕ್ಷಣಗಳಲ್ಲಿ ಈ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 

ಪಾರ್ಟಿ ಪ್ರಿಯರ ನೆಚ್ಚಿನ ನಗರಿ, ಪಬ್ ಕ್ಯಾಪಿಟಲ್ ಎಂದೂ ಹೆಸರಾಗಿರುವ ಬೆಂಗಳೂರು ಹೊಸ ವರ್ಷ ಆಚರಣೆಗೆ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದೇಶ ಸೇರಿ ದೇಶದ ನಾನಾ ಭಾಗಗಳಿಂದ ಬರುವ ಜನರು ಇಲ್ಲಿ ಅದ್ದೂರಿ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ನಗರದ ವಿವಿಧ ದರ್ಜೆಯ ಸ್ಟಾರ್ ಹೋಟೆಲ್, ಐಷಾರಾಮಿ ಹೊಟೆಲ್ ಬಗೆ ಬಗೆಯ ಕಾರ್ಯಕ್ರಮ ಆಯೋಜಿಸಿವೆ. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಪೀಟ್ ಸೇರಿ ಇಂದಿರಾನಗರ, ಕೋರಮಂಗಲ, ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಇತರ ಟೆಕ್ ಕಾರಿಡಾರ್‌ಗಳು ಪಾರ್ಟಿ ಮೂಡ್‌ಗೆ ತೆರೆದುಕೊಂಡಿವೆ. ಇದಲ್ಲದೆ ಕನಕಪುರ ರಸ್ತೆ, ಔಟರ್ ರಿಂಗ್ ರೋಡ್ ಸೇರಿ ನಗರದ ಹೊರವಲಯದ ಹೋಟೆಲ್, ಗೆಸ್ಟ್ ಹೌಸ್, ಹೋಂ ಸ್ಟೇ ಸೇರಿ ಇತರೆಡೆ ಖಾಸಗಿ ಪಾರ್ಟಿಗಳು ಜೋರಾಗಿ ನಡೆಯಲಿವೆ. 

Tap to resize

Latest Videos

ಹೊಸವರ್ಷಕ್ಕೆ ಅಯೋಧ್ಯೆ ಹೋಟೆಲ್‌ ಪೂರ್ತಿ ಬುಕ್‌: ದರ್ಶನ ಅವಧಿ ವಿಸ್ತರಣೆ

ಪಾರ್ಟಿಯಲ್ಲಿ ಬಗೆ ಬಗೆಯ ಸಂಭ್ರಮ: 

ಸೆಲೆಬ್ರಿಟಿ ಡಿಜೆ, ಹಾಲಿವುಡ್, ಬಾಲಿವುಡ್, ಪಂಜಾಬಿ, ಇಂಡಿಯನ್ ಪಾಪ್ ಮ್ಯೂಸಿಕ್, ಬೆಲ್ಲಿ ಡ್ಯಾನ್ ಲೈವ್ ಪರ್‌ಫಾರ್ಮೆನ್ಸ್ ಇದೆ. ಕ್ಯಾಂಪ್ ಫೈರ್ ಸೇರಿ ಓಪನ್ ಏರ್ ಪಾರ್ಟಿ, ಪೂಲ್‌ಸೈಡ್ ಪಾರ್ಟಿ, ರೈನ್ ಡ್ಯಾನ್ಸ್, ಫೈರ್ ಡ್ಯಾನ್ಸ್ ಆಯೋಜನೆ ಆಗಿದೆ. ಇದಕ್ಕಾಗಿ ಪ್ರಖ್ಯಾತ ತಾರೆಯರು, ಗಾಯಕರನ್ನು ಕರೆಸಿಕೊಳ್ಳಲಾಗುತ್ತಿದೆ. ಮಕ್ಕಳಿಗೆ ಪ್ರತ್ಯೇಕ ಝನ್ ಎಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ತಕ್ಕಂತೆ ಪತ್ಯೇಕ ಮೆನು ಕೂಡ ಇದೆ. ಅನಿಯಮಿತ ಆಹಾರ ಹಾಗೂ ಪಾನೀಯ ಸೇರಿದಂತೆ ವಿವಿಧ ಆಕರ್ಷಕ ಕೊಡುಗೆಗಳನ್ನೂ ನೀಡುತ್ತಿವೆ.

ವಿವಿಧ ಥೀಮ್‌ಗಳು

ಗ್ರಾಹಕರನ್ನು ಸೆಳೆಯಲೆಂದೇ ವಿವಿಧ ಹೊಟೆಲ್‌ಗಳು ಪಾರ್ಟಿಗಳನ್ನು ವಿಶಿಷ್ಟ ಥೀಮ್ ಅಡಿಯಲ್ಲಿ ಆಯೋಜಿಸಿ ಹೆಸರು ಕೊಟ್ಟಿವೆ. ಅನ್‌ಲಾಕ್ 2025, ದ ಡಾರ್ಕ್ ಅಫೇರ್, ದಿ ರಾಯಲ್ ಅಫೇರ್, ಲೈಟ್ಸ್ -ಡ್ರಿಂಕ್ಸ್-ಆ್ಯಕ್ಷನ್ಸ್, ಸ್ಟಾರ್ಕ್‌ಲಿಂಗ್ ನ್ಯೂ ಇಯರ್, ನ್ಯೂ ಇಯರ್ ಬ್ಯಾಶ್, ಕಿಕ್‌ ಸ್ಟಾರ್ಟ್ 2025, ಅಂಡರ್ ದಿ ಸ್ಟಾರ್ಸ್, ಹವಾಯಿ, ಬಾಲಿವುಡ್ ನೈಟ್ ಸೇರಿ ಬಗೆಬಗೆ ಹೆಸರಿಟ್ಟಿವೆ. ಬುಕ್ ಮೈ ಶೋ ಸೇರಿ ಹಲವು ಪ್ಲಾಟ್‌ ಫಾರ್ಮ್‌ಗಳಲ್ಲಿ ಇವುಗಳ ಟಿಕೆಟ್ ಇದ್ದು, ಆನ್‌ಲೈನ್ ಬುಕ್ಕಿಂಗ್ ಜೋರಾಗಿದೆ. 

ಕ್ಯಾಬ್ ವ್ಯವಸ್ಥೆಯೂ ಲಭ್ಯ: 

ಭದ್ರತೆಗೆ ಮಹಿಳಾ ಹಾಗೂ ಪುರುಷ ಬೌನ್ ರ್ ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ಪಾರ್ಟಿ ಬಳಿಕ ಸುರಕ್ಷಿತವಾಗಿ ಮನೆ ತಲುಪಿಸಲು ಕ್ಯಾಬ್ ವ್ಯವಸ್ಥೆಯೂ ಇದೆ. ಹೊಟೆಲ್‌ಗಳಲ್ಲಿ ತಂಗಲು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಹಲವೆಡೆ ವರ್ಷದೊಳಗಿನ ಮಕ್ಕಳಿಗೆ ಪಾರ್ಟಿ ಪ್ರವೇಶ ನಿರ್ಬಂಧಿಸಲಾಗಿದ್ದು, ಟಿಕೆಟ್ ಬುಕ್ಕಿಂಗ್ ವೇಳೆಯೆ ಈ ಮಾಹಿತಿ ಒದಗಿಸಲಾಗುತ್ತಿದೆ. 

ಪ್ರವಾಸ ಆಯೋಜನೆ: 

ಇದಲ್ಲದೆ ಹಲವು ಇವೆಂಟ್ ಆಯೋಜಕ ಕಂಪನಿಗಳು ಹೊಸ ವರ್ಷಕ್ಕೆ ವಿಶೇಷ ಪ್ರವಾಸವನ್ನೂ ಏರ್ಪಡಿಸಿವೆ. ಅಲ್ಲಿ ಕರೆದೊಯ್ದು ಪಾರ್ಟಿ ಆಯೋಜಿಸಿವೆ. ಗೋಕರ್ಣ ಬೀಚ್ ಪಾರ್ಟಿ, ನೈಟ್ ಕ್ಯಾಂಪ್ ಆಯೋಜಿಸಿವೆ. ಹೀಗೆ ಇತರೆಡೆಯೂ ಪ್ರವಾಸ, ಪಾರ್ಟಿ ನಡೆಯಲಿದೆ.

ಕಳೆದ ವರ್ಷಕ್ಕಿಂತ ದರ ಭಾರಿ ಏರಿಕೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಾರ್ಟಿ ಪ್ರವೇಶ, ಊಟೋ ಪಚಾರ, ವಸತಿ ವ್ಯವಸ್ಥೆ ದರ ಹೆಚ್ಚಾಗಿದೆ. ಡಿಲಕ್ಸ್, ಪ್ರಿಮಿಯಂ ಪಾರ್ಟಿ ಪ್ಯಾಕೇಜ್‌ಗಳನ್ನು ಪಬ್‌ ಗಳು, ಹೋಟೆಲ್ಗಳು ಘೋಷಿಸಿವೆ. ಒಬ್ಬರಿಗೆ ಈ 2ಸಾವಿರದಿಂದ 5 ಸಾವಿರ, ಜೋಡಿಗೆ 3 ಸಾವಿರದಿಂದ  8500 ದರ ನಿಗದಿ ಮಾಡಲಾಗಿದೆ. ಮುಂಗಡ ಬುಕ್ಕಿಂಗ್‌ಗೆ ಶೇ.30ರ ವರೆಗೆ ರಿಯಾಯಿತಿ ನೀಡುತ್ತಿವೆ. ಮಕ್ಕಳಿಗೆ ₹ 1000 ದಿಂದ ಆರಂಭವಾಗುತ್ತಿದ್ದು, ವಿಐಪಿ ಜೋಡಿಗೆ ವಸತಿ ಹಾಗೂ ಜ.1ರಂದು ಬೆಳಗ್ಗೆ ಉಪಾಹಾರ ಸೇರಿ 22 ರಿಂದ ₹30 ಸಾವಿರವರೆಗೆ ದರ ನಿಗದಿಸಲಾಗಿದೆ. ರಿಯಾಯಿತಿ ಪ್ಯಾಕೇಜ್‌ನ್ನೂ ಘೋಷಿಸಿವೆ. 

ಹೊಸ ವರ್ಷಕ್ಕೆ ಈ ಬಾರಿ ಆತಿಥ್ಯ ಕ್ಷೇತ್ರದಲ್ಲಿ 1000 ಕೋಟಿ ರುಪಾಯಿ ವಹಿವಾಟಿನ ನಿರೀಕ್ಷೆಯಿದೆ. ಫುಡ್, ಕಾಂಪ್ಲಿಮೆಂಟರಿ, ಆಯೋಜನೆ ವೆಚ್ಚವೂ ಅಧಿಕವಾಗಿರುವ ಕಾರಣ ದರ ಶೇ. 10ರಷ್ಟು ಹೆಚ್ಚಾಗಿದೆ. ಪಿ.ಸಿ.ರಾವ್ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ 

ಸರ್ಕಾರಕ್ಕೆ ₹400 ಕೋಟಿ ತೆರಿಗೆ 

ಹೋಟೆಲ್, ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ ಸುಮಾರು 1000 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ. 300-400 ಕೋಟಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಸಲ್ಲಿಕೆಯಾಗಲಿದೆ. ಕಳೆದ ವರ್ಷ ಸುಮಾರು 800 ಕೋಟಿ ವಹಿವಾಟಾಗಿದೆ. ಈ ಬಾರಿ ಆತಿಥ್ಯ ಉದ್ಯಮಕ್ಕೆ ಉತ್ತಮ ಆದಾಯ ಹರಿದುಬರುವ ನಿರೀಕ್ಷೆಯಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅವರು ತಿಳಿಸಿದ್ದಾರೆ.

ಡ್ರೋನ್‌ ಬಳಸಿ ಪೊಲೀಸರ ನಿಗಾ

ಬೆಂಗಳೂರು: ನಗರದಲ್ಲಿ ಹೊಸವರ್ಷಾಚರಣೆ ವೇಳೆ ಸಾರ್ವಜನಿಕರು, ಮಹಿಳೆಯರು ಮತ್ತು ಮಕ್ಕಳಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಲಾಗಿದೆ. ಯಾವುದೇ ಆಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ, ಬಿಎಂಆರ್‌ಸಿಎಲ್ ಹಾಗೂ ಇತರೆ ಇಲಾಖೆಗಳು ಮತ್ತು ಸಂಘ-ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು. 

ನಗರದಲ್ಲಿ ಪ್ರಮುಖವಾಗಿ ಹೊಸ ವರ್ಷಾಚರಣೆ ಮಾಡಲಾಗುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್‌ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ಸರ್ಕಲ್, ಕೋರಮಂಗಲ, ಫಿನಿಕ್ ಮಾಲ್, ಇಂದಿರಾ ನಗರ 100 ಅಡಿ ರಸ್ತೆ, ಪ್ರಮುಖ ಸ್ಟಾರ್ ಹೋಟೆಲ್‌ಗಳು, ಪಬ್-ಕ್ಲಬ್‌ಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ಪಿಕೇಟಿಂಗ್ ಪಾಯಿಂಟ್‌ಗಳನ್ನು ನೇಮಕ ಮಾಡುವುದಾಗಿ ಹೇಳಿದರು. 

2,572 ಅಧಿಕಾರಿಗಳು ಸೇರಿ 11,830 ಮಂದಿ ನಿಯೋಜನೆ: 

ವಿಶೇಷವಾಗಿ ಕೇಂದ್ರ ವಿಭಾಗದ ಬ್ರಿಗೇಡ್ ರಸ್ತೆ-ಎಂಜಿ ರಸ್ತೆ, ಒಪೆರಾ ಜಂಕ್ಷನ್, ರಿಚ್ಚಂಡ್ ರಸ್ತೆ, ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ $ ಡಿಸಿಪಿ, 18 ಎಸಿಪಿ, 41 ಮಂದಿ ಇನ್ಸ್‌ ಪೆಕ್ಟರ್ ಗಳು ಸೇರಿ ಒಟ್ಟು 2,572 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಇರುವ 'ಮಹಿಳಾ ಸುರಕ್ಷಾ ಸ್ಥಳ' ಗಳನ್ನು ತೆರೆಯಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ನಗರದಲ್ಲಿ ಬಂದೋಬಸ್‌ಗೆ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತ, 15 ಡಿಸಿಪಿ, 44 ಎಸಿಪಿ, 135 ಇನ್ಸ್‌ಪೆಕ್ಟರ್, 530 20, 655 22, 4,833 25/2, 1,048 ಮಹಿಳಾ ಸಿಬ್ಬಂದಿ, 597 ಮಪ್ತಿ ಸಿಬ್ಬಂದಿ, 3,170 ಗೃಹರಕ್ಷಕ ದಳದ ಸಿಬಂದಿ ಹಾಗೂ 800 ಸಿವಿಲ್ ಡಿಪೆನ್ ಸಿಬಂದಿ ಸೇರಿ ಒಟ್ಟು 11,830 ಪೊಲೀಸ್ ಅಧಿಕಾರಿಗಳು/ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೆ ಜತೆಗೆ 72 ಕೆಎಸ್‌ಆರ್‌ಪಿ ತುಕಡಿ ಹಾಗೂ 21 ಎಸಿಆರ್ ತುಕಡಿಯನ್ನು ಬಂದೋ ಬಸ್‌ಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು. 

ಕಿಯೋಸ್ಕ್‌, ವೀಕ್ಷಣಾ ಗೋಪುರ: 

ಆಯಾಕಟ್ಟಿನ ಪ್ರದೇಶ ಗಳಲ್ಲಿ ಪೊಲೀಸ್ ಕಿಯೋಸ್ಕ್‌ಗಳನ್ನು ತೆರೆದಿದ್ದು, ಮಕ್ಕಳು ಕಾಣೆಯಾದಲ್ಲಿ ಯಾವುದೇ ರೀತಿಯ ಕಳವು ಸಂಬಂಧ ದೂರುಗಳಿಗೆ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲಿ ಅವಶ್ಯ ಸೇವೆ ಪಡೆಯಬಹುದಾಗಿದೆ. ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದು, ಇದರಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಬೈನಾಕ್ಯುಲರ್ ಉಪಕರಣಗಳನ್ನು ನೀಡಲಾಗಿದೆ ಎಂದು ತಿಳಿಸಿದರು. 

ಹೊಸ ವರ್ಷ 2025: ಸಿಡ್ನಿಯಿಂದ ದುಬೈವರೆಗೆ 5 ಅತ್ಯುತ್ತಮ ತಾಣಗಳು

ಡ್ರೋನ್‌ ಸೇರಿ 817 ಸಿಸಿಟಿವಿ ಕಣ್ಣಾವಲು 

ಹೊಸ ವರ್ಷಾಚರಣೆ ನಡೆಯುವ ಪ್ರಮುಖ ಸ್ಥಳಗಳಲ್ಲಿ ಡಿ.31ರ ರಾತ್ರಿ ಡ್ರೋನ್‌ ಕ್ಯಾಮರಾಗಳ ಮೂಲಕ ನಿಗಾವಹಿಸಲಾಗುವುದು. ಹೆಚ್ಚುವರಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಜತೆಗೆ ಶಾನದಳ ಹಾಗೂ 16 ವಿಶೇಷ ತಂಡಗಳಿಂದ ತಪಾಸಣೆ ನಡೆಸಲಾಗುವುದು. ಹೆಚ್ಚಿನ ಜನದಟ್ಟಣೆ ಸೇರುವ ಪ್ರದೇಶಗಳಲ್ಲಿ 817 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. 63 ವಾಚ್ ಟವರ್, 114 ವುಮೆನ್ ಸೇಫ್ಟಿ ಐಸ್‌ಲ್ಯಾಂಡ್, 48 ಪೊಲೀಸ್ ಕಿಯೋಸ್ ಹಾಗೂ 54 ಹೆಲ್ ಸೆಂಟರ್ ತೆರೆಯುವುದಾಗಿ ಮಾಹಿತಿ ನೀಡಿದರು.

ಮಧ್ಯ ರಾತ್ರಿ 1 ಗಂಟೆವರೆಗೆ ಆಚರಣೆಗೆ ಅನುಮತಿ 

ರಾಜ್ಯ ಸರ್ಕಾರ ಮಧ್ಯರಾತ್ರಿ 1 ಗಂಟೆ ವರೆಗೆ ನಗರದಲ್ಲಿ ಸಾರ್ವಜನಿಕರು ಹೊಸ ವರ್ಷಾ ಚರಣೆಗೆ ಅನುಮತಿ ನೀಡಿದೆ. ಪಬ್ಳು ಮತ್ತು ರೆಸ್ಟೋರೆಂಟ್‌ಗಳು ಹೊಸ ವರ್ಷಾಚರಣೆ ನಿಮಿತ್ತ ಸದಸ್ಯರಗಳು ಹಾಗೂ ಆತಿಥಿಗಳಿಗೆ ಔತಣ ಕೂಟ/ ಇವೆಂಟ್‌ಗಳಿಗೆ ಅನುಮತಿ ನೀಡುವಾಗ ನಿಗದಿತ ಸಮಯದ ಮಿತಿ ಮೀರದಂತೆ ಪಾಸ್‌ಗಳನ್ನು ವಿತರಿಸಲು ಮಾಲೀಕರಿಗೆ ಸೂಚಿಸಲಾಗಿದೆ.

click me!