
ಬೆಂಗಳೂರು(ಡಿ.29): ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ಪ್ರಕರಣ ಸಂಬಂಧ ಶನಿವಾರ ನಂದಿನಿ ಲೇಔಟ್ ಠಾಣೆ ಪೊಲೀಸರು ಸ್ಥಳ ಮಹಜರು ನಡೆಸಿದರು.
ಶಾಸಕ ಮುನಿರತ್ನ ಅವರನ್ನು ಘಟನಾ ಸ್ಥಳಕ್ಕೆ ಕರೆತಂದು ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಘಟನೆ ಬಗ್ಗೆ ಮಾಹಿತಿ ನೀಡುವಾಗ ಮುನಿರತ್ನ ತಮ್ಮ ಮೇಲೆ ಆ್ಯಸಿಡ್ ತುಂಬಿದ ಮೊಟ್ಟೆಯಿಂದ ದಾಳಿ ಮಾಡಲಾಗಿದೆ ಎಂದು ವಿವರಿಸಿದರು. ಮಹಜರು ಪ್ರಕ್ರಿಯೆಯನ್ನು ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿಕೊಂಡರು.
ಮೊಟ್ಟೆ ದಾಳಿ, ಇದು ಮುನಿರತ್ನರದ್ದೇ ಚಿತ್ರಕತೆ, ಸಿಬಿಐ ತನಿಖೆಯಾಗಲಿ: ಡಿ.ಕೆ.ಸುರೇಶ್
ಪ್ರಕರಣದ ಹಿನ್ನೆಲೆ:
ಡಿ.25ರಂದು ಲಗ್ಗೆರೆ ಸಮೀಪದ ನಡೆದ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಕಾರ್ಯಕ್ರಮಕ್ಕೆ ಶಾಸಕ ಮುನಿರತ್ನ ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ತೆರಳುವಾಗ ಮುನಿರತ್ನ ತಲೆಗೆ ಮೊಟ್ಟೆ ದಾಳಿ ಮಾಡಲಾಗಿತ್ತು. ಈ ಸಂಬಂಧ ನಂದಿನಿ ಲೇಔಟ್ ಠಾಣೆ ಪೊಲೀಸರು ವಿಶ್ವನಾಥ, ಚಂದ್ರು, ಕೃಷ್ಣಮೂರ್ತಿ ಎಂಬುವವರನ್ನು ಬಂಧಿಸಿ ವಿಚಾರಣೆ ಮಾಡಿದ್ದರು.
ಈ ಘಟನೆ ಸಂಬಂಧ ಶಾಸಕ ಮುನಿರತ್ನ ತನ್ನ ಹತ್ಯೆಗೆ ಸಂಚು ರೂಪಿಸಿ ಆ್ಯಸಿಡ್ ತುಂಬಿದ ಮೊಟ್ಟೆಯಿಂದ ದಾಳಿ ಮಾಡಿದ್ದಾರೆಂದು ದೂರು ನೀಡಿದ್ದರು. ದೂರಿನಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಮತ್ತು ಕುಸುಮಾ ಹೆಸರು ಪ್ರಸ್ತಾಪಿಸಿದ್ದರು. ಈ ದೂರಿನ ಮೇರೆಗೆ ಸುಮಾರು 150 ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ಶಾಸಕ ಮುನಿರತ್ನ ಅವರ ಬೆಂಬಲಿಗರೇ ಗುಂಪು ಕಟ್ಟಿಕೊಂಡು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಪ್ರತಿ ದೂರು ಕೂಡ ನೀಡಲಾಗಿತ್ತು. ಇದೀಗ ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.