110 ಹಳ್ಳಿ ರಸ್ತೆ ಅಭಿವೃದ್ಧಿಗೆ 1,000 ಕೋಟಿ ನೆರವು: ಬಿಬಿಎಂಪಿ

By Kannadaprabha NewsFirst Published Jan 13, 2023, 12:05 PM IST
Highlights

1 ಸಾವಿರ ಕೋಟಿಯಲ್ಲಿ 110 ಹಳ್ಳಿ ರಸ್ತೆ ಉದ್ಧಾರ, ರಸ್ತೆಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಅನುದಾನ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್

ಬೆಂಗಳೂರು(ಜ.13): ಪಾಲಿಕೆಗೆ ಸೇರ್ಪಡೆಗೊಂಡಿರುವ 110 ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪ್ರತ್ಯೇಕವಾಗಿ 1 ಸಾವಿರ ಕೋಟಿ ಅನುದಾನ ನೀಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016-17ರಿಂದ ಈವರೆಗೆ ಸರ್ಕಾರ ನೀಡಿರುವ .24 ಸಾವಿರ ಕೋಟಿ ಪೈಕಿ .7 ಸಾವಿರ ಕೋಟಿ ಮಾತ್ರ ನಗರದಲ್ಲಿ ರಸ್ತೆ ಮತ್ತು ರಸ್ತೆಗುಂಡಿಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ಜಲ ಮಂಡಳಿಯಿಂದ 2 ಸಾವಿರ ಕಿ.ಮೀ. ಹಾಗೂ ಬೆಸ್ಕಾಂನಿಂದ 6 ಸಾವಿರ ಕಿ.ಮೀ. ರಸ್ತೆಗಳನ್ನು ಅಗೆಯಲಾಗಿದೆ. ಇವುಗಳ ಅಭಿವೃದ್ಧಿಗಾಗಿ ಹಣ ಖರ್ಚು ಮಾಡಲಾಗುತ್ತಿದೆ ಎಂದರು.

ನವನಗರೋತ್ಥಾನ ಸೇರಿ ಇತರ ಯೋಜನೆಗಳಡಿ ರಾಜ್ಯ ಸರ್ಕಾರ ನೀಡುವ ಅನುದಾನವನ್ನು ರಸ್ತೆ, ಶಾಲೆ, ಉದ್ಯಾನ, ಕೆರೆ ಮತ್ತು ಘನ ತ್ಯಾಜ್ಯ ಸೇರಿ ಬೇರೆ ಬೇರೆ ಕಾಮಗಾರಿಗಳಿಗೆ ವಿನಿಯೋಗಿಸಲಾಗುತ್ತಿದೆ. ಈ ವರ್ಷ ರಸ್ತೆ ಗುಂಡಿ ರಿಪೇರಿಗೆ ಮೀಸಲಿಟ್ಟಿರುವ .60 ಕೋಟಿ ಪೈಕಿ .18 ಕೋಟಿ ವ್ಯಯಿಸಲಾಗಿದೆ. ಕಳೆದ ವರ್ಷ ಅಂದಾಜು 40ರಿಂದ 50 ಕೋಟಿ ರು. ರಸ್ತೆ ಗುಂಡಿ ದುರಸ್ತಿಗೆ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಜ.15ರೊಳಗೆ 108 ವಾರ್ಡಲ್ಲಿ Namma Clinic ಆರಂಭ; ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

ಈಜೀಪುರ ಫ್ಲೈಓವರ್‌ ಪೂರ್ಣಕ್ಕೆ ಸಮಿತಿ ವರದಿ ಆಧಾರಿಸಿ ಟೆಂಡರ್‌

ಈಜೀಪುರ ಮೇಲ್ಸುತುವೆ ಕಾಮಗಾರಿ ನಿರ್ಮಾಣ ಸಂಬಂಧ ಕರೆದಿದ್ದ ಮೊದಲ ಟೆಂಡರ್‌ನಲ್ಲಿ ಯಾರೂ ಅರ್ಹತೆ ಪಡೆಯಲಿಲ್ಲ. ಎರಡನೇ ಟೆಂಡರ್‌ನಲ್ಲಿ ಒಬ್ಬರು ಮಾತ್ರ ಅರ್ಹತೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಟೆಂಡರ್‌ ನಿಯಮಗಳು ಸರಿ ಇದೆಯೇ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಕಾಮಗಾರಿ ವೆಚ್ಚವೂ .240 ಕೋಟಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಸಮಿತಿಯು ನಿಗದಿತ ವೆಚ್ಚಗಿಂತ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ ಇರುವುದರಿಂದ ಸರ್ಕಾರದಿಂದ ಅನುಮತಿ ಪಡೆಯುವಂತೆ ನಮಗೆ ತಾಕೀತು ಮಾಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯು ಟೆಂಡರ್‌ ನಿಯಮ, ಹಣ ವ್ಯತ್ಯಾಸ ಆಗಿರುವುದು ಸೇರಿ ಇತ್ಯಾದಿ ಪರಿಶೀಲಿಸಿ ನಮಗೆ ವರದಿ ನೀಡಿದ್ದು, ಅದರ ಆಧಾರದಲ್ಲಿ ಟೆಂಡರ್‌ ಕರೆಯಲಾಗುವುದು ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಗುತ್ತಿಗೆದಾರರಿಗೆ ಬಾಕಿ ಬಿಲ್‌ಗಳಿಗೆ ಹಣ ಪಾವತಿಸಲು ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಬಿಲ್‌ ಪಾವತಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿಯವರು ಅನುಮೋದನೆ ನೀಡಿದ ತಕ್ಷಣ 6 ತಿಂಗಳ ಅವಧಿಯೊಳಗೆ ಬಿಲ್‌ಗಳನ್ನು ಪಾವತಿಸಲಾಗುತ್ತದೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ತಿಳಿಸಿದ್ದಾರೆ. 

click me!