* ತಲಾ 50 ಸಾವಿರದಿಂದ 1 ಲಕ್ಷದ ವರೆಗೆ ಮಾರಲು ಬಿಎಂಟಿಸಿ ನಿರ್ಧಾರ
* ವಾಯುವ್ಯ ಸಾರಿಗೆಯಿಂದ ಬಸ್‌ಗೆ ಬೇಡಿಕೆ
* ಕಳೆದ ಎರಡು ವರ್ಷಗಳಿಂದ ಬಿಎಂಟಿಸಿಯಿಂದ ಬಸ್‌ಗಳನ್ನು ಖರೀದಿಸಿರಲಿಲ್ಲ
ಬೆಂಗಳೂರು(ಜೂ.21): ರಾಜಧಾನಿ ಬೆಂಗಳೂರು ನಗರದಲ್ಲಿ ಹಲವು ವರ್ಷಗಳ ಕಾಲ ಸಂಚರಿಸಿ ಹಳೆಯದಾಗಿರುವ ಹವಾ ನಿಯಂತ್ರಣ ರಹಿತ ಬಸ್‌ಗಳನ್ನು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ)ಕ್ಕೆ ತಲಾ 1 ಲಕ್ಷ ದರದಲ್ಲಿ 100 ಬಸ್‌ಗಳ ಮಾರಾಟಕ್ಕೆ ಬಿಎಂಟಿಸಿ ಸಿದ್ಧತೆ ಮಾಡಿಕೊಂಡಿದೆ.
ಕೊರೋನಾ ಕಾರಣದಿಂದ ನಷ್ಟದಲ್ಲಿ ನಡೆಯುತ್ತಿರುವ ವಾಯುವ್ಯ ಕೆಎಸ್ಸಾರ್ಟಿಸಿ ದಿನ ನಿತ್ಯದ ಕಾರ್ಯಚರಣೆಗೆ ಹಳೆಯ ಬಸ್‌ಗಳನ್ನು ಒದಗಿಸುವಂತೆ ಪತ್ರದ ಮೂಲಕ ಮನವಿ ಸಲ್ಲಿಸಿದೆ. ಇದರಿಂದ ಬಿಎಂಟಿಸಿಯಲ್ಲಿರುವ ಹಳೆಯ ಬಸ್‌ಗಳನ್ನು ರವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಈ ಬಸ್‌ಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Bengaluru: ಖಾಸಗೀಕರಣದತ್ತ ಬಿಎಂಟಿಸಿ ಸಾರಿಗೆ?: ಆಡಳಿತ ಮಂಡಳಿಯಿಂದ ಗಂಭೀರ ಚಿಂತನೆ
ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಪತ್ರ ಬರೆದಿರುವ ಸಂಬಂಧ ಇತ್ತೀಚೆಗೆ ನಡೆದ ಬಿಎಂಟಿಸಿ ಆಡಳಿತ ಮಂಡಳಿ ಸಭೆಯಲ್ಲಿ ಬಸ್ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ನಿಗಮದಲ್ಲಿ ಸುಸ್ಥಿತಿಯಲ್ಲಿರುವ ಹಳೆಯ ಬಸ್‌ಗಳನ್ನು ಉಚಿತವಾಗಿ ನೀಡುವ ಬದಲಾಗಿ ಕನಿಷ್ಠ ಮಟ್ಟದ ಶುಲ್ಕ ಪಡೆದು ಬಸ್‌ಗಳನ್ನು ಹಸ್ತಾಂತರಿಸಲು ಮಂಡಳಿ ಸಭೆ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ವಿವರಿಸಿದರು.
ಈಗಾಗಲೇ ಹಳೆಯದಾಗಿರುವ 200 ಬಸ್‌ಗಳನ್ನು ಗುಜರಿಗೆ ಕಳುಹಿಸಿಲು ಸಂಸ್ಥೆ ನಿರ್ಧರಿಸಿದೆ. ಹಳೆಯ ಬಸ್‌ಗಳನ್ನು ಗುಜರಿಗೆ ಕಳುಹಿಸಿದಲ್ಲಿ ಕನಿಷ್ಠ .2 ಲಕ್ಷದ ವರೆಗೂ ಹಣ ಸಿಗಲಿದೆ. ಅಂತಹ ಬಸ್‌ಗಳನ್ನು ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿಗೆ ಉಚಿತವಾಗಿ ನೀಡುವ ಬದಲಾಗಿ ಪ್ರತಿ ಬಸ್‌ಗೆ .50 ಸಾವಿರದಿಂದ .1 ಲಕ್ಷದವರೆಗೂ ನೀಡುವಂತೆ ಮನವಿ ಮಾಡಲಾಗುವುದು. ಬೆಲೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ಬೆಲೆ ನಿಗದಿ ಮಾಡಲಾಗುವುದು ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.
ಬಿಎಂಟಿಸಿ ಸೇರಿದಂತೆ ಇತರೆ ಸಾರಿಗೆ ಬಸ್‌ಗಳನ್ನು 9 ಲಕ್ಷ ಕಿಲೋಮೀಟರ್ ಮತ್ತು 11 ವರ್ಷದವರೆಗೂ ಕಾರ್ಯಚರಣೆ ಮಾಡಿಸಬಹುದಾಗಿದೆ. ಆ ನಂತರದಲ್ಲಿ ಹಳೆಯ ಬಸ್‌ಗಳು ಎಂದು ಪರಿಗಣಿಸಿ ಗುಜರಿಗೆ ಕಳುಹಿಸಲಾಗುತ್ತದೆ. 11 ವರ್ಷದಿಂದ ಕಾರ್ಯಚರಣೆ ಮಾಡಿರುವ ಕೆಲವು ಬಸ್‌ಗಳ ಎಂಜಿನ್ ಇಂದಿಗೂ ಸುಸ್ಥಿತಿಯಲ್ಲಿದ್ದು, ಮತ್ತಷ್ಟುವರ್ಷ ಕಾರ್ಯಚರಣೆ ಮಾಡಬಹುದಾಗಿದ್ದು, ಇಂತಹ ಬಸ್‌ಗಳನ್ನು ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ಬಾಗಲಕೋಟೆ: ವಾಯವ್ಯ ಸಾರಿಗೆಗೆ ಗುಜರಿ ಬಸ್ ಖರೀದಿಸಿದ್ರೆ ಕರವೇಯಿಂದ ಉಗ್ರ ಹೋರಾಟ
ಕೊರೋನಾದಿಂದ ಉಂಟಾಗಿದ್ದ ಅರ್ಥಿಕ ನಷ್ಟದ ಪರಿಣಾಮ ಕಳೆದ ಎರಡು ವರ್ಷಗಳಿಂದ ಬಿಎಂಟಿಸಿಯಿಂದ ಬಸ್‌ಗಳನ್ನು ಖರೀದಿಸಿರಲಿಲ್ಲ. ಆದರೆ, ಫೇಮ್-2 ಯೋಜನೆಯಲ್ಲಿ ಈಗಾಗಲೇ 80 ಎಲೆಕ್ಟ್ರಿಕ್ ಬಸ್‌ಗಳು ಮತ್ತು ಆಗಸ್ಟ್ ಅಂತ್ಯದ ವೇಳೆ ಇನ್ನೂ 300 ಬಸ್‌ಗಳನ್ನು ಬಿಎಂಟಿಸಿ ವ್ಯಾಪ್ತಿಗೆ ಬರಲಿದ್ದು, ಪ್ರಸ್ತುತ 6700 ಬಸ್‌ಗಳಿವೆ ಎಂದು ಅವರು ವಿವರಿಸಿದರು.
ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿಯಿಂದ ಹಳೆಯ ಬಸ್‌ಗಳು ಬೇಕಾಗಿದೆ ಎಂಬುದಾಗಿ ಮನವಿ ಬಂದಿದೆ. ಬಿಎಂಟಿಸಿಯಲ್ಲಿರುವ ಹಳೆಯ ಬಸ್‌ಗಳನ್ನು ಕನಿಷ್ಠ ಬೆಲೆ ಪಡೆದು ಹಸ್ತಾಂತರಿಸಲು ನಿಗಮದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಅಂತ ಮುಖ್ಯ ಯಾಂತ್ರಿಕ ಎಂಜಿನಿಯರ್ ಎಂ.ಎನ್.ಶ್ರೀನಿವಾಸ್ ತಿಳಿಸಿದ್ದಾರೆ.