ಗ್ರಾಮದಲ್ಲಿ ಮೂರು ಡೆಂಘೀ ಪ್ರಕರಣ ಪತ್ತೆ| 3-4 ದಿನಗಳಿಗೊಮ್ಮೆ ನೀರು ಪೂರೈಕೆ, ಸಂಗ್ರಹಿಸಿಡುವ ಜನ| ಸ್ವಚ್ಛತೆಗೆ ಕೈ ಜೋಡಿಸಿದ ಯುವಕ ಸಂಘಟನೆ| ಫಾಗಿಂಗ್ ಮತ್ತು ಬ್ಲೀಚಿಂಗ್ ಪುಡಿಯನ್ನು ಸಿಂಪಡಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿರುವ ಗ್ರಾಮ ಪಂಚಾಯಿತಿ|
ಹೂವಿನಹಡಗಲಿ(ಅ.09): ತಾಲೂಕಿನ ಹ್ಯಾರಡ ಗ್ರಾಮದಲ್ಲಿ 3 ಡೆಂಘೀ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಬಾಲಕಿಯೊಬ್ಬಳು ಬಲಿಯಾಗಿರುವ ಘಟನೆ ಜರುಗಿದೆ.
ಗ್ರಾಮದ ವಿಜಯಕುಮಾರಿ ಕರ್ಜಿಗಿ (10) ಮೃತ ಬಾಲಕಿಯಾಗಿದ್ದು, ಒಂದು ವಾರದ ಹಿಂದೆ ಡೆಂಘೀ ಕಾಣಿಸಿಕೊಂಡಿತ್ತು. ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಜತೆಗೆ ಅದೇ ಗ್ರಾಮದ ಪ್ರಣೀತ (7) ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾಳೆ. ಮತ್ತೊಬ್ಬ ಬಾಲಕಿ ಅನುಪಮಾ (14) ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.
ಕಳೆದ ವಾರ ಗ್ರಾಮದ ಹೊರವಲಯದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿತ್ತು. ಕೂಡಲೇ ಪಂಚಾಯಿತಿ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ. ಗ್ರಾಮಕ್ಕೆ 3-4 ದಿನಗಳಿಗೊಮ್ಮೆ ನೀರು ಸರಬರಾಜುರಾಗುತ್ತಿದ್ದು, ಜನ ಕುಡಿಯುವ ನೀರನ್ನು ಸಂಗ್ರಹಿಸಿಕೊಳ್ಳುತ್ತಾರೆ. ಸ್ವಚ್ಛ ನೀರಿನಲ್ಲೇ ಸೊಳ್ಳೆ ಉತ್ಪತ್ತಿಯಾಗಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ.
ಮುಂಜಾಗ್ರತಾ ಕ್ರಮವಾಗಿ ಪಂಚಾಯಿತಿ ಆಡಳಿತ ಆಗಾಗ ಫಾಗಿಂಗ್ ಮತ್ತು ಬ್ಲೀಚಿಂಗ್ ಪುಡಿಯನ್ನು ಸಿಂಪಡಿಸಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ. ಆದರೂ ಸೊಳ್ಳೆಗಳ ಕಾಟ ತಪ್ಪಿಲ್ಲ. ಡೆಂಘೀ ಕಾಣಿಸಿಕೊಂಡಿದ್ದು, ಗ್ರಾಮದ ಪ್ರಜ್ಞಾವಂತ ಯುವ ವೇದಿಕೆ, ಭಗತ್ ಸಿಂಗ್ ಯುವಕ ಸಂಘ, ತಿಲಕ್ ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ.
ನಿರಂತರವಾಗಿ ಜ್ವರ ಕಾಡ್ತಾ ಇದ್ಯಾ? ಡೆಂಗ್ಯೂ ಆಗಿರಬಹುದು, ಪರೀಕ್ಷಿಸಿಕೊಳ್ಳಿ
ಹ್ಯಾರಡ ಗ್ರಾಮದ ಕೆರೆಯ ಪಕ್ಕದಲ್ಲಿ ಸ್ವಚ್ಛತೆ ಮಾಡಿ ಸುತ್ತಮುತ್ತ ಬ್ಲೀಚಿಂಗ್ ಪುಡಿ ಸಿಂಪಡಿಸುತ್ತೇವೆ. ಮಳೆ ಬಂದಾಗ ಗ್ರಾಮದಲ್ಲಿರುವ ಸಣ್ಣ ಪುಟ್ಟಗುಂಡಿಗಳನ್ನು ಮುಚ್ಚಲು ಕ್ರಮ ವಹಿಸುತ್ತೇವೆ. ಆಗ ಮಳೆ ನೀರು ಹರಿದು ಹೋಗುವುದರಿಂದ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗುತ್ತದೆ ಎಂದು ಹ್ಯಾರಡ ಪಿಡಿಒ ಕೋಟೆಪ್ಪ ಹೇಳಿದರು.
ಕೊರೋನಾ ಭಯದಲ್ಲಿರುವ ಗ್ರಾಮಸ್ಥರಿಗೆ ಈಗ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಕೂಡಲೇ ಆರೋಗ್ಯ ಹಾಗೂ ಪಂಚಾಯಿತಿ ಇಲಾಖೆಗಳು ಸೂಕ್ತ ಕ್ರಮ ವಹಿಸಬೇಕಿದೆ. ಜತೆಗೆ ಇಲಾಖೆ ಅಧಿಕಾರಿಗಳಿಗೆ ಜನರ ಕೂಡ ಸಹಕಾರ ನೀಡಬೇಕಿದೆ ಎಂದು ಎಐಟಿಯುಸಿ ಮುಖಂಡ ಶಾಂತರಾಜ ಜೈನ್ ಹ್ಯಾರಡ ಹೇಳಿದರು.
ಹ್ಯಾರಡದಲ್ಲಿ ಡೆಂಘೀಗೆ ಸಂಬಂಧಪಟ್ಟಂತೆ 3 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬಾಲಕಿಯೊಬ್ಬಳು ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇಬ್ಬರ ಬಾಲಕಿಯರು ಚೇತರಿಸಿಕೊಂಡಿದ್ದಾರೆ. ಸೊಳ್ಳೆ ನಿಯಂತ್ರಣ ಹಾಗೂ ಸ್ವಚ್ಛತೆ, ಫಾಗಿಂಗ್‌ಗೆ ಕ್ರಮ ಕೈಗೊಳ್ಳುವಂತೆ ಗ್ರಾಪಂಗೆ ಪತ್ರ ಬರೆಯಲಾಗಿದೆ ಎಂದು ಹ್ಯಾರಡ ಉಪ ಆರೋಗ್ಯ ಕೇಂದ್ರದ ವೈದ್ಯ ಡಾ. ಶ್ರೀನಿವಾಸ್ ತಿಳಿಸಿದ್ದಾರೆ.