ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ಗೆ ಟಿಕೆಟ್ ಫಿಕ್ಸ್| ಕಾಂಗ್ರೆಸ್‌ನಲ್ಲಿ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ, ಜೆಡಿಎಸ್‌ನಿಂದ ನಿರಾಸಕ್ತಿ| ಮಸ್ಕಿ ಕ್ಷೇತ್ರದಲ್ಲಿ ಇಲ್ಲಿವರೆಗೆ ನಡೆದಿರುವ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆಯೇ ನೇರ ಹಣಾಹಣಿ| ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ|
ರಾಮಕೃಷ್ಣ ದಾಸರಿ
ರಾಯಚೂರು(ಅ.09): ಜಿಲ್ಲೆಯ ಮಸ್ಕಿ ಉಪಚುನಾವಣೆ ಘೋಷಣೆಗೂ ಮುನ್ನವೇ ಕಾವು ಪಡೆದುಕೊಳ್ಳುತ್ತಿದೆ, ಬಿಜೆಪಿಯಿಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇನ್ನು ಉಪಚುನಾವಣೆ ವಿಚಾರದಲ್ಲಿ ಜೆಡಿಎಸ್ ನಿರಾಸಕ್ತಿ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
undefined
ಕಳೆದ 2018 ರ ವಿಧಾನಸಭಾ ಮಸ್ಕಿ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದ ಆರ್.ಬಸನಗೌಡ ತುರವಿಹಾಳ ಅವರನ್ನು ಕೇವಲ 213 ಮತಗಳ ಅಂತರದಲ್ಲಿ ಸೋಲಿಸಿ ಹ್ಯಾಟ್ರಿಕ್ ಗೆಲವು ಸಾಧಿಸಿ ಮೂರನೇ ಬಾರಿ ಶಾಸಕರಾಗಿದ್ದರು. ಒಂದೂವರೆ ವರ್ಷದ ನಂತರ 17 ಜನ ಶಾಸಕರೊಂದಿಗೆ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಅಲ್ಲಿಂದ ಇಲ್ಲಿ ತನಕ ಮಸ್ಕಿ ಉಪಚುನಾವಣೆ ಘೋಷಣೆಗಾಗಿ ಕಾದು ಕುಳಿತಿರುವ ರಾಜಕೀಯ ಪಕ್ಷಗಳು ಮತ್ತೊಮ್ಮ ತಮ್ಮ ಬಲಾಬಲವನ್ನು ತೋರಿಸಲು ಆಸಕ್ತಿವಹಿಸಿವೆ.
ಗೌಡರು ಫುಲ್ ಬ್ಯೂಸಿ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ, ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗದಂತೆ ಜಾಗೃತಿವಹಿಸಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಪರ ಗಾಳಿ ಬಿರುಸಾಗಿ ಬೀಸುತ್ತಿದ್ದು, ಕೇಂದ್ರ-ರಾಜ್ಯ ಸರ್ಕಾರದ ಶಕ್ತಿ ಬಳಸಿಕೊಂಡು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ನೀಲನಕ್ಷೆಯನ್ನಿಟ್ಟುಕೊಂಡು ಪ್ರತಾಪಗೌಡ ಪಾಟೀಲ್ ಅವರು ಬೈ ಎಲೆಕ್ಷನ್ ತಯಾರಿಯಲ್ಲಿ ತೊಡಗಿದ್ದು, ಆ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ಬಿರುಸಿನ ಸಂಚಾರ, ನಿರಂತರವಾಗಿ ಬೆಂಗಳೂರಿಗೆ ತೆರಳಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬಿಸಿಯಾಗಿದ್ದಾರೆ.
ಮಸ್ಕಿ ಬೈಎಲೆಕ್ಷನ್: ದಿನಾಂಕ ನಿಗದಿ ಮುನ್ನವೇ ಕಾಂಗ್ರೆಸ್- ಬಿಜೆಪಿಯಿಂದ ಭರ್ಜರಿ ಪ್ರಚಾರ..!
ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ದೊಡ್ಡದು:
ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳ ಬಲದೊಂದಿಗೆ ಕಣಕ್ಕಿಳಿಯುತ್ತಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಡಿಚ್ಚಿಹೊಡೆಯುವಂತಹ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ನಿರತವಾಗಿದೆ. ಈಗಾಗಲೇ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯು ದೊಡ್ಡದಾಗಿದೆ. ಸುಮಾರು ಐದರಿಂದ ಆರು ಜನರು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಆರ್.ಬಸನಗೌಡ ತುರವಿಹಾಳ ಅವರು ಕಮಲಕ್ಕೆ ಟಾಟಾ ಹೇಳಿ ಕೈ ಕುಲುಕುವ ಸಾಧ್ಯತೆಗಳಿರುವುದರ ಬಗ್ಗೆ ಕ್ಷೇತ್ರದಲ್ಲಿ ಬಿಸಿ ಚರ್ಚೆ ಸಾಗಿದೆ. ಬಸನಗೌಡ ಜೊತೆಗೆ ತಿಮ್ಮಯ್ಯ ನಾಯಕ, ರಾಘವೇಂದ್ರ ನಾಯಕ, ಆದೇಶ ನಾಯಕ ಮತ್ತು ದೂರದ ಕೂಡ್ಲಗಿಯ ಲೋಕೇಶ ನಾಯಕ ಅವರು ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುವವರ ಲೀಸ್ಟಿನಲ್ಲಿದ್ದಾರೆ.
ಜೆಡಿಎಸ್ ನಿರಾಸಕ್ತಿ:
ಮಸ್ಕಿ ಕ್ಷೇತ್ರದಲ್ಲಿ ಇಲ್ಲಿವರೆಗೆ ನಡೆದಿರುವ ಮೂರು ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆಯೇ ನೇರ ಹಣಾಹಣಿಯಾಗಿದ್ದರಿಂದ ಮುಂಚೆಯಿಂದಲೂ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ರಾಜಾ ಸೋಮನಾಥ ನಾಯಕ ಅವರು ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಇದೀಗ ಉಪಚುನಾವಣೆ ಘೋಷಣೆಯ ಹೊಸ್ತಿಲು ಸಮೀಪಿಸುತ್ತಿದ್ದರೂ ಜೆಡಿಎಸ್ ನಿರಾಸಕ್ತಿ ತೋರುತ್ತಿರುವುದು ಎದ್ದು ಕಾಣುತ್ತಿದೆ.
ಮಸ್ಕಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಐದಾರು ಜನ ಆಕಾಂಕ್ಷಿಗಳು ಮುಂದೆ ಬಂದಿದ್ದಾರೆ. ಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು, ಹಿರಿಯ ನಾಯಕರು ಮತ್ತು ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸಿ ಸೂಕ್ತ ಸಮಯಕ್ಕೆ ಸೂಕ್ತ ಅಭ್ಯರ್ಥಿಗೆ ಪಕ್ಷವು ಟಿಕೆಟ್ ನೀಡಿ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.