* ಸಂಜೆ ವರೆಗೆ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ದೇವಿಯ ದರ್ಶನ
* ಕಳೆದ 15 ದಿನಗಳಿಂದ ಶ್ರೀಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧ
* ಕೋವಿಡ್ ಬಂದ ಬಳಿಕ ನಾಲ್ಕನೇ ಬಾರಿ ದೇವಸ್ಥಾನವನ್ನು ಬಂದ್
ಮುನಿರಾಬಾದ್(ಫೆ.02): ಕೊರೋನಾ(Coronavirus) ಮೂರನೇ ಅಲೆ ಹಿನ್ನೆಲೆ ಕಳೆದ 15 ದಿನಗಳಿಂದ ಹುಲಗಿಯ ಶ್ರೀಹುಲಿಗೆಮ್ಮ ದೇವಸ್ಥಾನಕ್ಕೆ(Huligemma Temple) ಭಕ್ತರ ಪ್ರವೇಶ ನಿರ್ಬಂಧಿಸಿದ್ದ ಜಿಲ್ಲಾಡಳಿತ ಮಂಗಳವಾರದಿಂದ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅಮಾವಾಸ್ಯೆಯ ದಿನದಂದು 10 ಸಾವಿರಕ್ಕೂ ಅಧಿಕ ಭಕ್ತರು(Devotees) ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.
ಮಂಗಳವಾರ ಬೆಳಗ್ಗೆ ಅಮ್ಮನವರಿಗೆ ಅಭಿಷೇಕ, ಅಲಂಕಾರ ಹಾಗೂ ಸುಪ್ರಭಾತದ ನಂತರ ಬೆಳಗ್ಗೆ 6 ಗಂಟೆ ವೇಳೆಗೆ ಭಕ್ತರಿಗೆ ಅಮ್ಮನವರ ದರ್ಶನ ಮಾಡಲು ದೇವಸ್ಥಾನ ಮುಖ್ಯದ್ವಾರ ತೆರೆಯಲಾಯಿತು. ಸಂಜೆ ವರೆಗೆ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಣ ಅಧಿಕಾರಿ ಅರವಿಂದ ಸುತ್ತಗಟ್ಟಿ ಮಾಹಿತಿ ನೀಡಿದ್ದಾರೆ.
ಮುಜರಾಯಿ ದೇವಸ್ಥಾನದಲ್ಲಿಯೇ ಮೌಢ್ಯಾ : ಅಗ್ನಿಕುಂಡ ಹಾಯುವಾಗ ಕೋಳಿ ತೂರಿದ ಪೂಜಾರಿ
ಕೋವಿಡ್(Covid-19) ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಜ. 15ರಿಂದ 31ರ ವರೆಗೆ (17 ದಿನ ) ಭಕ್ತರ ದರ್ಶನವನ್ನು ನಿಷೇಧಿಸಿತ್ತು. ಕೋವಿಡ್ ಬಂದ ಬಳಿಕ ನಾಲ್ಕನೇ ಬಾರಿ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ಜ. 17ರಂದು ಬಣದ ಹುಣ್ಣಿಮೆಯಂದು ದೇವಸ್ಥಾನದ ಬಾಗಿಲು ಬಂದ್ ಮಾಡಿದ್ದರೂ ದೇವಿಯ ದರ್ಶನಕ್ಕೆ ಸುಮಾರು 70ರಿಂದ 80 ಸಾವಿರ ಭಕ್ತರು ಆಗಮಿಸಿದ್ದರು. ಅಮ್ಮನವರ ವಾರವಾದ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಗಾಳಿಗೆ ತೂರಿದ ಕೋವಿಡ್ ನಿಯಮಾವಳಿ: ಹುಲಿಗೆಮ್ಮ ದೇವಿ ದರ್ಶನಕ್ಕೆ ಲಕ್ಷಾಂತರ ಭಕ್ತರು..!
ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಸುಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಕಳೆದ ವರ್ಷದ ಜು.27 ರಂದು ಭಕ್ತಸಾಗರವೇ ಹರಿದು ಬಂದಿತ್ತು. ಸುಮಾರು ಒಂದು ಲಕ್ಷ ಜನರು ದೇವಿಯ ದರ್ಶನ ಪಡೆದಿದ್ದರು ಎಂದು ಅಂದಾಜಿಸಲಾಗಿತ್ತು.
ಕೋವಿಡ್ ಲಾಕ್‌ಡೌನ್ ಬಳಿಕ ಮೊದಲ ಬಾರಿಗೆ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಹುಲಿಗೆಮ್ಮ ದೇವಿ ದರ್ಶನಕ್ಕೆ ಜನರು ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಕೋವಿಡ್ ನಿಯಮಾವಳಿ ಪಾಲನೆ ಆಗಿರಲಿಲ್ಲ. ಭಕ್ತರು ನದಿಗೆ ಇಳಿದು ಪ್ರವಾಹದ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಸ್ನಾನ ಮಾಡಿದ್ದರು.
ಮುಂಜಾನೆಯಿಂದಲೇ ಭಕ್ತರು ಪಾಳಿಯಂತೆ ದೇವಾಲಯಕ್ಕೆ ಆಗಮಿಸುತ್ತಿದ್ದರು. ದೇವಾಲಯದ ಆಡಳಿತ ಮಂಡಳಿಗೂ ಸಹ ಇಷ್ಟೊಂದು ಜನರು ಆಗಮಿಸುವ ನಿರೀಕ್ಷೆ ಇರಲಿಲ್ಲ. ಬಹುತೇಕ ಭಕ್ತರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವೂ ಇರಲಿಲ್ಲ. ದೇಗುಲದ ಸಿಬ್ಬಂದಿ, ಆಡಳಿತ ಮಂಡಳಿ ಸಿಬ್ಬಂದಿ ಎಷ್ಟೇ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ದೇಗುಲ ಪ್ರವೇಶದ ಸಂದರ್ಭದಲ್ಲಿ ಮಾತ್ರ ಮಾಸ್ಕ್ ಧರಿಸುತ್ತಿದ್ದು, ಬಳಿಕ ಎಲ್ಲಿಯೂ ನಿಯಮ ಪಾಲನೆ ಆಗುತ್ತಿರಲಿಲ್ಲ. ಪೊಲೀಸರೂ ಸಹ ನಿಯಂತ್ರಣಕ್ಕೆ ಇರಲಿಲ್ಲ. ಆದರೆ ಬಹಳ ದಿನದ ನಂತರ ಲಕ್ಷಾಂತರ ಜನರು ಸೇರಿದ್ದರಿಂದ ದೇವಾಲಯದ ಸುತ್ತಮುತ್ತ ಅಂಗಡಿಗಳ ಮಾಲಕರು, ಚಿಲ್ಲರೆ ವ್ಯಾಪಾರಸ್ಥರು ಮಾತ್ರ ಫುಲ್ ಖುಷ್ ಆಗಿದ್ದರು. ದೇವಾಲಯಕ್ಕೂ ಭಾರೀ ಕಳೆ ಬಂದಿತ್ತು.
ಹುಲಿಗೆಮ್ಮ ದೇವಿ ಜಾತ್ರೆ: ಕೊಪ್ಪಳ ಜಿಲ್ಲಾಡಳಿತದಿಂದಲೇ ಕೋವಿಡ್ ನಿಯಮ ಉಲ್ಲಂಘನೆ?
ನದಿಗಿಳಿದ ಭಕ್ತರು:
ತುಂಗಭದ್ರಾ ಜಲಾಶಯ ತುಂಬಿದ್ದು, ನದಿಗೆ ಹೆಚ್ಚುವರಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ದೇವಾಲಯದ ಪಕ್ಕದಲ್ಲಿಯೇ ನದಿ ಮೈದುಂಬಿ ಹರಿಯುತ್ತಿದ್ದು, ಭಕ್ತರು ಇದನ್ನು ಕಣ್ತುಂಬಿಕೊಳ್ಳಲು ನದಿಗೆ ಇಳಿದಿದ್ದರು. ಪ್ರವಾಹವನ್ನೂ ಲೆಕ್ಕಿಸದೇ ಸ್ನಾನ ಮಾಡಿದ್ದರು.
ಕೋವಿಡ್ ನಿಯಮಾನುಸಾರ ಹುಲಿಗೆಮ್ಮ ದೇವಿ ಜಾತ್ರೆ ಆಚರಣೆ
ಕಳೆದ ವರ್ಷ ಜೂ.6 ರಂದು ಶ್ರೀ ಹುಲಿಗೆಮ್ಮ ದೇವಿ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಸಾಂಕೇತಿಕವಾಗಿ ಆಚರಿಸಲಾಯಿತ್ತು. ಕೊಪ್ಪಳ ಜಿಲ್ಲಾಧಿಕಾರಿ ಮೌಖಿಕ ಅದೇಶದಂತೆ ಜಾತ್ರೆ ಅಚರಿಸಲಾಯಿತು. ಜಾತ್ರೆಯಲ್ಲಿ ಯಾವುದೇ ನಿಯಮಗಳ ಉಲ್ಲಂಘನೆಯಾಗಿರಲಿಲ್ಲ. ಜೂ. 3ರಿಂದ 4 ದಿನಗಳ ವರೆಗೆ ಜಾತ್ರೆ ನಿಮಿತ್ತ ನಡೆದ ಸಾಂಕೇತಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು, ಗ್ರಾಮದ ದೈವದವರು (ಬಾಬುದಾರರು), ದೇವಸ್ಥಾನದ ಸಿಬ್ಬಂದಿ ಭಾಗವಹಿಸಿದ್ದರು.