ಕೊರೋನಾ ಅಟ್ಟಹಾಸ: ಬೆಂಗ್ಳೂರಲ್ಲಿ ತಲೆ ಎತ್ತಲಿವೆ 10 ಹೊಸ ‘ಕೋವಿಡ್‌ ಸ್ಮಶಾನ’..!

By Kannadaprabha News  |  First Published Apr 17, 2021, 7:32 AM IST

10 ಕಡೆಗಳಲ್ಲಿ ಬಿಬಿಎಂಪಿಗೆ ಒಟ್ಟು 23.5 ಎಕರೆ ಭೂಮಿ| ಈಗಾಗಲೇ 9 ಜಾಗ ವರ್ಗ| ವಿವಾದವಿರುವ 1 ಜಾಗ ಹಸ್ತಾಂತರ ಬಾಕಿ| ಕೊರೋನಾ 1ನೇ ಅಲೆ ವೇಳೆ ಜಾಗ ಗುರುತು| ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದ್ದರಿಂದ ನಿರ್ಲಕ್ಷಿಸಿದ್ದ ಆಡಳಿತ| 
 


ಸಂಪತ್‌ ತರೀಕೆರೆ

ಬೆಂಗಳೂರು(ಏ.17): ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಅಂತ್ಯಕ್ರಿಯೆಗೆ 10 ಕಡೆಗಳಲ್ಲಿ ಸ್ಮಶಾನ ನಿರ್ಮಾಣಕ್ಕೆ 23.5 ಎಕರೆಗೂ ಅಧಿಕ ಪ್ರದೇಶವನ್ನು ಗುರುತಿಸಿದ್ದು, ಬಿಬಿಎಂಪಿಗೆ ಹಸ್ತಾಂತರಿಸಲು ಬೆಂಗಳೂರು ಜಿಲ್ಲಾಡಳಿತ ಕ್ರಮಕೈಗೊಂಡಿದೆ.

Latest Videos

undefined

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ವ್ಯಾಪ್ತಿಯ ಗಿಡ್ಡೆನಹಳ್ಳಿಯಲ್ಲಿ 4 ಎಕರೆ, ಅಗ್ರಹಾರ ಪಾಳ್ಯದಲ್ಲಿ 3 ಎಕರೆ, ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಗುಳಿಕಮಲೆಯಲ್ಲಿ 4 ಎಕರೆ, ಆನೇಕಲ್‌ ತಾಲೂಕಿನ ಜಿಗಣಿ ಹೋಬಳಿಯ ಗಿಡ್ಡೆನಹಳ್ಳಿಯಲ್ಲಿ 4 ಎಕರೆ, ಸರ್ಜಾಪುರ ಹೋಬಳಿಯ ಇಟ್ಟಂಗೂರಲ್ಲಿ 3.39 ಎಕರೆ ಹಾಗೂ ಯಲಹಂಕ ತಾಲೂಕಿನ ಜಾಲ ಹೋಬಳಿಯ ಕುದುರೆಗೆರೆಯಲ್ಲಿ 1.10 ಎಕರೆ, ಮಹದೇವ ಕೋಡಿಗೇಹಳ್ಳಿಯಲ್ಲಿ 1.20 ಎಕರೆ, ಮಾರೇನಹಳ್ಳಿಯಲ್ಲಿ 12 ಗುಂಟೆ, ಬೋಯಿಲಹಳ್ಳಿಯಲ್ಲಿ 1 ಎಕರೆ, ಹುಣಸೂರಿನಲ್ಲಿ 1 ಎಕರೆ ಸೇರಿದಂತೆ ಒಟ್ಟು 10 ಕಡೆಗಳಲ್ಲಿ ಸ್ಮಶಾನಕ್ಕೆಂದು ಜಾಗಗಳನ್ನು ಗುರುತಿಸಲಾಗಿತ್ತು.

ಈ ಪೈಕಿ ಎರಡು ಜಾಗಗಳನ್ನು ಈಗಾಗಲೇ ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ಇದೀಗ ನಗರದಲ್ಲಿ ಕೋವಿಡ್‌ ಸೋಂಕಿತರು ಮೃತಪಡುತ್ತಿರುವ ಸಂಖ್ಯೆ ಹೆಚ್ಚಿದೆ. ಇದರಿಂದ ಬಿಬಿಎಂಪಿ ಮತ್ತು ಜಿಲ್ಲಾಡಳಿತ ಈ ಹಿಂದೆ ಗುರುತಿಸಿದ ಜಾಗದಲ್ಲಿ ಸ್ಮಶಾನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿವೆ. ಬಿಬಿಎಂಪಿಗೆ ಹಸ್ತಾಂತರಿಸಲು ಬಾಕಿ ಉಳಿದ ಎಂಟು ಪ್ರದೇಶಗಳನ್ನು ಜಿಲ್ಲಾಡಳಿತ ಹಸ್ತಾಂತರ ಮಾಡಲು ತಾಲೂಕು ದಂಡಾಧಿಕಾರಿಗಳಿಗೆ ಸೂಚನೆ ನೀಡಿದ್ದು ಶುಕ್ರವಾರವೇ ಏಳು ಜಾಗಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಲು ಕ್ರಮ ಕೈಗೊಂಡಿವೆ. ಉಳಿದಂತೆ ಸಮಸ್ಯೆಯಿರುವ ಒಂದು ಜಾಗದ ಹಸ್ತಾಂತರ ಮಾತ್ರ ಬಾಕಿಯಾಗಿದ್ದು ಶೀಘ್ರವೇ ಸಮಸ್ಯೆ ಬಗೆಹರಿಸಿ ಬಿಬಿಎಂಪಿ ವಶಕ್ಕೆ ನೀಡುವುದಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ವೆಂಟಿಲೇಟರ್ ಕೊರತೆ, ಬೆಡ್ ಸಿಗ್ತಿಲ್ಲ, ಸ್ಮಶಾನದಲ್ಲಿ ಕ್ಯೂ; ಎಲ್ಲಿಗೆ ಬಂತು ಕೊರೊನಾ ಆರ್ಭಟ

ಗ್ರಾಮಸ್ಥರ ವಿರೋಧ:

ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆಂದು ಈ ಹಿಂದೆ ಬೆಂಗಳೂರು ಉತ್ತರ ತಾಲೂಕಿನ ಗಿಡೆನಹಳ್ಳಿ 4 ಎಕರೆ, ಆನೇಕಲ್‌ ತಾಲೂಕಿನಲ್ಲಿ 3 ಎಕರೆ, ದಕ್ಷಿಣ ತಾಲೂಕಿನ ಸೋಮನಹಳ್ಳಿಯಲ್ಲಿ 1.18 ಎಕರೆ, ಗುಳಿಕಮಲೆಯಲ್ಲಿ ಎರಡು ಕಡೆ ತಲಾ 4 ಎಕರೆ, ಯಲಹಂಕದ ಎಂ.ಹೊಸಹಳ್ಳಿಯಲ್ಲಿ 2 ಎಕರೆ, ಹುತ್ತಹಳ್ಳಿಯಲ್ಲಿ 2 ಎಕರೆ, ಮಾರೇನಹಳ್ಳಿಯಲ್ಲಿ 5 ಎಕರೆ ಹಾಗೂ ಮಾವಳ್ಳಿಪುರದಲ್ಲಿ 5 ಎಕರೆ ಸೇರಿದಂತೆ ಒಟ್ಟು 35.18 ಎಕರೆ ಗುರುತಿಸಲಾಗಿತ್ತು.

ಜಿಲ್ಲಾಡಳಿತ ಗುರುತಿಸಿದ ಜಾಗದ ಸುತ್ತಮುತ್ತಲಿನ ಕೆಲವು ಕಡೆಗಳಲ್ಲಿ ಗ್ರಾಮಸ್ಥರು ಕೋವಿಡ್‌ ಶವಗಳನ್ನು ಸಂಸ್ಕಾರ ಮಾಡುವುದರಿಂದ ಸೋಂಕು ಹರಡುತ್ತದೆ ಎಂಬ ಕಾರಣವೊಡ್ಡಿ ಸ್ಮಶಾನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಜಿಲ್ಲಾಡಳಿತ ಬದಲಿ ಪ್ರದೇಶವನ್ನು ಗುರುತಿಸಿತ್ತು. ಈ ಪ್ರದೇಶಗಳಲ್ಲಿ ಸ್ಮಶಾನ ಭೂಮಿಯ ಸರ್ವೇ ಕಾರ್ಯ ವಿಳಂಬವಾದ ಹಿನ್ನೆಲೆಯಲ್ಲಿ ಹಸ್ತಾಂತರ ಕಾರ್ಯ ತಡವಾಗಿತ್ತು. ಈ ನಡುವೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಇಳಿಮುಖವಾಗಿದ್ದರಿಂದ ಸ್ಮಶಾನಕ್ಕೆಂದು ಗುರುತಿಸಿದ್ದ ಜಾಗಗಳನ್ನು ಬಿಬಿಎಂಪಿಗೆ ಹಸ್ತಾಂತರಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತ್ತು.

ಕ್ರಮ ಕೈಗೊಳ್ಳಲು ತಹಸೀಲ್ದಾರ್‌ಗೆ ಸೂಚನೆ

ನಗರದಲ್ಲಿ ಕಳೆದ 16 ದಿನಗಳಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, 400ಕ್ಕೂ ಅಧಿಕ ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ ಬಾರಿಯೇ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಸ್ಮಶಾನಗಳು ಭರ್ತಿಯಾಗಿದ್ದವು. ಹೀಗಾಗಿ ಸೋಂಕಿತ ಶವಗಳ ಅಂತ್ಯಸಂಸ್ಕಾರಕ್ಕಾಗಿ 10 ಕಡೆ ಜಾಗ ಗುರುತಿಸಲಾಗಿತ್ತು. ನಂತರ ಸಾವಿನ ಪ್ರಕರಣ ಕಡಿಮೆಯಾಗಿದ್ದರಿಂದ ಗುರುತಿಸಲಾದ ಸ್ಮಶಾನಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಮತ್ತು ಬಿಬಿಎಂಪಿ ಮನಸು ಮಾಡಿರಲಿಲ್ಲ. ಆದರೆ, ಈಗ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು ದಿನವಿಡೀ ವಿದ್ಯುತ್‌ ಚಿತಾಗಾರಗಳ ಮುಂದೆ ಅಂತ್ಯಕ್ರಿಯೆಗಾಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲಾಡಳಿತ ಈ ಹಿಂದೆ ಗುರುತಿಸಿದ್ದ ಸ್ಮಶಾನಗಳ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಕ್ರಮ ಕೈಗೊಂಡಿದ್ದು ಶುಕ್ರವಾರ ತಾಲೂಕು ದಂಡಾಧಿಕಾರಿಗೆ ಸೂಚನೆ ನೀಡಿದೆ.

ಕೋವಿಡ್‌ ಸೋಂಕಿತ ಶವಗಳ ಅಂತ್ಯಕ್ರಿಯೆಗೆಂದು ಗುರುತಿಸಿದ 10 ಜಾಗಗಳ ಪೈಕಿ ಈ ಹಿಂದೆ ಎರಡು ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು. ಶುಕ್ರವಾರ ಉಳಿದ ಏಳು ಜಾಗಗಳನ್ನು ಹಸ್ತಾಂತರಿಸಿ ವರದಿ ನೀಡಲು ತಾಲೂಕು ದಂಡಾಧಿಕಾರಿಗೆ ಸೂಚನೆ ನೀಡಿದ್ದೇವೆ. ಸಮಸ್ಯೆ ಇತ್ಯರ್ಥವಾಗದ ಒಂದು ಜಾಗ ಮಾತ್ರ ಹಸ್ತಾಂತರಕ್ಕೆ ಬಾಕಿ ಇದೆ. ಶೀಘ್ರವೇ ಸಮಸ್ಯೆ ನಿವಾರಿಸಿ ಅದನ್ನೂ ಕೂಡ ಬಿಬಿಎಂಪಿ ವಶಕ್ಕೆ ನೀಡುತ್ತೇವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದ್ದಾರೆ. 
 

click me!