10 ಆಸ್ಪತ್ರೆ ಅಲೆದರೂ ಬೆಡ್‌ ಸಿಗದೆ ಸೋಂಕಿತ ಸಾವು : ದಾರುಣ ಘಟನೆ

By Kannadaprabha NewsFirst Published Apr 17, 2021, 7:20 AM IST
Highlights

ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಐಸಿಯು ಬೆಡ್‌ಗಾಗಿ 10 ಆಸ್ಪತ್ರೆ ಅಲೆದರೂ ಕೂಡ ಬೆಡ್ ಸಿಗದೇ ಸೋಂಕಿತ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು (ಏ.17):  ಕೊರೋನಾ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಗರದಲ್ಲಿ ತುರ್ತು ನಿಘಾ ಘಟಕ(ಐಸಿಯು) ಸೌಲಭ್ಯವಿರುವ ಆಸ್ಪತ್ರೆಗಳಿಲ್ಲದೆ ಹನುಮಂತ ನಗರದ ಗವಿಪುರಂ ಗುಟ್ಟಹಳ್ಳಿಯ ನಿವಾಸಿ  ಮೃತಪಟ್ಟಿದ್ದಾರೆ.

ಬುಧವಾರ ಸಂಜೆ ಸಣ್ಣ ಪ್ರಮಾಣದ ಉಸಿರಾಟದ ಸಮಸ್ಯೆ ಕಾಣಿಸಿಕೊಂದ್ದ 55 ವರ್ಷದ ವ್ಯಕ್ತಿಯನ್ನು ಆತನ ಕುಟುಂಬಸ್ಥರು ಮನೆ ಬಳಿಯ ಖಾಸಗಿ ನರ್ಸಿಂಗ್‌ ಹೋಂಗೆ ಕರೆದೊಯ್ದಿದ್ದಾರೆ. ಕೊರೋನಾ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಕೂಡಲೇ ನಿಮಗೆ ಚಿಕಿತ್ಸೆ ಅಗತ್ಯವಿದೆ. ಐಸಿಯು ಇರುವ ಆಸ್ಪತ್ರೆಗೆ ದಾಖಲಾಗಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ತಕ್ಷಣ ಕುಟುಂಬ ಸದಸ್ಯರು ಐಸಿಯು ಸೌಲಭ್ಯ ಇರುವ ಆಸ್ಪತ್ರೆಗಾಗಿ ಹುಡುಕಾಡಿದ್ದಾರೆ. ರಾತ್ರಿ 12 ಗಂಟೆಯಾದರೂ ಬೆಡ್‌ ಸಿಕ್ಕಿಲ್ಲ. ನಗರದ ಸುಮಾರು 10ಕ್ಕೂ ಹೆಚ್ಚು ಆಸ್ಪತ್ರೆಗೆ ತಿರುಗಾಡಿದರೂ, ‘ಐಸಿಯು ಬೆಡ್‌ ಖಾಲಿ ಇಲ್ಲ’ ಎಂಬ ಸಿದ್ಧ ಉತ್ತರ ಸಿಗುತ್ತಿತ್ತು. ಅಂತಿಮವಾಗಿ ಯಲಹಂಕ ಬಳಿಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಜೀವ ಬಿಟ್ಟಿದ್ದಾರೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

Latest Videos

ಇನ್ನಷ್ಟು ಜಿಲ್ಲೆಗೆ ಕರ್ಫ್ಯೂ ವಿಸ್ತರಣೆ : ಸಿಎಂ .

‘ನಮಗೆ ಗೊತ್ತಿರುವ ಎಲ್ಲ ಎಲ್ಲ ವೈದ್ಯರಿಗೂ ದೂರವಾಣಿ ಕರೆ ಮಾಡಿ ಸಂಪರ್ಕಿಸಿದ್ದೆವು. ಚಿಕಿತ್ಸೆ ಕೊಡುವಂತೆ ವೈದ್ಯರಲ್ಲಿ ಅಂಗಲಾಚಿದೆವು. ಆದರೆ, ಎಲ್ಲ ಆಸ್ಪತ್ರೆಗಳ ವೈದ್ಯರು ಬೆಡ್‌ಗಳು ಖಾಲಿಯಿಲ್ಲ. ಏನು ಮಾಡುವುದಕ್ಕೂ ಸಾಧ್ಯವಿಲ್ಲ ಎಂದರು. ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರೆ ನಮ್ಮ ಮಾವ ಬದುಕುಳಿಯುತ್ತಿದ್ದರು’ ಎಂದು ಬೇಸರಿಸಿದ್ದಾರೆ.

‘ಸರ್ಕಾರ ವೆಂಟಿಲೇಟರ್‌ ಕೊರತೆ ಇಲ್ಲ, ಆಕ್ಸಿಜನ್‌ ಕೊರತೆ ಇಲ್ಲ, ಐಸಿಯು ಬೆಡ್‌ಗಳ ಸಾಕಷ್ಟುಇದೆ ಎಂದು ಎಂದು ಹೇಳುತ್ತಿದೆ. ಆದರೆ, ನಮ್ಮ ಮಾವನನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಅಲ್ಲದೆ, ಗುರುವಾರ ಮೃತರ ಅಂತ್ಯ ಸಂಸ್ಕಾರಕ್ಕಾಗಿ ಚಿತಾಗಾರದ ಮುಂದೆ 4 ತಾಸು ಕಾದಿದ್ದೇವೆ. ಇಂತಹ ಪರಿಸ್ಥಿತಿ ಮತ್ಯಾರಿಗೂ ಬರಬಾರದು’ ಎಂದು ಮೃತರ ಅಳಿಯ ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!