ತುಮಕೂರು: ತಾಯಿ, ಸೋದರರ ಸಾವಿನಿಂದ ಅನಾಥವಾದ ಬಾಲಕಿಗೆ 10 ಲಕ್ಷ, ಸಚಿವ ಸುಧಾಕರ್‌

By Kannadaprabha News  |  First Published Nov 17, 2022, 2:00 AM IST

ತುಮಕೂರು ಬಾಲಕಿಗೆ ಹೊಸ ಬಟ್ಟೆ, ಹಣ್ಣು ನೀಡಿ ಸಾಂತ್ವನ, ಪರಿಹಾರದ ಚೆಕ್‌ ವಿತರಿಸಿದ ಸಚಿವ ಡಾ. ಕೆ.ಸುಧಾಕರ್‌ 


ತುಮಕೂರು(ನ.17): ಆಧಾರ್‌ ಹಾಗೂ ತಾಯಿ ಕಾರ್ಡ್‌ ಇಲ್ಲ ಎಂಬ ಕಾರಣಕ್ಕೆ ತುಮಕೂರು ಜಿಲ್ಲಾಸ್ಪತ್ರೆ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮನೆಯಲ್ಲೇ ಹೆರಿಗೆಯಾಗಿ ತಾಯಿ ಹಾಗೂ ಆಕೆಯ ಅವಳಿ ಶಿಶುಗಳು ಸಾವಿಗೀಡಾಗಿದ್ದರಿಂದ ಅನಾಥವಾಗಿರುವ 6 ವರ್ಷದ ಬಾಲಕಿಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ 10 ಲಕ್ಷ ರು. ಪರಿಹಾರದ ಚೆಕ್‌ ವಿತರಿಸಿದ್ದಾರೆ. ತುಮಕೂರಿನ ಸದಾಶಿವನಗರದಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಬುಧವಾರ ಭೇಟಿ ನೀಡಿದ ಡಾ.ಕೆ.ಸುಧಾಕರ್‌ ಅವರು, ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಬಾಲಕಿಗೆ ಚೆಕ್‌ ನೀಡಿದರು. ಈ ಹಣವನ್ನು ನಿಶ್ಚಿತ ಠೇವಣಿಯಾಗಿಟ್ಟು, ಬಾಲಕಿಯ ಶಿಕ್ಷಣ, ಭದ್ರತೆ ಹಾಗೂ ಭವಿಷ್ಯಕ್ಕಾಗಿ ಬಳಸಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಅವರಿಗೆ ಸೂಚಿಸಿದರು.

ಈ ವೇಳೆ, ಮಗುವಿನೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಬಾಲಕಿಗೆ ಹೊಸ ಬಟ್ಟೆನೀಡಿ, ಹಣ್ಣು ಮತ್ತು ಸಿಹಿ ತಿಂಡಿಗಳನ್ನು ವಿತರಿಸಿದರು. ಬಳಿಕ ಬಾಲಕಿಯರ ಬಾಲಮಂದಿರ ಪರಿಶೀಲಿಸಿ, ಅಲ್ಲಿನ ಮಕ್ಕಳೊಂದಿಗೆ ಕೆಲ ಸಮಯ ಕಳೆದರು.

Latest Videos

undefined

ಆಧಾರ್‌ ಕಾರ್ಡ್‌ ಇಲ್ಲದ್ದಕ್ಕೆ ಚಿಕಿತ್ಸೆ ಸಿಗದೆ ತಾಯಿ, ಇಬ್ಬರು ಮಕ್ಕಳು ಸಾವು

ಚಿಕಿತ್ಸೆ ನಿರಾಕರಿಸಿದ್ದ ಸಿಬ್ಬಂದಿ:

ಮೂಲತಃ ತಮಿಳುನಾಡಿನ ಕಸ್ತೂರಿ (30) ಎಂಬಾಕೆ ತುಮಕೂರಿನ ಭಾರತಿ ನಗರದಲ್ಲಿ ತನ್ನ 6 ವರ್ಷದ ಹೆಣ್ಣು ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಸ್ತೂರಿ ಗಂಡ ಇತ್ತೀಚೆಗಷ್ಟೇ ತೀರಿಕೊಂಡಿದ್ದರು. ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ಕಸ್ತೂರಿಗೆ ನ.2ರಂದು ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತುಮಕೂರಿನ ಜಿಲ್ಲಾಸ್ಪತ್ರೆಗೆ ಪಕ್ಕದ ಮನೆಯ ವೃದ್ಧೆಯೊಬ್ಬರ ಸಹಾಯದಿಂದ ಅಡ್ಮಿಟ್‌ ಆಗಲು ಬಂದಿದ್ದರು. ಆದರೆ, ಈಕೆ ಬಳಿ ತಾಯಿ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಇಲ್ಲದ್ದನ್ನೇ ನೆಪ ಮಾಡಿಕೊಂಡ ಜಿಲ್ಲಾಸ್ಪತ್ರೆ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು. ಎಷ್ಟೇ ಮನವಿ ಮಾಡಿದರೂ ಯಾರೂ ಸ್ಪಂದಿಸಿರಲಿಲ್ಲ. ಕೊನೆಗೆ ಹೆರಿಗೆ ನೋವಿನಲ್ಲೇ ಗರ್ಭಿಣಿ ತನ್ನ ಮನೆಗೆ ವಾಪಸ್‌ ಆಗಿದ್ದು, ನ.3ರಂದು ಗುರುವಾರ ಬೆಳಗಿನ ಜಾವ ಯಾರೂ ಇಲ್ಲದ ವೇಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ತೀವ್ರ ನಿತ್ರಾಣಗೊಂಡು ಬಾಣಂತಿ ಹಾಗೂ ಅವಳಿ ಮಕ್ಕಳಿಬ್ಬರೂ ಹೆರಿಗೆಯಾದ ಕೆಲ ಹೊತ್ತಿನಲ್ಲೇ ಮೃತಪಟ್ಟಿದ್ದರು. ಈ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದಾಗಿ, ಈಕೆಯ 6 ವರ್ಷದ ಹೆಣ್ಣು ಮಗು ಅನಾಥವಾಗಿದ್ದು, ತುಮಕೂರಿನ ಸದಾಶಿವನಗರದಲ್ಲಿರುವ ಬಾಲಕಿಯರ ಬಾಲಮಂದಿರಕ್ಕೆ ಸೇರಿಸಲಾಗಿದೆ.

ಬಾಲಕಿ ಭವಿಷ್ಯಕ್ಕೆ ಹಣ

- ಆಧಾರ್‌ ಕಾರ್ಡಿಲ್ಲ ಎಂದು ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ್ದ ತುಮಕೂರು ಆಸ್ಪತ್ರೆ
- ಮನೆಗೆ ಮರಳಿದಾಗ ಹೆರಿಗೆಯಾಗಿ ಸಾವಿಗೀಡಾಗಿದ್ದ ತಾಯಿ, ಅವಳಿ ಮಕ್ಕಳು
- ಕೆಲ ತಿಂಗಳ ಹಿಂದೆ ತಂದೆ, ಇದೀಗ ತಾಯಿ ಕಳೆದುಕೊಂಡು ಅನಾಥವಾಗಿದ್ದ ಬಾಲಕಿ
- ತುಮಕೂರಿನ ಬಾಲಮಂದಿರಕ್ಕೆ 6 ವರ್ಷದ ಬಾಲಕಿ ಸೇರಿಸಿದ್ದ ಅಧಿಕಾರಿಗಳು
- ಬಾಲಕಿ ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರದ ಚೆಕ್‌ ನೀಡಿದ ಸುಧಾಕರ್‌
- ನಿಶ್ಚಿತ ಠೇವಣಿ ಇಟ್ಟು ಬಾಲಕಿಯ ಭವಿಷ್ಯಕ್ಕೆ ಬಳಸಲು ಅಧಿಕಾರಿಗಳಿಗೆ ಸೂಚನೆ
 

click me!