ಪ್ರಭಾವಿಗಳ ಮಾತುಗಳನ್ನು ಕೇಳಿ ಬೆಳೆಹಾನಿ ಆಗದಿದ್ದರೂ ಸರ್ವೇ ನಂಬರ್ ಸೇರಿಸಿ ಪರಿಹಾರ ಒದಗಿಸುವುದು ಯಾರಿಗೂ ಉಚಿತವಲ್ಲ: ಶಾಸಕ ರಾಜೂಗೌಡ
ಸುರಪುರ(ನ.16): ಸಾರ್ವಜನಿಕರ ಸೇವೆ ಸಲ್ಲಿಸಲು ಸರಕಾರ ವೇತನ ನೀಡುತ್ತಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕೇ ಹೊರತು ಬೆಳೆಹಾನಿ ಪರಿಹಾರದಲ್ಲಿ ರಾಜಕೀಯ ಮಾಡಬೇಡಿ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ನರಸಿಂಹನಾಯಕ (ರಾಜೂಗೌಡ) ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಹಸೀಲ್ದಾರ್ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿ ಪರಿಹಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಭಾವಿಗಳ ಮಾತುಗಳನ್ನು ಕೇಳಿ ಬೆಳೆಹಾನಿ ಆಗದಿದ್ದರೂ ಸರ್ವೇ ನಂಬರ್ ಸೇರಿಸಿ ಪರಿಹಾರ ಒದಗಿಸುವುದು ಯಾರಿಗೂ ಉಚಿತವಲ್ಲ. ನಿಮಗೂ ಕುಟುಂಬವಿದ್ದು, ಅವರನ್ನು ನೋಡಿಕೊಳ್ಳಬೇಕು. ಯಾರೋ ಹೇಳಿದರೂ ಅಂತ ಮಾಡಿದರೆ ಅಮಾನತು ಆಗುವಾಗ ಅವರು ಬರುತ್ತಾರೆಯೇ ಎಂದು ಪ್ರಶ್ನಿಸಿದರು.
undefined
ಸುರಪುರ: ಅನೈತಿಕ ಚಟುವಟಿಕೆಗಳ ತಾಣಗಳಾದ ಬಿಇಒ ಕಟ್ಟಡ..!
ಬೆಳೆಹಾನಿ ಬಗ್ಗೆ ಎಚ್ಚರದಿಂದಿರಿ:
ಒಬ್ಬ ಲೀಡರ್ ಹೇಳಿದರೆ ಮಾಡುತ್ತೀರಾ ಅನ್ನುವುದಾದರೆ ನಾವು ಇಲ್ಲಿ ಏನು ಮಾಡುತ್ತಿದ್ದೇವೆ. ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದರೂ ನಿಮ್ಮಂತವರ ಮಾಡುವ ಕೆಲಸದಿಂದ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತದೆ. ಬೆಳೆಹಾನಿ ಬಗ್ಗೆ ಎಚ್ಚರವಿರಬೇಕು. ರೈತರ ಹೆಸರು ಪರಿಶೀಲಿಸಿ, ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸವೇ ಮಾಡಿ ನಮೂದಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಳೆ ಹಾನಿಯಾಗದವರಿಗೆ ಪರಿಹಾರ:
ಬೆಳೆ ಹಾನಿ ಪರಿಹಾರದಲ್ಲಿ ರೈತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ನೀವು ರಾಜಕೀಯ ಮಾಡುವುದನ್ನು ಕೂಡ ಸಹಿಸುವುದಿಲ್ಲ. ನಿಮ್ಮ ಮೇಲೆ 420 ಕೇಸ್ ದಾಖಲಾಗುತ್ತದೆ. ಆರು ತಿಂಗಳವರೆಗೂ ಬೇಲ್ ದೊರೆಯುವುದಿಲ್ಲ. ಬೆಳೆಹಾನಿ ಒಳಗಾದ ರೈತರಿಗೆ ಸಮರ್ಪಕ ಪರಿಹಾರ ದೊರಕಿಸಿಕೊಡಬೇಕು. ಬೆಳೆಹಾನಿ ಆಗದವರಿಗೆ ಪರಿಹಾರ ದೊರೆತಿರೋದು ದುರಂತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪರಿಹಾರ ಒದಗಿಸಿ:
ಬೆಳೆಹಾನಿ ಸರ್ವೇ ಮಾಡಿದಾಗ ಪ್ರತಿಯೊಬ್ಬ ರೈತರ ಪಟ್ಟಿಯನ್ನು ಹಳ್ಳಿಗಳಲ್ಲಿ ಅಂಟಿಸಬೇಕು. ಯಾರಿಗಾದರೂ ತೊಂದರೆಯಾದರೆ ಅವರು ದೂರ ನೀಡುತ್ತಾರೆ. ಮುಲಾಜಿಲ್ಲದೆ ದೂರುಗಳನ್ನು ದಾಖಲಿಸಿಕೊಂಡು ಪುನರ್ ಸರ್ವೇ ಮಾಡಿ ರೈತರಿಗೆ ಬೆಳೆ ಹಾನಿ ಪರಿಹಾರ ಬರುವಂತೆ ನೋಡಿಕೊಳ್ಳಬೇಕು. ತಾಲೂಕಿನಲ್ಲಿ ಹತ್ತಿ, ಭತ್ತ ತೊಗರಿ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಆದ್ದರಿಂದ ಪರಿಹಾರ ಒದಗಿಸಿ ಕೊಡುವಂತಹ ಪುಣ್ಯ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ತಂತ್ರಜ್ಞಾನ ತುಂಬಾ ಚುರುಕಾಗಿದ್ದು, ರೈತರ ಖಾತೆಗೆ ಪರಿಹಾರ ನೇರವಾಗಿ ಜಮಾ ಆಗುತ್ತದೆ. ಸರ್ಕಾರ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ತಪ್ಪು ಮಾಡಿದರೆ ಬಿಡುವುದಿಲ್ಲ. ಈಗಾಗಲೇ ಸರ್ಕಾರ ಆ ರೀತಿಯ ಕ್ರಮಗಳನ್ನು ಕೈಗೊಂಡಿರುವುದನ್ನು ನೀವು ಕಾಣುತ್ತಿದ್ದೀರಿ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಸ್ನೇಹಲ್ ಮಾತನಾಡಿ, ಗ್ರಾಮ ಲೆಕ್ಕಿಗರು ಜಾಗೃತಿಯಿಂದ ಸರ್ವೇ ಮಾಡಿ ಸಮೀಕ್ಷಾ ವರದಿಯನ್ನು ಸಲ್ಲಿಸಬೇಕು. ಸಮೀಕ್ಷೆ ಮಾಡಿದ ರೈತರ ಪಟ್ಟಿಯನ್ನು ಗ್ರಾಮದಲ್ಲಿ ನಮೂದಿಸಬೇಕು. ಜನರು ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸುತ್ತಾರೆ. ಬೆಳೆ ಕಳೆದುಕೊಂಡವರು ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಮತ್ತು ಶಾಸಕರಿಗೆ ದೂರು ಸಹಿತ ಅರ್ಜಿ ಸಲ್ಲಿಸಬಹುದು ಎಂದರು.
ಜೆಡಿಎಸ್‌ನದ್ದು ಮೊಸರಲ್ಲಿ ಕಲ್ಲು ಹುಡುಕುವ ಯತ್ನ: ರವಿಕುಮಾರ್
ಸುರಪುರ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಹುಣಸಗಿ ತಹಸೀಲ್ದಾರ್ ಜಗದೀಶ ಚೌರ್, ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ, ಕೃಷಿ ಸಹಾಯಕ ನಿರ್ದೇಶಕ ಗುರುನಾಥ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಂತೋಷ ಎಸ್., ಗ್ರಾಮ ಲೆಕ್ಕಿಗರು ಮತ್ತು ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿದ್ದರು.
ಯಾರೇ ಬ್ಲಾಕ್ ಮೇಲ್ ಮಾಡಿದರೂ ಶಾಸಕರು ಹೇಳಿದ್ದಾರೆ. ಅವರಂತೆ ಕಾರ್ಯನಿರ್ವಹಿಸುತ್ತೇವೆ. ಬೆಳೆಹಾನಿ ಪರಿಹಾರ ನಕಲು ಆಗಿದ್ದರೆ ಅದನ್ನು ಕೂಡಲೇ ರದ್ದುಪಡಿಸಿ. ಇದಕ್ಕೆ ನಮ್ಮ ಸಹಮತವಿದೆ. ರೈತರಿಗೆ ಸಮರ್ಪಕ ಬೆಳೆಹಾನಿ ಒದಗಿಸಲು ಪ್ರತಿಯೊಬ್ಬ ಅಧಿಕಾರಿಗಳು ಶ್ರಮಿಸಬೇಕು ಅಂತ ಸುರಪುರ ಶಾಸಕ ರಾಜೂಗೌಡ ತಿಳಿಸಿದ್ದಾರೆ.