
ಹುಬ್ಬಳ್ಳಿ(ಆ.07): ಸಂಜೀವಿನಿ ಯೋಜನೆಯಡಿ ಧಾರವಾಡ ಜಿಲ್ಲೆಯ 79 ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿಗೆ 10.21 ಕೋಟಿ ಬಿಡುಗಡೆ ಮಾಡಲಾಗಿದೆ. ಇದು 1230 ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಬಲವರ್ಧನೆಗೆ ಸಹಾಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಮಹಿಳೆಯರ ಆರ್ಥಿಕ ಬಲವರ್ಧನೆಗೆ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಜಾರಿಗೊಳಿಸಿದೆ. ಮಹಿಳೆಯರು ತಮ್ಮ ಆರ್ಥಿಕ ಮಟ್ಟ ಸುಧಾರಣೆಗಾಗಿ ಸ್ವಸಹಾಯ ಸಂಘಗಳ ಮೂಲಕ ಸಂಘಟಿತರಾಗಬೇಕು. ಈ ಯೋಜನೆಯ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
ಹೊಸ ಸಚಿವರಿಗೆ ಹಳೆ ಸಮಸ್ಯೆಗಳೇ ಸವಾಲು: ಮುನೇನಕೊಪ್ಪ ಮೇಲೆ ಅಪಾರ ನಿರೀಕ್ಷೆ
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಎಸ್‌ಜಿಎಸ್‌ವೈ ಯೋಜನೆಯನ್ನು ಪುನರ್ ರಚಿಸಿ ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್(ajeevika- National Rural Livelihoods Mission(NRLM) ಆಗಿಸಿದೆ. ಇದರ ಅನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು ‘ಸಂಜೀವಿನಿ’ ಹೆಸರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಮೂಲಕ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.
ಸ್ವಸಹಾಯ ಸಂಘಗಳನ್ನು ಒಂದೇ ವೇದಿಕೆ ಅಡಿ ತರುವ ಪ್ರಯತ್ನ ಇದರಲ್ಲಿ ನಡೆಯಲಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಪ್ರತಿ ಸ್ತ್ರೀಯರನ್ನು ಈ ಯೋಜನೆಯಡಿ ತರುವ ಉದ್ದೇಶ ಹೊಂದಲಾಗಿದೆ ಎಂದರು. ಮಹಿಳಾ ಸಬಲೀಕರಣ ಉತ್ತೇಜಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.