BBMP ವಾರ್ಡ್‌ ಸಂಖ್ಯೆ ಹೆಚ್ಚಿಸಿದ್ರೆ ಚುನಾವಣೆ 1 ವರ್ಷ ತಡ..!

By Kannadaprabha NewsFirst Published Nov 21, 2020, 8:11 AM IST
Highlights

ಬಿಬಿಎಂಪಿ ಚುನಾವಣೆಗೆ ಸಕಲ ಸಿದ್ಧತೆ|ಮತದಾರರ ಪಟ್ಟಿ ಪ್ರಕಟ ಮಾತ್ರ ಬಾಕಿ| ಹೈಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ| ಮತದಾರರ ಪಟ್ಟಿಸಿದ್ಧ ಪಡಿಸಲು ಈಗಾಗಲೇ 3 ಕೋಟಿ ವೆಚ್ಚ| 

ಬೆಂಗಳೂರು(ನ.21): ಬಿಬಿಎಂಪಿ ಚುನಾವಣೆ ನಡೆಸಲು ಸಕಲ ಸಿದ್ಧತೆ ನಡೆಸಿಕೊಂಡಿದ್ದು, ಇಂತಹ ಸಂದರ್ಭದಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡಿದರೆ ಕನಿಷ್ಠ ಒಂದು ವರ್ಷ ಕಾಲ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ ಗಮನಕ್ಕೆ ತಂದಿದೆ.

ಬಿಬಿಎಂಪಿಗೆ ಶೀಘ್ರ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಪಾಲಿಕೆ ಮಾಜಿ ಸದಸ್ಯ ಎಂ. ಶಿವರಾಜ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ವಾದ ಮಂಡಿಸಿ, ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಕೇವಲ ಮತದಾರರ ಪಟ್ಟಿಪ್ರಕಟಿಸುವುದಷ್ಟೇ ಬಾಕಿಯಿದೆ. ಮತದಾರರ ಪಟ್ಟಿತಯಾರಿಕೆಗೆ ಮೂರು ಕೋಟಿ ರು. ಖರ್ಚು ಆಗಿದೆ. ಇಂತಹ ಸಂದರ್ಭದಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಿದರೆ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ಅಲ್ಲದೆ, ವಾರ್ಡ್‌ ಮರು ವಿಂಗಡಣೆಗೆ ನಾಲ್ಕು ತಿಂಗಳು ಬೇಕಾಗುತ್ತದೆ. ಆ ನಂತರ ಮೀಸಲಾತಿ ಹಾಗೂ ಮತದಾರರ ಪಟ್ಟಿಸಿದ್ಧಪಡಿಸಬೇಕು. ಈ ಎಲ್ಲ ಕಾರ್ಯ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ಸಮಯ ಹಿಡಿಯಲಿದೆ. ಇದರಿಂದ ಚುನಾವಣೆ ವಿಳಂಬವಾಗುವ ಜತೆಗೆ ಸಾರ್ವಜನಿಕರ ಕೋಟ್ಯಂತರ ರು. ಹಣ ಪೋಲಾಗುತ್ತದೆ. ಚುನಾವಣೆ ಮುಂದೂಡಿದರೆ ಸಾಂವಿಧಾನಿಕ ನಿಯಮ ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಬಿಬಿಎಂಪಿ ಚುನಾವಣೆ ಮತ್ತಷ್ಟು ವಿಳಂಬ ಸಾಧ್ಯತೆ

ಅರ್ಜಿದಾರರ ಪರ ವಕೀಲರು ವಾದಿಸಿ, ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವ ಮೂಲಕ ಸರ್ಕಾರ ಉದ್ದೇಶಪೂರ್ವಕವಾಗಿ ಪಾಲಿಕೆ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಯತ್ನಿಸುತ್ತಿದೆ. ವಾರ್ಡ್‌ ವಿಂಗಡಣೆ, ಮೀಸಲಾತಿ ಪಟ್ಟಿನೀಡುವಂತೆ 2018ರಿಂದಲೂ ಆಯೋಗ ಸರ್ಕಾರಕ್ಕೆ ಪತ್ರದ ಮೇಲೆ ಪತ್ರ ಬರೆದಿದೆ. ಆದರೆ, ಸರ್ಕಾರ ಆಯೋಗಕ್ಕೆ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂದು ತಿಳಿಸಿದರು.

ಜತೆಗೆ, 2015ರ ಚುನಾವಣೆ ಸಂದರ್ಭದಲ್ಲೂ ಪಾಲಿಕೆ ವಿಭಜನೆ ಮಾಡುವ ನಿರ್ಧಾರ ಕೈಗೊಂಡು ಚುನಾವಣೆ ಮುಂದೂಡಲು ಸರ್ಕಾರ ಪ್ರಯತ್ನಿಸಿತ್ತು. ಈ ಬಾರಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದೆ. ಉದ್ದೇಶಪೂರ್ವಕವಾಗಿ ಚುನಾವಣೆ ವಿಳಂಬ ಮಾಡಲು ಯತ್ನಿಸುತ್ತಿದೆ. ಸಂವಿಧಾನದ ಪರಿಚ್ಛೇದ 243(ಇ) ಪ್ರಕಾರ ಅವಧಿ ಪೂರ್ಣಗೊಳ್ಳುವುದರೊಳಗೆ ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗ ಮತ್ತು ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸಿದರು. ಚುನಾವಣಾ ಆಯೋಗ ಹಾಗೂ ಅರ್ಜಿದಾರರ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರದ ವಾದ ಆಲಿಸಲು ವಿಚಾರಣೆಯನ್ನು ನ.25ಕ್ಕೆ ಮುಂದೂಡಿತು.
 

click me!