ಡ್ರಗ್ ಮಾಫಿಯಾ ಎನ್ನುವುದು ಹೈ ಫೈ ಜಾಗದಲ್ಲಿ ಮಾತ್ರವಲ್ಲ ತಾಂಡಗಳಲ್ಲಿಯೂ ಇದರ ಘಾಟು ಇದೆ. ಕಲಬುರಗಿಯ ತಾಂಡಾದಲ್ಲಿ ಕ್ವಿಂಟಲ್ ಗಟ್ಟಲೆ ಗಾಂಜಾ ಲಭ್ಯವಾಗಿದೆ.
ಶೇಷಮೂರ್ತಿ ಅವಧಾನಿ
ಕಲಬುರಗಿ (ಸೆ.11): ಮೇಲ್ನೋಟಕ್ಕಿದು ಹತ್ತಿಪ್ಪತ್ತು ಕುರಿಗಳು, ಅವುಗಳಿಗೆ ಮೇವು-ನೀರಿನ ವ್ಯವಸ್ಥೆಯಿರುವ ತಾಂಡಾವೊಂದರ ಕುರಿದೊಡ್ಡಿ. ಆದರೆ ಆ ದೊಡ್ಡಿಯ ನೆಲ ಮಾಳಿಗೆ ಹೊಕ್ಕು ನೋಡಿದರೆ ಇಡೀ ಕರ್ನಾಟಕಕ್ಕೆ ಪೂರೈಸುವಷ್ಟುಗಾಂಜಾದ ದಾಸ್ತಾನು!
ಹೌದು, ಇದು ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಎನ್ನುವಂಥ 1,352 ಕೆಜಿ ಗಾಂಜಾ ಏಕಕಾಲಕ್ಕೆ ದೊರಕಿರುವ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಲಚ್ಚು ನಾಯಕ ತಾಂಡಾ ‘ಕುರಿ ದೊಡ್ಡಿ’ದ ಅಸಲಿ ಕತೆ. ಯಾರಿಗೂ ಸಣ್ಣ ಅನುಮಾನವೂ ಬಾರದಂತೆ ಕುರಿದೊಡ್ಡಿಯನ್ನೇ ಗಾಂಜಾ ದಾಸ್ತಾನು ಮಳಿಗೆ ಮಾಡಿಕೊಂಡಿದ್ದಾತ ಚಾಲಾಕಿ ಲಾರಿ ಚಾಲಕ, ತಾಂಡಾ ನಿವಾಸಿ ಚಂದ್ರಕಾಂತ. ಅಚ್ಚರಿಯೆಂದರೆ ಈ ದೊಡ್ಡಿ ಸುತ್ತ ಸುಳಿಯುತ್ತಿದ್ದ ತಾಂಡಾ ನಿವಾಸಿಗಳಿಗೂ ಇಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಗಾಂಜಾ ದಾಸ್ತಾನು ಇದೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲ.
100 ಅಡಿ ಉದ್ದ, ಅಷ್ಟೇ ಅಡಿ ಅಗಲದ ಈ ಜಾಗದಲ್ಲಿ ಕುರಿದೊಡ್ಡಿ ಸುತ್ತಮುತ್ತ ಹಸಿರು ಪರದೆ, ಬಿಗಿ ಭದ್ರತೆಯ ಬಾಗಿಲು, ನೆಲ ಮಹಡಿಗಂತು ಸುಲಭದಲ್ಲಿ ಬೀಗ ಹಾಕಿ ಭದ್ರ ಪಡಿಸುವಂಥ ಬಾಗಿಲು ಹಾಕಲಾಗಿತ್ತು. ಸುತ್ತಮುತ್ತ ಹಣ್ಣು, ತರಕಾರಿಗಳನ್ನು ಸಾಗಿಸುವ ಟ್ರೇಗಳನ್ನು ಪೇರಿಸಿಡುವ ಮೂಲಕ ಯಾರಿಗೂ ಇಲ್ಲಿನ ಗಾಂಜಾ ಘಾಟು ತಾಕದಂತೆ ವ್ಯವಸ್ಥೆ ಮಾಡಲಾಗಿತ್ತು. ಕುರಿಗಳಿಗೆ ನೀರು, ಮೇವಿನ ವ್ಯವಸ್ಥೆಗೆಂದು ಇಟ್ಟಿದ್ದ ತೊಟ್ಟಿಗಳನ್ನು ಸ್ವಲ್ಪ ಸರಿಸಿದರಷ್ಟೇ ನೆಲಮಹಡಿಯ ಬಾಗಿಲು ಕಣ್ಣಿಗೆ ಬೀಳುತ್ತದೆ. ಅಷ್ಟರಮಟ್ಟಿಗೆ ಚಂದ್ರಕಾಂತ ಈ ತಾಂಡಾದಲ್ಲಿ ಗಾಂಜಾ ರಹಸ್ಯ ಬಚ್ಚಿಟ್ಟಿದ್ದ.
ಇನ್ನೂ ಹಲವರ ಬಣ್ಣ ಬಯಲಾಗಲಿದೆ : ಸಿಎಂ ವಾರ್ನಿಂಗ್! .
ಕಲಬುರಗಿಯಲ್ಲಿ ಗಾಂಜಾ ಗಮ್ಮತ್ತು: ಕಲಬುರಗಿಯಲ್ಲಿ ಗಾಂಜಾ ಕದ್ದುಮುಚ್ಚಿ ಬೆಳೆಯೋದು ಹೊಸತೇನಲ್ಲ. ಚಿಂಚೋಳಿ, ಸೇಡಂ, ಅಫಜಲ್ಪು, ಆಳಂದ ಇಲ್ಲೆಲ್ಲಾ ತೊಗರಿ, ಕಬ್ಬಿ ನ ಗದ್ದೆ ನಡುವೆ ಗಾಂಜಾ ಕದ್ದು ಮುಚ್ಚಿ ಬೆಳೆದು ನೆರೆ ರಾಜ್ಯಗಳಿಗೆ ಸಾಗಣೆ ಮಾಡುವಾಗ ಸಿಕ್ಕಿಬಿದ್ದ ಹಲವು ಪ್ರಕರಣಗಳಿವೆ. ಈಚೆಗೆ ಚಿಂಚೋಳಿಯಲ್ಲಿ 8 ಲಕ್ಷ ರು. ಮೌಲ್ಯದ ಗಾಂಜಾ ಬೆಳೆ ಜಪ್ತಿಯಾಗಿತ್ತು. ಇದೀಗ ಕುರಿದೊಡ್ಡಿಯಲ್ಲಿ ಹದಿಮೂರುವರೆ ಕ್ವಿಂಟಲ್ ಗಾಂಜಾ ಸಿಕ್ಕಿದ್ದು, ಅಂತಾರಾಜ್ಯ ಗಾಂಜಾ ದಂಧೆಯ ಬಹುದೊಡ್ಡ ಕೇಂದ್ರ ಕಲಬುರಗಿ ಎಂಬ ಗುಮಾನಿಗೂ ಕಾರಣವಾಗಿದೆ. ರಾಜಧಾನಿ ಬೆಂಗಳೂರಿಗೂ ಕಲಬುರಗಿಯಿಂದಲೇ ಗಾಂಜಾ ಪೂರೈಕೆಯಾಗೋ ಸಂಗತಿ ಮೊದಲ ಬಾರಿಗೆ ಈ ದಾಳಿಯಿಂದ ಬಯಲಾಗಿದೆ.
ಕಲಬುರಗಿ ಪೊಲೀಸರಿಗೆ ಗೊತ್ತೇ ಇಲ್ಲ: ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ತಾಂಡಾದ ಗಾಂಜಾ ಅಡ್ಡೆ ಕಳ್ಳದಂಧೆ ಹೊರಬಿದ್ದಿದೆಯಾದರೂ ಈ ಸಂಗತಿ ಸ್ಥಳೀಯ ಪೊಲೀಸರಿಗೆ ಗೊತ್ತೇ ಇರಲಿಲ್ಲವಂತೆ.