ಜುಲೈ ಅಂತ್ಯಕ್ಕೆ ಲಕ್ಷ ಕೇಸ್‌: ಭಯ ಬೇಡ, ಆದರೆ, ನಿರ್ಲಕ್ಷ್ಯಿಸಬೇಡಿ

By Kannadaprabha NewsFirst Published Jul 9, 2020, 9:39 AM IST
Highlights

ರಾಜ್ಯದಲ್ಲಿ ಸೋಂಕಿನ ಪ್ರಮಾಣ ದೇಶದಲ್ಲೇ ಅತಿ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಕೇವಲ 9 ದಿನಗಳಲ್ಲೇ ಸೋಂಕು ದ್ವಿಗುಣಗೊಳ್ಳುತ್ತಿದೆ. ಇದೇ ಸೋಂಕು ದ್ವಿಗುಣ ದರ ಮುಂದುವರೆದರೆ ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೊರೋನಾ ಸೋಂಕು 1 ಲಕ್ಷ ಪ್ರಕರಣಗಳ ಗಡಿ ದಾಟಲಿದೆ. ಈ ಪೈಕಿ ಬೆಂಗಳೂರಲ್ಲೇ 50 ಸಾವಿರ ಜನರಿಗೆ ಸೋಂಕು ತಗಲುವ ಸಾಧ್ಯತೆ ಇದೆ.

ಬೆಂಗಳೂರು(ಜು.09): ರಾಜ್ಯದಲ್ಲಿ ಸೋಂಕಿನ ಪ್ರಮಾಣ ದೇಶದಲ್ಲೇ ಅತಿ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಕೇವಲ 9 ದಿನಗಳಲ್ಲೇ ಸೋಂಕು ದ್ವಿಗುಣಗೊಳ್ಳುತ್ತಿದೆ. ಇದೇ ಸೋಂಕು ದ್ವಿಗುಣ ದರ ಮುಂದುವರೆದರೆ ಜುಲೈ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೊರೋನಾ ಸೋಂಕು 1 ಲಕ್ಷ ಪ್ರಕರಣಗಳ ಗಡಿ ದಾಟಲಿದೆ. ಈ ಪೈಕಿ ಬೆಂಗಳೂರಲ್ಲೇ 50 ಸಾವಿರ ಜನರಿಗೆ ಸೋಂಕು ತಗಲುವ ಸಾಧ್ಯತೆ ಇದೆ.

ಹೌದು.. ಅಧಿಕಾರಿಗಳು ಹಾಗೂ ತಜ್ಞರೇ ಈ ಹೇಳಿಕೆ ನೀಡಿದ್ದಾರೆ. ಸೋಂಕು ದ್ವಿಗುಣ ಪ್ರಮಾಣ ರಾಷ್ಟ್ರೀಯ ಸರಾಸರಿ 20 ದಿನಗಳಿದ್ದರೆ, ರಾಜ್ಯದಲ್ಲಿ 9 ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಅಲ್ಲದೆ, ಪ್ರತಿ 6 ದಿನಕ್ಕೊಮ್ಮೆ ದ್ವಿಗುಣಗೊಳ್ಳುವ ಮೂಲಕ ಬೆಂಗಳೂರಿನಲ್ಲಿ ಇನ್ನೂ ತೀವ್ರಗತಿಯಲ್ಲಿ ಸೋಂಕು ವೃದ್ಧಿಸುತ್ತಿದೆ. ಬೆಂಗಳೂರು ಒಂದರಲ್ಲೇ ಜುಲೈ ಅಂತ್ಯಕ್ಕೆ 50 ಸಾವಿರ ಪ್ರಕರಣಗಳು ವರದಿಯಾಗಲಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

 

ಜು.5 ರಂದು ಭಾನುವಾರ ರಾಜ್ಯ ಕೊರೋನಾ ನಿಯಂತ್ರಣ ಕಾರ್ಯಪಡೆ ನಡೆಸಿರುವ ವಿಶ್ಲೇಷಣೆಯಲ್ಲಿ ರಾಜ್ಯದಲ್ಲಿ ದೇಶದಲ್ಲೇ ಅತಿ ಹೆಚ್ಚು ವೇಗವಾಗಿ ಸೋಂಕು ದ್ವಿಗುಣಗೊಳ್ಳುತ್ತಿದೆ. ದೆಹಲಿ (18 ದಿನ) ಹಾಗೂ ಮಹಾರಾಷ್ಟ್ರ (23 ದಿನ) ರಾಜ್ಯಗಳಿಗೆ ಹೋಲಿಸಿಕೊಂಡರೆ ರಾಜ್ಯದಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ರಾಜ್ಯ ಕಾರ್ಯಪಡೆ ಬಿಡುಗಡೆಗೊಳಿಸಿರುವ 30 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಸೋಂಕು ಹೆಚ್ಚಾಗುತ್ತಿರುವುದರಲ್ಲಿ ರಾಜ್ಯವೇ ಮೊದಲ ಸ್ಥಾನದಲ್ಲಿದೆ. ನೆರೆಯ ರಾಜ್ಯಗಳಾದ ತೆಲಂಗಾಣ (10 ದಿನ), ಗೋವಾ (13), ತಮಿಳುನಾಡು (16), ಕೇರಳ (18), ಆಂಧ್ರಪ್ರದೇಶ (14) ಕ್ಕಿಂತ ಕರ್ನಾಟಕದಲ್ಲೇ ವೇಗವಾಗಿ ಸೋಂಕು ಹರಡುತ್ತಿದೆ.

ತಿಂಗಳಾಂತ್ಯಕ್ಕೆ 1 ಲಕ್ಷ ಪ್ರಕರಣ:

ಕಾರ್ಯಪಡೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಜು.5ರ ವೇಳೆಗೆ ಪ್ರತಿ 9 ದಿನಗಳಿಗೊಮ್ಮೆ ಸೋಂಕು ದ್ವಿಗುಣಗೊಳ್ಳುತ್ತಿದೆ. ಜು.7 ರಂದು ಪ್ರಕರಣ ಕಡಿಮೆಯಾಗಿದ್ದರಿಂದ ದ್ವಿಗುಣ ದರ 10 ದಿನಕ್ಕೆ ಏರಿಕೆಯಾಗಿದೆ. ಇದೇ ರೀತಿಯಾದರೆ ಮುಂದಿನ 20 ದಿನಗಳೊಳಗಾಗಿ ಸೋಂಕು 1 ಲಕ್ಷ ಗಡಿ ಮುಟ್ಟಲಿದೆ. ಇದಕ್ಕೆ ತಕ್ಕಂತೆ ಪರೀಕ್ಷೆಗಳನ್ನು ನಡೆಸಬೇಕು. ಪರೀಕ್ಷೆಗಳನ್ನು ನಡೆಸಿದಷ್ಟೂಹೆಚ್ಚು ಪ್ರಕರಣಗಳು ವರದಿಯಾಗಲಿವೆ. ಜತೆಗೆ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗುರಿ ತಲುಪುತ್ತಿಲ್ಲ ಪರೀಕ್ಷೆ:

ರಾಜ್ಯದಲ್ಲಿ ಉದ್ದೇಶಿತ ಪ್ರಮಾಣದಲ್ಲಿ ಕೊರೋನಾ ಪರೀಕ್ಷೆ ನಡೆಯುತ್ತಿಲ್ಲ. ಸರ್ಕಾರವೇ ವಿಧಿಸಿಕೊಂಡಿರುವ ಗುರಿಯನ್ನೂ 23 ಜಿಲ್ಲೆಗಳಲ್ಲಿ ತಲುಪಲು ಸಾಧ್ಯವಾಗಿಲ್ಲ. ರಾಜ್ಯದಲ್ಲೇ ಅತಿ ಹೆಚ್ಚು ಸೋಂಕು ವರದಿಯಾಗುತ್ತಿರುವ ಬೆಂಗಳೂರಿನಲ್ಲೇ ಉದ್ದೇಶಿತ ಪ್ರಮಾಣದಲ್ಲಿ ಅರ್ಧದಷ್ಟುಪರೀಕ್ಷೆಗಳು ಮಾತ್ರ ನಡೆಯುತ್ತಿವೆ. ನಿತ್ಯ 4370 ಪರೀಕ್ಷೆಯ ಗುರಿ ನೀಡಿದ್ದರೆ ಶೇ.56.2 ರಷ್ಟುಪರೀಕ್ಷೆ ಮಾತ್ರ ನಡೆಸಲಾಗುತ್ತಿದೆ.

ಬೆಂಗಳೂರಲ್ಲೇ 50 ಸಾವಿರ ಸೋಂಕು?:

ಬೆಂಗಳೂರಿನಲ್ಲಿ 6 ದಿನದಲ್ಲೇ ದ್ವಿಗುಣವಾಗುತ್ತಿದೆ. ಜುಲೈ ಅಂತ್ಯದ ವೇಳೆಗೆ ಬೆಂಗಳೂರಿನಲ್ಲೇ 50 ಸಾವಿರಕ್ಕೂ ಹೆಚ್ಚು ಸೋಂಕು ವರದಿಯಾಗಲಿದೆ. ಕಳೆದ 7 ದಿನದಲ್ಲಿ ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಿದ ಪ್ರತಿ 100 ಮಂದಿಯಲ್ಲಿ ಶೇ.21.4 ಮಂದಿಗೆ ಸೋಂಕು ದೃಢಪಟ್ಟಿದೆ. ಇದು ಆತಂಕ ಸೃಷ್ಟಿಸಿದ್ದು, ಪರೀಕ್ಷೆ ಹೆಚ್ಚಾದಷ್ಟೂಸೋಂಕು ಹೆಚ್ಚಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಶೇ.51 ಜನರ ಸೋಂಕಿನ ಮೂಲವೇ ಪತ್ತೆ ಇಲ್ಲ

ಜು.5 ರವರೆಗೆ ವರದಿಯಾಗಿದ್ದ 25,317 ಪ್ರಕರಣಗಳ ಪೈಕಿ 10,484 ಪ್ರಕರಣಗಳ ಬಗ್ಗೆ ಯಾವುದೇ ಹಿನ್ನೆಲೆ ಅಧಿಕಾರಿಗಳಿಗೆ ಲಭ್ಯವಾಗಿಲ್ಲ. ಇನ್ನು ಐಎಲ್‌ಐ (ವಿಷಮಶೀತ ಜ್ವರ) ಲಕ್ಷಣ ಹೊಂದಿರುವ 2099, ಸಾರಿ (ಉಸಿರಾಟ ತೊಂದರೆ) ಹಿನ್ನೆಲೆಯ 436 ಮಂದಿಗೆ ಸೋಂಕು ದೃಢಪಟ್ಟಿದ್ದು ಇವರಿಗೂ ಯಾರಿಂದ ಸೋಂಕು ಹರಡಿದೆ ಎಂಬುದು ತಿಳಿದುಬಂದಿಲ್ಲ. ಈ ಮೂಲಕ 25,317 ಪ್ರಕರಣದಲ್ಲಿ 13,019 (ಶೇ.51.42) ರಷ್ಟುಮೂಲ ಪತ್ತೆಯಾಗದೆ ಕೊರೋನಾ ನಿಯಂತ್ರಣ ಮಾಡುವಲ್ಲಿ ದೊಡ್ಡ ತಲೆನೋವಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

16 ಸಾವಿರ ಫಲಿತಾಂಶ ಬಾಕಿ

ರಾಜ್ಯದಲ್ಲಿ ನಿತ್ಯ ನಡೆಸುತ್ತಿರುವ ಸೋಂಕು ಪರೀಕ್ಷೆಯಲ್ಲಿ 16 ಸಾವಿರ ಫಲಿತಾಂಶ ಬರುವುದು ಬಾಕಿ ಇದೆ. ವಿವಿಧ ಪ್ರಯೋಗಾಲಯಗಳಲ್ಲಿ ಸಿಬ್ಬಂದಿ ಸೋಂಕು ಉಂಟಾಗಿದ್ದು ಸೇರಿದಂತೆ ವಿವಿಧ ಕಾರಣಗಳಿಂದ ಸೋಂಕು ಪರೀಕ್ಷೆ ಫಲಿತಾಂಶ ವಿಳಂಬವಾಗುತ್ತಿದೆ ಎಂದು ಪ್ರಯೋಗಾಲಯಗಳ ಉಸ್ತುವಾರಿ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಹೇಳುತ್ತಾರೆ.

-ಶ್ರೀಕಾಂತ್‌.ಎನ್‌.ಗೌಡಸಂದ್ರ

click me!