ಯಾದಗಿರಿ: ಬೆಳಗ್ಗೆ ಕೊರೋನಾ ಪಾಸಿಟಿವ್‌, ಸಂಜೆ ನೆಗೆಟಿವ್‌!

By Kannadaprabha NewsFirst Published Jul 8, 2020, 2:38 PM IST
Highlights

ಚರ್ಚೆಗೆ ಗ್ರಾಸವಾದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಬ್ಬರಿಗೆ ಸೋಂಕು ತಗುಲಿದ ಸುದ್ದಿಗಳು| ಯಾದಗಿರಿ ಜಿಲ್ಲಾಸ್ಪತ್ರೆ ವೈದ್ಯರಿಬ್ಬರು ಸೇರಿದಂತೆ ನಾಲ್ವರಿಗೆ ಸೋಂಕು?| ವರ್ಗಾವಣೆಗೊಂಡ ವೈದ್ಯರಿಂದ ಸಿಹಿ ಪಡೆದ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೋವಿಡ್‌ ಟೆಸ್ಟ್‌|

ಯಾದಗಿರಿ(ಜು.08): ಭಾನುವಾರವಷ್ಟೇ ಜಿಲ್ಲೆಯ ಶಹಾಪುರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೊಬ್ಬರಿಗೆ ಸೋಂಕು ತಗುಲಿದ್ದರಿಂದ, ಇಡೀ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಿದ್ದ ಬೆನ್ನಲ್ಲೇ, ಇಲ್ಲಿನ ಜಿಲ್ಲಾಸ್ಪತ್ರೆ ವೈದ್ಯರಿಬ್ಬರೂ ಸೇರಿದಂತೆ ಇಬ್ಬರು ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ಬಂದಿದೆ ಎಂಬ ಸಾರ್ವಜನಿಕರ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದಾಗಿ ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿ ಆತಂಕದ ವಾತಾವರಣ ಮೂಡಿತ್ತು.

ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಿಬ್ಬರಿಗೆ ಸೋಂಕು ತಗುಲಿದೆ ಎಂಬ ಮಾತುಗಳಿಂದಾಗಿ ಇಡೀ ಜಿಲ್ಲಾಸ್ಪತ್ರೆಯ ವಾತಾವರಣ ಮಂಗಳವಾರವಿಡೀ ದಿನ ಆತಂಕದಲ್ಲಿತ್ತು. ಆದರೆ, ವೈದ್ಯರಿಗೆ ಗಂಟಲು ದ್ರವ ವರದಿ ಒಮ್ಮೆ ಪಾಸಿಟಿವ್‌ ಬಂದಿದ್ದರೆ, ಸಂಜೆ ಹೊತ್ತಿಗೆ ಪರೀಕ್ಷೆ ಮಾಡಿಸಿದಾಗ ನೆಗೆಟಿವ್‌ ಬಂದಿದ್ದರಿಂದ ಗೊಂದಲ ಮತ್ತಷ್ಟೂ ಮುಂದುವರೆದಿತ್ತು.

ಕೊರೋನಾಗೆ ಬಲಿ: ಯಾದಗಿರಿಯಲ್ಲೂ ಅಮಾನವೀಯ ಅಂತ್ಯಸಂಸ್ಕಾರ..!

ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಲ್ಲಿನ ವೈದ್ಯರೊಬ್ಬರು ಹುಬ್ಬಳ್ಳಿಯಲ್ಲಿನ ಆಸ್ಪತ್ರೆಯೊಂದಕ್ಕೆ ವರ್ಗಾವಣೆಗೊಂಡಿದ್ದರು. ಈ ಮೂರ್ನಾಲ್ಕು ದಿನಗಳಲ್ಲಿ ಅವರು ಅಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದರು. ಇದೇ ಖುಷಿಯಲ್ಲಿ ಸಿಹಿ ಹಂಚಿದ್ದ ಅವರಿಗೆ ಸೋಂಕು ತಗುಲಿದೆ ಎಂಬ ಮಾತುಗಳು ವೈದ್ಯರ ವಲಯದಲ್ಲಿ ಭಾರಿ ತಲ್ಲಣಕ್ಕೆ ಕಾರಣವಾಗಿತ್ತು.

ಇನ್ನು, ವರ್ಗಾವಣೆಗೊಂಡ ವೈದ್ಯರಿಂದ ಸಿಹಿ ಪಡೆದ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೋವಿಡ್‌ ಟೆಸ್ಟ್‌ ಮಾಡಿಸಲಾಗಿ, ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರಿಂದ ಪ್ರಾಥಮಿಕ ಸಂಪರ್ಕದಲ್ಲಿ ಬಂದ ರೋಗಿಗಳ ಹುಡುಕಾಟ ನಡೆಸಲಾಗುತ್ತಿದೆ ಎಂಬ ಮಾತುಗಳು ಜಿಲ್ಲಾಸ್ಪತ್ರೆ ವಲಯದಲ್ಲಿ ಮೂಡಿಬಂದಿದ್ದವು. ಸಂಜೆ ವೇಳೆಗೆ ಮತ್ತೊಮ್ಮೆ ಟೆಸ್ಟ್‌ ಮಾಡಿಸಿದಾಗ, ನೆಗೆಟಿವ್‌ ಬಂದಿದ್ದು, ನಾಳೆ ಮತ್ತೊಮ್ಮೆ ಖಚಿತಪಡಿಸಲಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಮ್ಮನ್ನು ಸಂಪರ್ಕಿಸಿದ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ. 
 

click me!