ಸ್ವಾಯತ್ತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನ ಸ್ವಂತ ಸಂಪನ್ಮೂಲದಿಂದ ನಡೆಸಬೇಕೆಂಬ ಉದ್ದೇಶದಿಂದ ಒಂದು ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ.
ತುಮಕೂರು (ಆ.13): ಸ್ವಾಯತ್ತ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನ ಸ್ವಂತ ಸಂಪನ್ಮೂಲದಿಂದ ನಡೆಸಬೇಕೆಂಬ ಉದ್ದೇಶದಿಂದ ಒಂದು ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ಜಿಲ್ಲಾ ಕಸಾಪ ಆಯೋಜಿಸಿದ್ದ ಪೊ.ಸಿ.ಎಚ್.ಮರಿದೇವರು ದತ್ತಿ ಪ್ರಶಸ್ತಿ ಪ್ರದಾನ ಮತ್ತು ಕಸಾಪ ಅಜೀವ ಸದಸ್ಯತ್ವ ಅಭಿಯಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಕೋಟಿ ಸದಸ್ಯರ ವಂತಿಗೆ ಹಣ ಸುಮಾರು 250 ಕೋಟಿ ರು. ಗಳಾಗುತ್ತದೆ.
ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ, ಒಂದು ವರ್ಷ ನಡೆಯುವ ಕನ್ನಡ ಕಾರ್ಯಕ್ರಮಗಳಿಗೆ ಅನುದಾನಕ್ಕೆ ಸರ್ಕಾರದ ಮುಂದೆ ಕೈಕಟ್ಟಿನಿಲ್ಲುವುದು ತಪ್ಪಲಿದೆ ಎಂದರು. ಕಸಾಪ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲೆಯಲ್ಲಿ ಕನ್ನಡ ಭವನ ಕಟ್ಟಲು ಈ ಹಿಂದಿನ ಎಲ್ಲಾ ಅಧ್ಯಕ್ಷರು ಶ್ರಮಿಸಿದ್ದಾರೆ. ಕನ್ನಡ ಎಂಬುದು ಜನಸಾಮಾನ್ಯರ ಭಾಷೆ. ಆದರೆ ಇಂದಿನ ಯುವಜನತೆ ಉದ್ಯೋಗ, ಮತ್ತಿತರರ ಕಾರಣಗಳಿಗಾಗಿ ಬೇರೆ ಭಾಷೆಗಳನ್ನು ಕಲಿಯಲು ಆಸಕ್ತಿ ತೋರುತ್ತಿರುವುದರ ಪರಿಣಾಮ ಕನ್ನಡಕ್ಕೆ ಕೊಂಚ ಹಿನ್ನೆಡೆಯಾಗಿದೆ ಎನ್ನಬಹುದು. ಕನ್ನಡ ಪ್ರಾಥಮಿಕ ಭಾಷೆಯಾಗಬೇಕು. ಸದಸ್ಯತ್ವ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಎಚ್‌ಎಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಸಚಿವ ಪರಮೇಶ್ವರ್
ಕೇಂದ್ರ ಕಸಾಪ ಕೋಶಾಧಿಕಾರಿ ಪಟೇಲ್ ಪಾಂಡು ಮಾತನಾಡಿ, ಕಸಾಪ ವತಿಯಿಂದ ಪ್ರತಿವರ್ಷ 2100 ದತ್ತಿ ಪ್ರಶಶ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತಿದೆ.ಪೊ›.ಸಿ.ಎಚ್.ಮರಿದೇವರ ಪ್ರಶಸ್ತಿಯನ್ನು ಬೆಂಗಳೂರು ಹೊರತಾಗಿ ಗ್ರಾಮೀಣ ಭಾಗದಲ್ಲಿ ನೀಡಬೇಕೆಂಬ ಆಲೋಚನೆ ಬಂದಾಗ, ಮರಿದೇವರ ಹುಟ್ಟೂರಾದ ತುಮಕೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು. ಪ್ರಶಸ್ತಿ ವಿಜೇತರೆಲ್ಲರಿಗೂ ಕಸಾಪ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕಸಾಪವನ್ನು ಆರ್ಥಿಕ ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಕೇಂದ್ರ ಸಂಘದ ಅಧ್ಯಕ್ಷರಾದ ಮಹೇಶ ಜೋಷಿ ಅವರು ಒಂದು ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಸುಮಾರು 4 ಲಕ್ಷ ಸದಸ್ಯರಿದ್ದು, ತುಮಕೂರು ಜಿಲ್ಲೆ ಪ್ರತಿಯೊಂದು ಹೋಬಳಿಯಿಂದಲೂ ತಲಾ 100 ಜನ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಮೆಡಿಕಲ್, ಎಂಜಿನಿಯರಿಂಗ್ ಹೆಸರಿನಲ್ಲಿ ಸಾಹಿತ್ಯ ಚಟುವಟಿಕೆಗಳಿಂದ ದೂರ ಸರಿಯುತ್ತಿರುವ ಯುವಜನರನ್ನು ಮತ್ತೆ ಸಾಹಿತ್ಯದ ಓದಿನ ಕಡೆಗೆ ಸೆಳೆಯುವ ಉದ್ದೇಶದಿಂದ ವಿನೂತನ ಕಾರ್ಯಕ್ರಮವನ್ನು ತುಮಕೂರು ಕಸಾಪ ರೂಪಿಸಿದೆ ಎಂದರು. ಇದೇ ವೇಳೆ 2022ನೇ ಸಾಲಿನ ಪೊ.ಸಿ.ಎಚ್.ಮರಿದೇವರು ದತ್ತಿ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಡಾ.ಡಿ.ಎನ್. ಯೋಗೀಶ್ವರಪ್ಪ, ಕ್ರೀಡಾ ಕ್ಷೇತ್ರದಿಂದ ಥ್ರೋಬಾಲ್ ಆಟಗಾರ ಸಾಗರ್.ಎಂ., ಕನ್ನಡ ಸೇವೆಗೆ ಸುಶೀಲಾ ಸದಾಶಿವಯ್ಯ,ಶಿಕ್ಷಣ ಕ್ಷೇತ್ರದಲ್ಲಿ ಧಾರವಾಡದ ಕೆ.ಇ. ಬೋರ್ಡ್ ಶಿಕ್ಷಣ ಸಂಸ್ಥೆಯ ಗೋವಿಂದರೆಡ್ಡಿ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ನಾಲ್ವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕೇಂದ್ರ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ನೇ.ಭ ರಾಮಲಿಂಗಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮಹದೇವಪ್ಪ, ಉಮಾಮಹೇಶ್, ರಾಣಿ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಗತ್ತಿಗೆ 7588 ಭಾಷೆಗಳಲ್ಲಿ ಶೇ.40ರಷ್ಟುಭಾಷೆಗಳು ಬಳಕೆ ಮಾಡುವವರಿಲ್ಲದೆ ಅಳಿವಿನ ಅಂಚಿಗೆ ಸೇರಿವೆ. ದ್ರಾವಿಡ ಭಾಷೆಗಳೆಂದು ಕರೆಯುವ ದಕ್ಷಿಣ ಭಾರತದ ಭಾಷೆಗಳಲ್ಲಿಯೇ ಕನ್ನಡ ಅತ್ಯಂತ ಪರಿಪೂರ್ಣ ಭಾಷೆ. ಹಿಂದಿ, ಇಂಗ್ಲಿಷ್ ಆಗಲಿ ಸಮೀಕ್ಷೆಯ ಪ್ರಕಾರ ಪರಿಪೂರ್ಣ ಭಾಷೆಯಲ್ಲ. ಆದರೆ ನಮ್ಮ ಯುವಜನರಲ್ಲಿ ಕನ್ನಡದ ಬಗ್ಗೆ ಅಭಿಮಾನ ಕುಗ್ಗುತ್ತಿರುವ ಪರಿಣಾಮ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ. 64ರಷ್ಟಿದೆ. ಪ್ರತಿಷ್ಠೆ, ಕೀಳಿರಿಮೆಯಿಂದ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸಿದೆ. ಇದನ್ನು ಯುವಜನರು ಹೆಚ್ಚು ಹೆಚ್ಚು ಬಳಸುವಂತಾಗಬೇಕು.
-ಡಾ.ಮಹೇಶ್ ಜೋಶಿ ಕಸಾಪ ಅಧ್ಯಕ್ಷ
ಗಣಿಗಾರಿಕೆ ನಿಯಮ ಸರಳೀಕರಣಕ್ಕೆ ಸರ್ಕಾರ ಚಿಂತನೆ: ಸಚಿವ ಮಹದೇವಪ್ಪ
ಸಿ.ಎಚ್.ಮರಿದೇವರು ಮತ್ತು ನಾನು ಒಂದೇ ತಾಲೂಕಿನವರು. ಅವರ ನೇರ ಮತ್ತು ನಿಷ್ಠೂರ ನಡೆ ಹಾಗೂ ಯಾವುದಕ್ಕೂ ರಾಜಿ ಮಾಡಿಕೊಳ್ಳದ ಅವರ ಸ್ವಭಾವ ನನಗೆ ಬಹಳ ಇಷ್ಟ. ಕನ್ನಡ ಭವನ ಕಟ್ಟಬೇಕೆಂಬ ಅವರ ಒತ್ತಾಸೆಯ ಫಲವಾಗಿ 2001ರಲ್ಲಿ ನಡೆದ 69ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರಿ ನೌಕರರು ನೀಡಿದ ದೇಣಿಯನ್ನು ಬಳಸಿ, ಟೂಡಾದಿಂದ ನಿವೇಶನ ಖರೀದಿಸಿ, ಕನ್ನಡ ಭವನ ನಿರ್ಮಿಸಲಾಗಿದೆ. ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ಕಸಾಪ ಜೊತೆ ಕೈಜೋಡಿಸುವೆ.’
-ಟಿ.ಬಿ.ಜಯಚಂದ್ರ ಶಿರಾ ಶಾಸಕ