ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ ಮೂರು ದಿನದ ಅವಧಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಂಚರಿಸಿದ್ದಾರೆ.
ಎಂ.ಅಫ್ರೋಜ್ ಖಾನ್
ರಾಮನಗರ (ಜೂ.15): ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ ಮೂರು ದಿನದ ಅವಧಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಂಚರಿಸಿದ್ದಾರೆ. ರೈಲು ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಶೇ.90ರಷ್ಟು ಮಹಿಳೆಯರು ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಸಾರಿಗೆ ಬಸ್ ಗಳು ಫುಲ್ ರಶ್ ಆಗಿ ಸಂಚರಿಸುತ್ತಿವೆ.
ಕೆಎಸ್‌ಆರ್‌ಟಿಸಿ ರಾಮನಗರ ಘಟಕ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಆನೇಕಲ್ ಸೇರಿದಂತೆ ಒಟ್ಟು ಆರು ಡಿಪೋಗಳಿಂದ ಬಸ್‌ಗಳು ಕಾರ್ಯ ಸಂಚಾರ ಮಾಡುತ್ತಿದ್ದು, ಗ್ಯಾರೆಂಟಿ ಜಾರಿ ಬಳಿಕ ಪ್ರತಿ ನಿತ್ಯ ಸುಮಾರು 45 ಸಾವಿರದಂತೆ ಈವರೆಗೆ 1.35 ಲಕ್ಷ ಮಹಿಳಾ ಪ್ರಯಾಣಿಕರು ಸಾರಿಗೆ ಬಸ್‌ನಲ್ಲಿ ಸಂಚರಿಸಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಕೇವಲ ವದಂತಿ: ಎಚ್.ಡಿ.ಕುಮಾರಸ್ವಾಮಿ
ಸದ್ಯಕ್ಕೆ ಮೈಸೂರು - ಬೆಂಗಳೂರು ಮಾರ್ಗದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿನಿಯರು, ಮಹಿಳಾ ಕಾರ್ಮಿಕರ ಹೊರತಾಗಿ ನಗರ, ಪಟ್ಟಣಗಳಿಗೆ ಕೆಲಸದ ನಿಮಿತ್ತ ಸಂಚರಿಸುವ ಮಹಿಳೆಯರು ಖಾಸಗಿ ವಾಹನಗಳ ಬದಲು ಬಸ್ ಮೊರೆ ಹೋಗುತ್ತಿರುವುದು ಹೆಚ್ಚುತ್ತಿದೆ. ಚನ್ನಪಟ್ಟಣ, ರಾಮನಗರ, ಮಾಗಡಿ ಹಾಗೂ ಕನಕಪುರ ಭಾಗದಲ್ಲಿ ಖಾಸಗಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಮಹಿಳೆಯರು ಈಗ ಸಾರಿಗೆ ಬಸ್ ಸಂಚಾರಕ್ಕೆ ಆದ್ಯತೆ ನೀಡುತ್ತಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಸಹ ಬಸ್ಸಿಗೆ ಬಂದಿದ್ದಾರೆ. ಇದರಿಂದಾಗಿ ಸಾರಿಗೆ ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಮೊದಲಿಗಿಂತ ಏರಿಕೆಯಾಗುತ್ತಿದೆ. ಅಗತ್ಯ ದಾಖಲೆಗಳನ್ನು ಪ್ರದರ್ಶಿಸಿ ಉಚಿತ ಪ್ರಯಾಣದ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಪುರುಷರಿಗೆ ಶೇ.50ರಷ್ಟುಸೀಟು ಮೀಸಲಿಡಬೇಕೆಂಬ ನಿಯಮ ಯಾವ ಬಸ್ಸಿನಲ್ಲೂ ಪಾಲನೆ ಆಗುತ್ತಿಲ್ಲ. ಮಹಿಳಾ ಪ್ರಯಾಣಿಕರೇ ಹೆಚ್ಚಾಗಿರುವ ಕಾರಣ ಪುರುಷ ಪ್ರಯಾಣಿಕರು ನಿಂತುಕೊಂಡು ಪ್ರಯಾಣಿಸುವುದು ಅನಿವಾರ್ಯವಾಗಿದೆ.
ನಾರಿ ಶಕ್ತಿ ಎದುರು ಖಾಸಗಿ ಬಸ್ ನಿಶ್ಯಕ್ತಿ: ಮಹಿಳೆಯರಿಗಾಗಿ ಜಾರಿಯಾಗಿರುವ ಸಾರಿಗೆಬಸ್ನಲ್ಲಿ ಉಚಿತ ಪ್ರಯಾಣದಿಂದ ಖಾಸಗಿ ಬಸ್ ಗಳಿಗೆ ಬಿಸಿ ತಟ್ಟಿದೆ. ಖಾಸಗಿ ಬಸ್‌ಗಳು ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ, ಕೊಳ್ಳೆಗಾಲ,ಬೆಂಗಳೂರು ಹಾಗೂ ಗ್ರಾಮೀಣ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಜಿಲ್ಲೆಯಲ್ಲಿ ಸುಮಾರು 200 ಖಾಸಗಿ ಬಸ್ ಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಆದರೀಗ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಸಿಕ್ಕಿದ ಮೇಲೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಹೀಗಾಗಿ ಖಾಸಗಿ ಬಸ್‌ಗಳು ಖಾಲಿಯಾಗಿ ಓಡಾಡುತ್ತಿವೆ.
ಪ್ರಯಾಣಿಕರ ಪರದಾಟ: ಶಕ್ತಿ ಯೋಜನೆ ಎಫೆಕ್ಟ್ನಿಂದಾಗಿ ಚನ್ನಪಟ್ಟಣ - ರಾಮನಗರದಲ್ಲಿ ಪ್ರಯಾಣಿಕರು ಪರದಾಟ ಅನುಭವಿಸುವ ಸ್ಥಿತಿ ಎದುರಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣದಿಂದಾಗಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆಯ ದೆಸೆಯಿಂದ, ಚನ್ನಪಟ್ಟಣ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿ ಹತ್ತಲು ಜಾಗ ಸಿಗದೇ ಪರದಾಟ ಉಂಟಾಗುತ್ತಿದೆ. ಸರ್ಕಾರ ಉಚಿತ ಪ್ರಯಾಣಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಕೆಲವರು ಆಗ್ರಹಿಸಿದರು.
ರಾಮನಗರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಸುಮಾರು 65 ಸಾವಿರಕ್ಕೂ ಹೆಚ್ಚು ಮಹಿಳೆಯರು ಯೋಜನೆಯ ಫಲಾನುಭವಿಗಳಿದ್ದಾರೆ. ವಿದ್ಯಾರ್ಥಿನಿಯರು ಸೇರಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಸದ್ಯ ಪ್ರತಿನಿತ್ಯ ಸರಾಸರಿ 45 ಸಾವಿರ ಮಹಿಳೆಯರು ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ವಿಭಾಗವಾರು ಪ್ರಯಾಣಿಕರ ನಿಖರ ಮಾಹಿತಿ, ಪ್ರಯಾಣದ ಮೊತ್ತ ಎಷ್ಟೆಂಬುದು ಒಂದು ತಿಂಗಳ ಬಳಿಕ ಗೊತ್ತಾಗಲಿದೆ.
- ಜಗದೀಶ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ರಾಮನಗರ
ರಾಮಲಿಂಗಾರೆಡ್ಡಿಗೆ ರಾಮನೂರಿನ ಉಸ್ತುವಾರಿ ಹೊಣೆ: ಎಚ್‌ಡಿಕೆ-ಡಿಕೆಶಿ ಕರ್ಮಭೂಮಿಯಲ್ಲಿ ರೆಡ್ಡಿ ಪರ್ವ ಶುರು
ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಖಾಸಗಿ ಬಸ್ ಗಳ ಮೇಲೆ ತೀವ್ರತರವಾದ ಹೊಡೆತ ಬಿದ್ದಿದೆ. ಪ್ರಯಾಣಿಕರಿಲ್ಲದೆ ಕಲೆಕ್ಷನ್ ಕೂಡ ಆಗುತ್ತಿಲ್ಲ. ಡೀಸೆಲ್ ಹಾಕಿಸಲು, ಬಸ್ ನಿರ್ವಹಣೆ ಮಾಡಲೂ ಕಷ್ಟವಾಗುತ್ತಿದೆ. ಬಸ್‌ಗಳು ರಸ್ತೆಗಿಳಿದರು ನಷ್ಟ, ರಸ್ತೆಗಿಳಿಯದಿದ್ದರು ನಷ್ಟಅನುಭವಿಸುವಂತಾಗಿದೆ.
- ಕಿರಣ್ ಬಾಬು, ಜಿಲ್ಲಾಧ್ಯಕ್ಷರು, ಖಾಸಗಿ ಬಸ್ ಮಾಲೀಕರ ಸಂಘ, ರಾಮನಗರ