ಸೌಮ್ಯ ನನಗೆ ಸ್ಪರ್ಧಿಯಲ್ಲ : ವಿಜಯ್ ಕುಮಾರ್ ಕೊನೆಯ ಸಂದರ್ಶನ

First Published May 4, 2018, 8:55 AM IST
Highlights

ಬೆಂಗಳೂರಿನ ಪ್ರಸಿದ್ಧ ಕ್ಷೇತ್ರವಾಗಿದ್ದ ಜಯನಗರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರು ನಿನ್ನೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಕನ್ನಡ ಪ್ರಭದಲ್ಲಿ ಪ್ರಕಟವಾದ ಅವರ ಕೊನೆಯ ಸಂದರ್ಶನ ಇಂತಿದೆ. 

ಎನ್.ಎಲ್.ಶಿವಮಾದು

ಬೆಂಗಳೂರು  :  ಬೆಂಗಳೂರಿನ ಪ್ರಸಿದ್ಧ ಕ್ಷೇತ್ರವಾಗಿದ್ದ ಜಯನಗರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರು ನಿನ್ನೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಕನ್ನಡ ಪ್ರಭದಲ್ಲಿ ಪ್ರಕಟವಾದ ಅವರ ಕೊನೆಯ ಸಂದರ್ಶನ ಇಂತಿದೆ. 

ಬೆಂಗಳೂರು ನಗರದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಗಳಲ್ಲಿದ್ದ ಅಭ್ಯರ್ಥಿಗಳ ಪೈಕಿ ಜಯನಗರ ಕ್ಷೇತ್ರದ ಬಿ.ಎನ್.ವಿಜಯಕುಮಾರ್ ಕೂಡ ಒಬ್ಬರಾಗಿದ್ದರು. ಎರಡು ಬಾರಿ ಸೋತು, ಸತತ ಎರಡು ಬಾರಿಗೆಲುವು ಸಾಧಿಸಿ ಮೂರನೇ ಗೆಲುವಿಗೆ ಪ್ರಚಾರ ನಡೆಸುತ್ತಿದ್ದರು. ಮೂಲತಃ ಸೌಮ್ಯ ಸ್ವಭಾವದವರಾಗಿದ್ದ ವಿಜಯಕುಮಾರ್ ಅವರು ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿಯೂ ಆಗಿರುವ ಕಾಂಗ್ರೆಸ್ಸಿನ ಪ್ರಬಲ ಅಭ್ಯರ್ಥಿ ಸೌಮ್ಯರೆಡ್ಡಿ ಅವರನ್ನು ಈ ಬಾರಿ ಹೇಗೆ ಎದುರಿಸಲಿದ್ದರು ಎನ್ನುವ ಬಗ್ಗೆ ‘ಕನ್ನಡಪ್ರಭ’ಕ್ಕೆನೀಡಿದ್ದ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ್ದರು.


 ಕ್ಷೇತ್ರದಲ್ಲಿ ಹೇಗೆ ಸಾಗಿದೆ ಪ್ರಚಾರ?

ಕಳೆದ ಐದು ಚುನಾವಣೆಗಳಿಂದ ಇದೇ ಕ್ಷೇತ್ರದಲ್ಲಿ ಸ್ಪರ್ಧಿಯಾಗಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಕನಿಷ್ಠ ಶೇ.೮೦ರಷ್ಟು ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸುತ್ತೇನೆ. ೧೦ ವರ್ಷದಲ್ಲಿ ಕೈಗೊಂಡ ಕಲ್ಯಾಣ ಕಾರ್ಯ ಕ್ರಮಗಳನ್ನು ಹೇಳಿ ಮತಯಾಚಿಸುತ್ತಿದ್ದೇನೆ.

ಹ್ಯಾಟ್ರಿಕ್ ಗೆಲುವಿನ ವಿಶ್ವಾಸವಿದೆಯೇ? 


ನೂರಕ್ಕೆ ನೂರು ವಿಶ್ವಾಸವಿದೆ. ಇಡೀ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಸಮಸ್ಯೆ ತಿಳಿದು ಪರಿಹಾರ ಕಲ್ಪಿಸಲಾಗುತ್ತಿದೆ. ಪ್ರತಿದಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದೇನೆ.

ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ನಿಮಗೆ ಪ್ರಬಲ ಎದುರಾಳಿಯಾಗಿದ್ದಾರಂತೆ?

ಇಲ್ಲ. ಬಿಜೆಪಿ - ಕಾಂಗ್ರೆಸ್ ಮುಖಾಮುಖಿ ಫೈಟ್ ಇದೆ ಅದನ್ನು ಒಪ್ಪುತ್ತೇನೆ. ಆದರೆ ಸೌಮ್ಯರೆಡ್ಡಿ ಅವರ ಅಪ್ಪನ ಪ್ರಭಾವದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಯಾವ ಆಧಾರದಲ್ಲಿ ಮತ ಕೇಳುತ್ತಾರೆ? ಅಪ್ಪನ ಹೆಸರು ಹೇಳಿ ಮತಯಾಚಿಸುತ್ತಿದ್ದಾರೆ. ಅಪ್ಪ ಕ್ಷೇತ್ರ ಬಿಟ್ಟು 10 ವರ್ಷ ಆಯ್ತು.

 ಜಯನಗರದಲ್ಲಿ ಕಸದ ಸಮಸ್ಯೆ ಹಾಗೇ ಉಳಿದಿದೆ ಎಂದು ಪ್ರತಿಸ್ಪರ್ಧಿ ಸೌಮ್ಯರೆಡ್ಡಿ ಆಪಾದಿಸಿದ್ದಾರಲ್ಲ?

ಕಸದ ಸಮಸ್ಯೆ ಬಗೆಹರಿಸುತ್ತೇನೆ ಎನ್ನುವ ಸೌಮ್ಯರೆಡ್ಡಿ ಅವರು ಬಿಟಿಎಂ ಕ್ಷೇತ್ರದಲ್ಲಿ ಕಸದ ಸಮಸ್ಯೆ ಹೇಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ. ಕಸದ ಸಮಸ್ಯೆ ಜಯನಗರ ಮಾತ್ರವಲ್ಲ, ಇಡೀ ಬೆಂಗಳೂರನ್ನೇ ಆವರಿಸಿದೆ.

ಯುವ ಜನರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯಾವ ಕ್ರಮ ಕೈಗೊಂಡಿದ್ದೀರಿ? 

2012 ಹಾಗೂ 2017ರಲ್ಲಿ 2 ಬಾರಿ ಮೆಗಾ ಜಾಬ್ ಮೇಳ ಮಾಡಿದ್ದೇನೆ. ಒಮ್ಮೆ ೬ ಸಾವಿರ, ಮತ್ತೊಮ್ಮೆ ಮೂರೂವರೆ ಸಾವಿರ ಜನರಿಗೆ ಕೆಲಸ ಕೊಡಿಸಲಾಗಿದೆ. ಪ್ರತಿ ತಿಂಗಳು ಕೌಶಲ್ಯಾಭಿವೃದ್ಧಿ ತರಬೇತಿಗಳ ಮೂಲಕ ಕನಿಷ್ಠ ೩೦ ಜನರಿಗೆ ಉದ್ಯೋಗ ದೊರಕಿಸಿಕೊಡಲಾಗು ತ್ತಿದೆ. ಕಾಂಗ್ರೆಸ್‌ನವರು ಈಗ ಭರವಸೆ ನೀಡು ತ್ತಿದ್ದಾರೆ. ಈಗಾಗಲೇ ಅನುಷ್ಠಾನ ಮಾಡಿದ್ದೇನೆ. ಇಡೀ ದೇಶದಲ್ಲಿಯೇ ಇರುವ ನಿರುದ್ಯೋಗ ಸಮಸ್ಯೆ ಜಯನಗರದಲ್ಲಿಯೂ ಇದೆ. 

 ಸೌಮ್ಯರೆಡ್ಡಿ ಯುವ ಜನರ ಐಕಾನ್ ಆಗಿ ಮತದಾರರನ್ನು ಸೆಳೆಯುತ್ತಾರಾ? 

ಕ್ಷೇತ್ರದ ಜನರಿಗೆ ಚುನಾಯಿತ ಪ್ರತಿನಿಧಿ ಯುವಕರಾಗಿದ್ದಾರಾ ಅಥವಾ ಹಿರಿಯರಾಗಿದ್ದಾರಾ ಎಂಬುದು ಮುಖ್ಯವಲ್ಲ. ಅಭಿವೃದ್ಧಿ ಕಾರ್ಯಗಳನ್ನು ಯಾರು ಕೈಗೊಳ್ಳುತ್ತಾರೆ ಎಂಬುದು ಮುಖ್ಯ. ಕೆಲಸ ಮಾಡಿರುವವರಿಗೆ ಜನ ಮತ ಹಾಕುತ್ತಾರೆ ಅಷ್ಟೇ.

 ಈ ಬಾರಿಯ ನಿಮ್ಮ ಅಜೆಂಡಾ ಏನು?

ಶಿಕ್ಷಣ, ಪರಿಸರ, ಉದ್ಯಾನ, ಆಟದ ಮೈದಾನ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಭ್ರಷ್ಟಾಚಾರ, ಢೋಂಗಿತನವಿಲ್ಲ. ಯಾವುದೇ ರೀತಿಯಲ್ಲಿ ಕಪ್ಪು ಚುಕ್ಕೆ ಇಲ್ಲ. ಇದನ್ನೇ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇನೆ. ಭದ್ರತಾ ದೃಷ್ಟಿಯಿಂದ ೫೦೦ ಕ್ಯಾಮೆರಾ ಅಳವಡಿಕೆ, ಶೇಕಡ 100 ಮಳೆ ನೀರು ಕೊಯ್ಲು, ಸ್ಪರ್ಧಾತ್ಮಕ ಪರೀಕ್ಷೆಗಳ ಮಕ್ಕಳಿಗೆ ತರಬೇತಿ ನೀಡುವ ಪ್ರಣಾಳಿಕೆ ತಯಾರಿಸಲಾಗಿದೆ.

click me!