ಚುನಾವಣೆ ಬಳಿಕವೂ ಸರಳತೆ ಮುಂದುವರಿಕೆ : ರವಿಕೃಷ್ಣಾ ರೆಡ್ಡಿ

First Published May 3, 2018, 1:39 PM IST
Highlights

ದಶಕಗಳ ಕಾಲ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರವಿಕೃಷ್ಣಾ ರೆಡ್ಡಿ ಸಾಮಾಜಿಕ ಕಳಕಳಿಯಿಂದಾಗಿ ನಗರಕ್ಕೆ ವಾಪಸ್ ಆಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಆಮ್ ಆದ್ಮಿ ಪಕ್ಷ ಕಟ್ಟಲು ಸಾಕಷ್ಟು ಪ್ರಯತ್ನಿಸಿ ನಂತರ ನಿರಾಶರಾಗಿ ಅದರಿಂದ  ಹೊರಬಂದರು. ಇದೀಗ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಪ್ರಭುಸ್ವಾಮಿ ನಟೇಕರ್

ಬೆಂಗಳೂರು : ದಶಕಗಳ ಕಾಲ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರವಿಕೃಷ್ಣಾ ರೆಡ್ಡಿ ಸಾಮಾಜಿಕ ಕಳಕಳಿಯಿಂದಾಗಿ ನಗರಕ್ಕೆ ವಾಪಸ್ ಆಗಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಆಮ್ ಆದ್ಮಿ ಪಕ್ಷ ಕಟ್ಟಲು ಸಾಕಷ್ಟು ಪ್ರಯತ್ನಿಸಿ ನಂತರ ನಿರಾಶರಾಗಿ ಅದರಿಂದ  ಹೊರಬಂದರು. ಇದೀಗ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಬಳಿಕ ಲಂಚಮುಕ್ತ ನಿರ್ಮಾಣ ವೇದಿಕೆ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ವಿಜಯಕುಮಾರ್ ಮತ್ತು ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅವರು ಚುನಾವಣಾ ಪ್ರಚಾರದ ವೇಳೆ ವೇಳೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಿಷ್ಟು. 

? ಪ್ರಬಲ ಅಭ್ಯರ್ಥಿಗಳ ವಿರುದ್ಧ ಚುನಾವಣಾ ಅಖಾಡದಲ್ಲಿರುವ ನಿಮ್ಮ ಪ್ರಚಾರ ಹೇಗೆ ಸಾಗಿದೆ?

ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಚೆನ್ನಾಗಿ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳಿಗಿಂತ ಕಡಿಮೆ ಇಲ್ಲದಂತೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ಪ್ರತಿಷ್ಠಿತ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಯನಗರದಲ್ಲಿ ಶ್ರೀಮಂತ ವರ್ಗ ಮಾತ್ರವಲ್ಲ ಬಡತನ ರೇಖೆಗಿಂತ ಕೆಳಗಿರುವ ಜನರು ಸಹ ಇದ್ದಾರೆ. ಅವರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಶಾಸಕರು ವಿಫಲವಾಗಿದ್ದಾರೆ. ಮೂಲಸೌಕರ್ಯಗಳನ್ನು
ಕಲ್ಪಿಸದ ನಾಯಕರ ಬಗ್ಗೆ ಅಸಮಾಧಾನ ಇದೆ. ನನಗೆ ಬಡವರಿಂದ ವ್ಯಾಪಕ ಬೆಂಬಲ ಲಭ್ಯವಾಗುತ್ತಿದೆ.

? ಚುನಾವಣೆಗಾಗಿ ಒಂದು ನೋಟು ಒಂದು ವೋಟು ಎಂದು ಜನರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದೀರಿ. ಈವರೆಗೆ ಎಷ್ಟು ದೇಣಿಗೆ ಸಂಗ್ರಹವಾಗಿದೆ?

ಈವರೆಗೆ ಸುಮಾರು ಎಂಟು ಲಕ್ಷ ರು.ಗಳಷ್ಟು ದೇಣಿಗೆ ಸಂಗ್ರಹವಾಗಿದೆ. ನಾನು ಸಹ ಐದು ಲಕ್ಷ ರು. ಖರ್ಚು ಮಾಡುತ್ತಿದ್ದೇನೆ. ಚುನಾವಣಾ ಆಯೋಗವು 28 ಲಕ್ಷ ರು. ನಿಗದಿ ಪಡಿಸಿದ್ದು, ಅಷ್ಟರೊಳಗೆ ಪ್ರಚಾರ ಮಾಡಲಾಗುವುದು. ಇನ್ನಷ್ಟು ದೇಣಿಗೆ ಸಂಗ್ರಹವಾಗಿರುವ ನಿರೀಕ್ಷೆ ಇದೆ. ಎಲ್ಲದಕ್ಕೂ ಉತ್ತರದಾಯಿತ್ವ ಇರಲಿದೆ. 

? ಕಳೆದ ಎರಡು ಅವಧಿಗೆ ಶಾಸಕರಾಗಿರುವ ವಿಜಯಕುಮಾರ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅವರ ವಿರುದ್ಧ ಗೆಲುವು ಸಾಧ್ಯವೆ?

ಈಗಾಗಲೇ ಅಭಿವೃದ್ಧಿಯಾಗಿರುವ ಪ್ರದೇಶಗಳನ್ನೇ ಅಭಿವೃದ್ಧಿ ಮಾಡಿರುವುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಜಯನಗರ ಕ್ಷೇತ್ರದಲ್ಲಿ ಬಡತನ ಇದೆ. ಇದು ಶಾಸಕರ ಕಣ್ಣಿಗೆ ಬಿದ್ದಿಲ್ಲ. ಶಾಸಕರ ವಿರುದ್ಧ ಕ್ಷೇತ್ರದಲ್ಲಿ ವಿರೋಧ ಅಲೆ ಇರುವುದು ಪ್ರಚಾರದಲ್ಲಿ ಗೊತ್ತಾಗಿದೆ. ಕ್ಷೇತ್ರದ ಜನರಿಗೆ ಶಾಸಕರು ಸುಳ್ಳು ಭರವಸೆ ನೀಡಿ ಮರಳು ಮಾಡಿದ್ದಾರೆ. ಇದು ಈ ಬಾರಿ ನಡೆಯುವುದಿಲ್ಲ. ಕೊಳಗೇರಿ ಪ್ರದೇಶ
ಗಳಿದ್ದು, ಜ್ವಲಂತ ಸಮಸ್ಯೆಗಳಿವೆ. ಈ ಬಗ್ಗೆ ಶಾಸಕರು ಗಮನವೇ ಹರಿಸಿಲ್ಲ. ಕ್ಷೇತ್ರದಲ್ಲಿ ನನಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗೆಲ್ಲುವ ವಿಶ್ವಾಸ ಇದೆ.

? ಕಾಂಗ್ರೆಸ್ಸಿನ ಸೌಮ್ಯ ರೆಡ್ಡಿ ಅವರ ಬೆಂಬಲಕ್ಕೆ ತಂದೆ ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ನಿಂತಿದ್ದಾರೆ?

ಸೌಮ್ಯ ರೆಡ್ಡಿಗೆ ತಂದೆಯ ಬೆಂಬಲ ಇರಬಹುದು. ಆದರೆ, ಕ್ಷೇತ್ರದ ಜನರ ಬೆಂಬಲ ಬೇಕು. ತಂದೆ ಬೆನ್ನಿಗೆ ನಿಂತ ಮಾತ್ರಕ್ಕೆ ಜಯಗಳಿಸುತ್ತಾರೆ ಎಂಬುದು ಸುಳ್ಳು. ಜನರ ಪರಿಚಯ ಇರಬೇಕು. ಅಷ್ಟಕ್ಕೂ, ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಹೇಗೆ ಗೆಲ್ಲುತ್ತಾ ಬರುತ್ತಿದ್ದಾರೆ ಎಂಬುದು ಗೊತ್ತಿದೆ. ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ದುರ್ಬಲ ಅಭ್ಯರ್ಥಿಯನ್ನು ಪ್ರತಿಸ್ಪರ್ಧಿಯನ್ನಾಗಿ ಕಣಕ್ಕಿಳಿಸಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಒಳಒಪ್ಪಂದ ಮಾಡಿಕೊಳ್ಳುತ್ತಾರೆ. ಸೌಮ್ಯರೆಡ್ಡಿ ಈ ಬಾರಿ ಠೇವಣಿ ಉಳಿಸುವುದು ಕೊಳ್ಳುವುದು ಡೌಟು. 

? ರಾಷ್ಟ್ರೀಯ ಪಕ್ಷಗಳ ಪ್ರಚಾರಕ್ಕಿಂತ ನಿಮ್ಮ ಪ್ರಚಾರ ಹೇಗೆ ಭಿನ್ನ?

ಜನಸಮಾನ್ಯರನ್ನು ಖುದ್ದಾಗಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತೇನೆ. ಅವುಗಳನ್ನು ಬಗೆಹರಿಸುವ ಯೋಚನೆಯಲ್ಲಿ ಟಿಪ್ಪಣ್ಣಿ ಕೂಡ ಮಾಡಿಕೊಳ್ಳುತ್ತೇನೆ. ರಾತ್ರಿ ವೇಳೆ ಬೀದಿ ವಾಸ್ತವ್ಯ ಮಾಡು ತ್ತೇನೆ. ಅವರು ಸೇವಿಸುವ ಆಹಾರವನ್ನೇ ಸೇವನೆ ಮಾಡಿ ಅವರಲ್ಲೊ ಬ್ಬನಂತೆ ಇದ್ದು ವಿಷಯಗಳನ್ನು ತಿಳಿದುಕೊಳ್ಳುತ್ತೇನೆ. ಹೀಗೆ ಕ್ಷೇತ್ರದ ಹಲವೆಡೆ ಈಗಾಗಲೇ ವಾಸ್ತವ್ಯ ಹೂಡಿ ಹಲವು ಮಾಹಿತಿಗಳನ್ನು
ಪಡೆದುಕೊಂಡಿದ್ದೇನೆ.

? ಇದು ಕೇವಲ ಚುನಾವಣಾ ಗಿಮಿಕ್ ಮಾತ್ರನಾ?

ಯಾವ ಚುನಾವಣಾ ಗಿಮಿಕ್ ಇಲ್ಲ. ಸರಳತೆ ಜೀವನವನ್ನು ಮೊದಲಿನಿಂದಲೂ ಮೈಗೂಡಿಸಿಕೊಂಡು ಜೀವನ ನಡೆಸುತ್ತಿದ್ದೇನೆ. ನನ್ನ ಬಳಿಯೂ ಹಣ ಇದೆ. ಅಮೆರಿಕದಲ್ಲಿ ಇದ್ದು ಬಂದವನು. ಆದರೆ, ವೈಭವ ಜೀವನಕ್ಕೆ ಜೋತು ಬೀಳದೆ ಸರಳ ಜೀವನ ನಡೆಸು ವುದು ನನ್ನ ಧ್ಯೇಯ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಚುನಾವಣಾ ಬಳಿಕವೂ ಸರಳತೆಯಲ್ಲಿ ಯಾವುದೇ ಬದಲಾವಣೆಯಾ
ಗುವುದಿಲ್ಲ.

? ನೀವು ಆಮ್ ಆದ್ಮಿ ಪಕ್ಷ ತೊರೆದು ಬಂದವರು. ಈಗ ಆ ಪಕ್ಷದಿಂದ ಜಯನಗರ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನೂ ಕಣಕ್ಕಿಳಿಸಿಲ್ಲವಲ್ಲ?

ಆಮ್ ಆದ್ಮಿ ಪಕ್ಷ ಮಾತ್ರವಲ್ಲ, ಪಕ್ಷಾತೀತವಾಗಿ ನನ್ನ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಆಮ್ ಆದ್ಮಿ ಪಕ್ಷವು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ಬಗ್ಗೆ ಮಾಹಿತಿ ಇಲ್ಲ. ಎಲ್ಲ ಪಕ್ಷದಲ್ಲಿಯೂ ಉತ್ತಮ ಸ್ನೇಹಿತರಿದ್ದಾರೆ. ಅವರೆಲ್ಲರ ಬೆಂಬಲ ಚುನಾವಣೆಯಲ್ಲಿ ಇದೆ.

? ಚುನಾವಣೆಯಲ್ಲಿ ಗೆದ್ದರೆ ಏನು ಮಾಡುತ್ತೀರಿ?

ಮೊದಲಿಗೆ ಒಂದೇ ತಿಂಗಳಲ್ಲಿ ಕ್ಷೇತ್ರದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಲಂಚ ಮುಕ್ತ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ವ್ಯವಸ್ಥೆ ಜಾರಿಯಾಗಲು ಹೋರಾಟ ನಡೆಸಿ ಸಫಲ ಕಂಡಿದ್ದೇನೆ. ಬಡವರಿಗೆ ಉತ್ತಮ ಶಿಕ್ಷಣ ಕಲ್ಪಿಸುವುದು, ಕಸದ ಸಮಸ್ಯೆ ನಿವಾರಣೆಗೆ ಹೆಚ್ಚಿನ ಒತ್ತು ನೀಡಲಾಗುವುದು.

click me!