ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಎಡವಟ್ಟುಗಳ ಸರಮಾಲೆ!

First Published Apr 29, 2018, 7:19 AM IST
Highlights

‘ಸರಸ್ವತಿ ಸಮ್ಮಾನ್‌ ಪುರಸ್ಕೃತ’ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಸಿದ್ಧಪಡಿಸಲಾಗಿರುವ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಅಸಂಬದ್ಧ ವಾಕ್ಯ ರಚನೆಗಳು ಹಾಗೂ ವಿಪರೀತ ವ್ಯಾಕರಣ ದೋಷಗಳು ಕಂಡುಬಂದಿವೆ.

ಬೆಂಗಳೂರು : ‘ಸರಸ್ವತಿ ಸಮ್ಮಾನ್‌ ಪುರಸ್ಕೃತ’ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಸಿದ್ಧಪಡಿಸಲಾಗಿರುವ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಅಸಂಬದ್ಧ ವಾಕ್ಯ ರಚನೆಗಳು ಹಾಗೂ ವಿಪರೀತ ವ್ಯಾಕರಣ ದೋಷಗಳು ಕಂಡುಬಂದಿವೆ. ಇವು ಪ್ರತಿಪಕ್ಷಗಳ ವಾಗ್ದಾಳಿಗೆ ಈಗ ಆಹಾರವಾಗಿದ್ದು, ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸಿವೆ. ಇಷ್ಟೇ ಅಲ್ಲ, ಕಾಂಗ್ರೆಸ್‌ ಸಾಧನೆ ವಿವರಿಸುವ ಭರದಲ್ಲಿ ತಪ್ಪು ಅಂಕಿ ಅಂಶ ಸರಮಾಲೆಯನ್ನೇ ನೀಡಲಾಗಿದ್ದು, ಇದು ಅಪಹಾಸ್ಯಕ್ಕೆ ಗುರಿಯಾಗಿದೆ.

ತನ್ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಬಿಜೆಪಿಯಿಂದ ಹಿಂದಿ ಹೇರಿಕೆ ಆಗುತ್ತಿದೆ’ ಎಂದು ಹಾಗೂ ‘ಬಿಜೆಪಿಯಿಂದ ಉತ್ತರ ಭಾರತದ ನಾಯಕರ ಅಮದು ಆಗುತ್ತಿದೆ’ ಎಂದು ಆಪಾದಿಸಿ ರೂಪಿಸುತ್ತಿರುವ ‘ಕನ್ನಡ ಆಸ್ಮಿತೆ’ ಪ್ರಚಾರ ತಂತ್ರಕ್ಕೆ ಮೊಯ್ಲಿ ಅವರ ಪ್ರಣಾಳಿಕೆಯಿಂದ ಭಾರಿ ಧಕ್ಕೆಯಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಪ್ಪು ಅಂಕಿ-ಅಂಶ:

ಪ್ರಣಾಳಿಕೆಯಲ್ಲಿ ಐಟಿ -ಬಿಟಿ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆಯನ್ನು ವಿವರಿಸುವಾಗ 300 ಶತಕೋಟಿ ಡಾಲರ್‌ ವಹಿವಾಟನ್ನು ರಾಜ್ಯದಲ್ಲಿ ನಡೆದಿದೆ ಎಂದು ಹೇಳಲಾಗಿತ್ತು. ಆದರೆ, ಕರ್ನಾಟಕದ ಒಟ್ಟು ನಿವ್ವಳ ಉತ್ಪನ್ನವೇ 300 ಶತಕೋಟಿ ಡಾಲರ್‌ನಷ್ಟುಇಲ್ಲ. ಇಂತಹ ಸ್ಪಷ್ಟವಾಗಿ ಎದ್ದುಕಾಣುವ ಹಲವು ಲೋಪದೋಷಗಳು ಪ್ರಣಾಳಿಕೆಯಲ್ಲಿದ್ದು, ಇದನ್ನು ಪ್ರತಿಪಕ್ಷಗಳು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡು ಕಾಂಗ್ರೆಸ್‌ ವಿರುದ್ಧ ತೀವ್ರವಾಗಿ ಹರಿಹಾಯ್ದಿವೆ.

ಕನ್ನಡ ಲೋಪ:  ಇನ್ನು ಬೆಂಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಶನಿವಾರ ಬಿಡುಗಡೆಯಾಗಿರುವ ಪ್ರಣಾಳಿಕೆಯ ಕನ್ನಡ ಅವತರಣಿಕೆ ಭಾರಿ ಮಟ್ಟದ ಲೋಪದೋಷಗಳಿಂದ ಕೂಡಿದೆ. ‘ನೀರು ಹರಿದು ಹೋಗುವುದುನ್ನು ತಡೆಗಟ್ಟಲು’ ಎಂಬುದನ್ನು ಹೇಳಲು, ‘ನೀಡು ಓಡಿ ಹೋಗುತ್ತಿದೆ’ ಎಂದು ತಪ್ಪು ತಪ್ಪಾಗಿ ಬರೆಯಲಾಗಿದೆ. ‘ಪ್ರಣಾಳಿಕೆ’ ಎಂಬುದನ್ನು ‘ಪ್ರನಾಳಿಕೆ’ ಎಂದು ಮುದ್ರಿಸಲಾಗಿದೆ. 16 ಪುಟಗಳ ಈ ಪ್ರಣಾಳಿಕೆಯಲ್ಲಿ ಸಾವಿರಾರು ತಪ್ಪುಗಳಿವೆ ಎಂಬ ಟೀಕೆಗಳು ಕೇಳಿಬಂದಿವೆ.

ಪ್ರತಿಪಕ್ಷಗಳಿಗೆ ಆಹಾರ:

ಇದನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಮುಂದಾಗಿರುವ ಪ್ರತಿಪಕ್ಷಗಳ ನಾಯಕರು ‘ಕಾಂಗ್ರೆಸ್‌ ಪ್ರಣಾಳಿಕೆಯಿಂದ ಕನ್ನಡದ ಕಗ್ಗೊಲೆಯಾಗಿದೆ’ ಎಂದು ಆರೋಪಿಸಿದ್ದಾರೆ. ಮೊಯ್ಲಿ ಅವರ ನೇತೃತ್ವದ ಸಮಿತಿ ರೂಪಿಸಿದ ಈ ಪ್ರಣಾಳಿಕೆಯ ಲೋಪದೋಷಗಳಿಗೆ ಪ್ರತಿಪಕ್ಷಗಳ ನಾಯಕರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಣೆಯಾಗಿಸಿ ಆರೋಪ ಮಾಡತೊಡಗಿದ್ದಾರೆ.

click me!