ಕುಮಾರ ಸ್ವಾಮಿಗೆ ಸಿದ್ದರಾಮಯ್ಯ ಮಧ್ಯವರ್ತಿ

First Published May 16, 2018, 11:40 AM IST
Highlights

ಯಾರ ಅಪ್ಪನ ಮೇಲೆ ಆಣೆ ಮಾಡಿ ಮುಖ್ಯಮಂತ್ರಿ ಯಾಗುವುದಿಲ್ಲ ಎಂದು ಹೇಳುತ್ತಿದ್ದರೋ ಅದೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ತಾವೇ ಪೌರೋಹಿತ್ಯ ವಹಿಸುವ ಪರಿಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಂದಿರುವುದು ಪ್ರಜಾಪ್ರಭುತ್ವದ ಚೋದ್ಯ. 

ಬೆಂಗಳೂರು : ಯಾರ ಅಪ್ಪನ ಮೇಲೆ ಆಣೆ ಮಾಡಿ ಮುಖ್ಯಮಂತ್ರಿ ಯಾಗುವುದಿಲ್ಲ ಎಂದು ಹೇಳುತ್ತಿದ್ದರೋ ಅದೇ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ತಾವೇ ಪೌರೋಹಿತ್ಯ ವಹಿಸುವ ಪರಿಸ್ಥಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಂದಿರುವುದು ಪ್ರಜಾಪ್ರಭುತ್ವದ ಚೋದ್ಯ. 

ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿ ಜನಪ್ರಿಯ ಯೋಜನೆಗಳ ಸುರಿಮಳೆ ಮಾಡಿ, ಜಾತಿ ಸಮೀಕರಣಕ್ಕೆ ಕೈಹಾಕಿ ಮತ್ತೊಮ್ಮೆ ಸಿದ್ಧ ಸರ್ಕಾರ ಎಂಬ ಘೋಷವಾಕ್ಯದಲ್ಲಿ ಚುನಾವಣೆಗೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಎಷ್ಟು ಉಗ್ರ ವಾಗ್ದಾಳಿ ನಡೆಸಿದರೋ ಅದಕ್ಕಿಂತ ಒಂದು ತೂಕ ಹೆಚ್ಚು ಎನಿಸುವಷ್ಟು ಕುಮಾರಸ್ವಾಮಿ ಅವರನ್ನು ಟೀಕಿಸಿದ್ದರು. 

ಬಿಜೆಪಿಯ ಬಿ-ಟೀಮ್ ಜೆಡಿಎಸ್ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರೆಯುವಂತೆ ಮಾಡಿದ್ದಲ್ಲದೆ, ತಾವು ಕೂಡ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಒಳ ಒಪ್ಪಂದವಾಗಿದೆ ಎಂಬುದನ್ನು ಸತತವಾಗಿ ಹೇಳತ್ತಾ ಸಾಗಿದ್ದ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂದೇ ಪ್ರತಿಪಾದಿಸುತ್ತಿದ್ದರು. 

ತಮ್ಮ ಪುತ್ರ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಎಂಬ ದೇವೇಗೌಡರ ಆಸೆಯನ್ನು ಅಣಕ ಮಾಡುತ್ತಿದ್ದ ಸಿದ್ದರಾಮಯ್ಯ ಅವರ ಮೇಲೆ ಬದಲಾದ ಪರಿಸ್ಥಿತಿಯಲ್ಲಿ ದೇವೇಗೌಡರ ಆಸೆ ಈಡೇರುವಂತೆ ಮಾಡುವ ಹೊಣೆಗಾರಿಕೆಯೇ ಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯದಂತೆ ತಪ್ಪಿಸಲು ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತಿದ್ದಂತೆಯೇ ಅದಕ್ಕೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಬೇಕಾಗಿ ಬಂದಿದೆ. ಅಷ್ಟೇ ಅಲ್ಲ, ತಾವೇ ಮುಂದೆ ನಿಂತು ಈ ಪ್ರಕ್ರಿಯೆಯನ್ನು ನಡೆಸುವಂತಹ ಸ್ಥಿತಿಯೂ ನಿರ್ಮಾಣವಾಗಿದೆ. 

ಹೀಗಾಗಿಯೇ ಕುಮಾರಸ್ವಾಮಿ ಅವರೊಂದಿಗೆ ರಾಜಭವನಕ್ಕೆ ತೆರಳಿ ಜೆಡಿಎಸ್ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಲು ಸಿದ್ದರಾಮಯ್ಯ ಮುಂದಾದರು. ಒಬ್ಬ ಸಿಎಂ ಆದವರು ಅಧಿಕಾರದಿಂದ ಇಳಿದ ಕೂಡಲೇ ರಚನೆ ಯಾಗಬಹುದಾದ ಸಮ್ಮಿಶ್ರ ಸರ್ಕಾರಕ್ಕೆ ಮಿತ್ರ ಪಕ್ಷದ ನಾಯ ಕರನ್ನು ಮುಖ್ಯಮಂತ್ರಿ ಮಾಡುವ ಸ್ಥಿತಿ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ನಿರ್ಮಾಣವಾಗಿರಲಿಲ್ಲ.  ಸಿದ್ದರಾಮಯ್ಯ ಬಾದಾಮಿಯಲ್ಲೂ ಗೆದ್ದಿರುವ ಕಾರಣ ವಿಧಾನಸಭೆ ಯಲ್ಲೂ ಭಾಗವಹಿಸಿ ಕುಮಾರಸ್ವಾಮಿ ಪರವಾಗಿ ಮತ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

click me!