9 ಎಂಎಲ್ಸಿ ಗಳ ಪೈಕಿ 5 ಮಂದಿಗೆ ಗೆಲುವು

First Published May 16, 2018, 1:02 PM IST
Highlights

ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ವಿಧಾನ ಪರಿಷತ್‌ನ ಒಂಬತ್ತು ಸದಸ್ಯರ ಪೈಕಿ ಐದು ಮಂದಿ ಮಾತ್ರ ಗೆಲುವು ಸಾಧಿಸಿದ್ದಾರೆ.

ಬೆಂಗಳೂರು : ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ವಿಧಾನ ಪರಿಷತ್‌ನ ಒಂಬತ್ತು ಸದಸ್ಯರ ಪೈಕಿ ಐದು ಮಂದಿ ಮಾತ್ರ ಗೆಲುವು ಸಾಧಿಸಿದ್ದಾರೆ. ಪರಿಷತ್ತಿನ ಪಕ್ಷೇತರ ಸದಸ್ಯರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಅವರು ರಾಜೀನಾಮೆ ನೀಡಿ ವಿಜಯಪುರ  ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಪರಿಷತ್ತಿನ ಬಿಜೆಪಿ ಸದಸ್ಯರಾಗಿದ್ದ ಸೋಮಣ್ಣ ಬೇವಿನಮರದ ಅವರು ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಹಾವೇರಿ ಜಿಲ್ಲೆ ಶಿಗ್ಗಾವಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಜಯ ಸಿಗಲಿಲ್ಲ. ಹೀಗಾಗಿ ಬೇವಿನಮರದ ಅವರ ಸ್ಥಿತಿ ಎಲ್ಲಿಯೂ ಇಲ್ಲದಂತಾಗಿದೆ.

ಉಳಿದಂತೆ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಕಣಕ್ಕಿಳಿದಿದ್ದ ಐದು ಮಂದಿ ಪರಿಷತ್ ಸದಸ್ಯರ ಪೈಕಿ ಕೊರಟಗೆರೆಯಿಂದ ಡಾ.ಜಿ. ಪರಮೇಶ್ವರ್, ಹೆಬ್ಬಾಳ ಕ್ಷೇತ್ರದಿಂದ ಬೈರತಿ ಸುರೇಶ್ ಅವರು ಮಾತ್ರ ಗೆಲುವು ಸಾಧಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಹಾಗೂ ಸಚಿವರಾಗಿದ್ದ ಎಚ್.ಎಂ. ರೇವಣ್ಣ ಅವರು ಚನ್ನಪಟ್ಟಣದಿಂದ, ಮೋಟಮ್ಮ ಅವರು ಮೂಡಿಗೆರೆಯಿಂದ, ಎಂ.ಡಿ.ಲಕ್ಷ್ಮೀ ನಾರಾಯಣ ಅವರು ಬೆಳಗಾವಿ ದಕ್ಷಿಣದಿಂದ ಸ್ಪರ್ಧಿಸಿ ಸೋತಿದ್ದಾರೆ. ಸುರೇಶ್ ಹಾಗೂ ಪರಮೇಶ್ವರ್ ಅವರು ವಿಧಾನಸಭೆಗೆ ಆಯ್ಕೆಯಾಗಿರುವುದರಿಂದ ಕಾಂಗ್ರೆಸ್‌ಗೆ ವಿಧಾನಪರಿಷತ್‌ನಲ್ಲಿ ಎರಡು ಸ್ಥಾನಗಳು ಕಡಿಮೆಯಾಗಿವೆ.

ಬಿಜೆಪಿ ಇಬ್ಬರ ಗೆಲುವು: ಬಿಜೆಪಿಯು ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಶಿವಮೊಗ್ಗ ನಗರ ಕ್ಷೇತ್ರದಿಂದ ಹಾಗೂ ವಿ.ಸೋಮಣ್ಣ ಅವರನ್ನು ಗೋವಿಂದರಾಜ ನಗರ ಕ್ಷೇತ್ರದಿಂದ ಕಣಕ್ಕಿಳಿಸಿ, ಅವರು ಗೆದ್ದಿರುವುದರಿಂದ ಇದೀಗ ಬಿಜೆಪಿಗೆ ವಿಧಾನ ಪರಿಷತ್ತಿನಲ್ಲಿ ಎರಡು ಸ್ಥಾನಗಳು ಕಡಿಮೆಯಾಗಲಿವೆ. ಇನ್ನು ಜೆಡಿಎಸ್‌ನಿಂದ ಹಾಲಿ ವಿಧಾನಪರಿಷತ್ ಸದಸ್ಯ ಸಿ.ಆರ್. ಮನೋಹರ್ ಅವರು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಿಂದ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಲಾಗಲಿಲ್ಲ.

click me!