ಬಿಜೆಪಿಗೇಕೆ ಮತ ನೀಡಬೇಕು ಎನ್ನುವ ಪ್ರಶ್ನೆಗೆ ಶೆಟ್ಟರ್ ನೀಡಿದ ಉತ್ತರವೇನು..?

First Published May 3, 2018, 11:29 AM IST
Highlights

ಕರ್ನಾಟಕದ ಬಿಜೆಪಿಯ ತಲೆಯಾಳುಗಳಲ್ಲೇ ಅತ್ಯಂತ ಸೌಮ್ಯ ಮತ್ತು ಸರಳ ರಾಜಕಾರಣಿ ಹುಬ್ಬಳ್ಳಿಯ ಜಗದೀಶ ಶೆಟ್ಟರ್. ಬಲಾಢ್ಯ ಲಿಂಗಾಯತ ಸಮುದಾಯದ ಮುಖಂಡರಾಗಿದ್ದರೂ ಎಲ್ಲಿಯೂ ತಾವು ಹೀಗೆ ಎಂದು ಹೇಳಿಕೊಂಡವರಲ್ಲ. ಅರ್ಹತೆಗೆ ತಕ್ಕಂತೆ  ಅಧಿಕಾರ ಸಿಗದಿದ್ದಾಗ್ಯೂ ಪಕ್ಷದ ವಿರುದ್ಧ ಕೊಸರಿ ಮಾತನಾಡಿದವರಲ್ಲ. ಈ ಚುನಾವಣೆಯ ಬಗ್ಗೆ ಅವರ ಮಾತು ಏನು..?

ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ : 

ಕರ್ನಾಟಕದ ಬಿಜೆಪಿಯ ತಲೆಯಾಳುಗಳಲ್ಲೇ ಅತ್ಯಂತ ಸೌಮ್ಯ ಮತ್ತು ಸರಳ ರಾಜಕಾರಣಿ ಹುಬ್ಬಳ್ಳಿಯ ಜಗದೀಶ ಶೆಟ್ಟರ್. ಬಲಾಢ್ಯ ಲಿಂಗಾಯತ ಸಮುದಾಯದ ಮುಖಂಡರಾಗಿದ್ದರೂ ಎಲ್ಲಿಯೂ ತಾವು ಹೀಗೆ ಎಂದು ಹೇಳಿಕೊಂಡವರಲ್ಲ. ಅರ್ಹತೆಗೆ ತಕ್ಕಂತೆ  ಅಧಿಕಾರ ಸಿಗದಿದ್ದಾಗ್ಯೂ ಪಕ್ಷದ ವಿರುದ್ಧ ಕೊಸರಿ ಮಾತನಾಡಿದವರಲ್ಲ. ನನಗೆ ಇಂಥದ್ದೇ ಬೇಕು ಎಂದು ಹಟ ಹಿಡಿಯುವ ಸ್ವಭಾವವೂ ಇವರದಲ್ಲ. ಇಂತಹ ಜಗದೀಶ ಶೆಟ್ಟರ್ ಅವರನ್ನು ರಾಜಕೀಯದ ಎಲ್ಲ ಅವಕಾಶ ಮತ್ತು ಅಧಿಕಾರಗಳು ಅರಸಿ ಬಂದದ್ದು ಇತಿಹಾಸ.
ಏನೆಲ್ಲಾ ಅಧಿಕಾರ ಅನುಭವಿಸಿದರೂ ಇಂದಿನ ಚುನಾವಣಾ ಕಣದಲ್ಲಿ ತಾವು ಒಬ್ಬ ಅಭ್ಯರ್ಥಿ ಮಾತ್ರ ಎನ್ನುವ ಮನಸ್ಥಿತಿಯಿಂದ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಮತಕ್ಷೇತ್ರದಲ್ಲಿ ಬುಧವಾರ ಉರಿಬಿಸಿಲು ಲೆಕ್ಕಿಸದೆ ಮತಯಾಚನೆಯಲ್ಲಿ ತೊಡಗಿದ್ದರು. ಅರೆಕ್ಷಣ  ಬಿಡುವು ಮಾಡಿಕೊಂಡು ‘ಕನ್ನಡಪ್ರಭ’ದೊಂದಿಗೆ ರಾಜಕೀಯದ ಪ್ರಸಕ್ತ ವಿದ್ಯಮಾನ, ಪಕ್ಷದ ಭವಿಷ್ಯ, ಈ ಚುನಾವಣೆಯಲ್ಲಿ ಜನತೆಗೆ ನೀಡುವ ಭರವಸೆ ಇತ್ಯಾದಿಗಳ ಕುರಿತು ಕೆಲ ಮಾತು ಹಂಚಿಕೊಂಡರು. 

? ಹೇಗಿದೆ ಚುನಾವಣೆ? ಜನ ಏನಂತಾರೆ?

ಕಳೆದ ಬಾರಿ ಚುನಾವಣೆ ನಡೆದಾಗ ನಾನು ಮುಖ್ಯಮಂತ್ರಿಯಾಗಿದ್ದೆ. ಹಾಗಾಗಿ ಕೇವಲ ಎರಡು ದಿನ ಮಾತ್ರ ಪ್ರಚಾರದಲ್ಲಿ ತೊಡಗಿದ್ದೆ. ಆದರೂ ಕ್ಷೇತ್ರದ ಜನತೆ ನನಗೆ ಭಾರಿ ಅಂತರದ ಗೆಲವು ನೀಡಿದರು. ಈಗ ಪ್ರತಿಪಕ್ಷದ ನಾಯಕ ಮತ್ತು ತುಸು ಬಿಡುವಾಗಿದ್ದರಿಂದ ಕ್ಷೇತ್ರವನ್ನು ಹೆಚ್ಚು ಸುತ್ತುತ್ತಿದ್ದೇನೆ. ಹಾಗಾಗಿ ಗೆಲವಿನ ಅಂತರ ದೊಡ್ಡ ಮಟ್ಟದಲ್ಲಿ ಇರಲಿದೆ ಎನ್ನುವ ನಿರೀಕ್ಷೆ ಇದೆ. 

? ಐದು ಬಾರಿ ಶಾಸಕರಾಗಿ, ಮಂತ್ರಿಯಾಗಿ ಮತ್ತು ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದರೂ ಕ್ಷೇತ್ರಕ್ಕೆ ಮತ್ತು ಹುಬ್ಬಳ್ಳಿ- ಧಾರವಾಡ ಮಹಾನಗರಕ್ಕೆ ಜಗದೀಶ ಶೆಟ್ಟರ್ ಹೇಳಿಕೊಳ್ಳುವಂಥ ಕೊಡುಗೆ ನೀಡಿಲ್ಲ, ಶೆಟ್ಟರ್ ಅವರಿಗೆ ವಿಶನ್ ಇಲ್ಲ ಎನ್ನುವ ಮಾತು ಕೇಳಿಬರುತ್ತಿವೆ?

ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ಪ್ರತಿಪಕ್ಷದವರು ಮಾಡುವ ಅಪಪ್ರಚಾರವಷ್ಟೆ. ಹುಬ್ಳಳ್ಳಿ- ಧಾರವಾಡಕ್ಕೆ ಒಂದು ಸರಿಯಾದ ಯುಜಿಡಿ ವ್ಯವಸ್ಥೆ ಇರಲಿಲ್ಲ. ಅದಕ್ಕಾಗಿ 340 ಕೋಟಿ ಯೋಜನೆ ರೂಪಿಸಲಾಗಿದೆ. ಅದರಲ್ಲಿ ಈಗಾಗಲೇ 160 ಕೋಟಿ ಕಾಮಗಾರಿ ಮುಗಿದಿದೆ. ಅದರಂತೆ  ನಿರಂತರ ನೀರು ಯೋಜನೆ, ಬಿಆರ್‌ಟಿಎಸ್, ರಸ್ತೆ ಅಭಿವೃದ್ಧಿ, ಸ್ಮಾರ್ಟ್‌ಸಿಟಿ ಇತ್ಯಾದಿ ಸೇರಿದಂತೆ ಸಾವಿರಾರು ಕೋಟಿ ರು. ವೆಚ್ಚದ ಯೋಜನೆಗಳನ್ನು ತಂದಿದ್ದೇನೆ. ಅವೆಲ್ಲ ಪ್ರಗತಿಯಲ್ಲಿವೆ. ಮುಂದಿನ ಆರೆಂಟು ತಿಂಗಳಲ್ಲಿ ಅವೆಲ್ಲ ಪೂರ್ಣಗೊಂಡು ಮಹಾನಗರದ ಚಹರೆಯೇ ಬದಲಾಗಲಿದೆ. ನನಗೊಂದು ವಿಶನ್ ಇಲ್ಲದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ. ಜನ ಆಶೀರ್ವದಿಸಿ ಗೆಲ್ಲಿಸಿದರೆ ‘ಕ್ಲೀನ್ ಸಿಟಿ -ಗ್ರೀನ್ ಸಿಟಿ’ ಮಾಡುವುದು ನನ್ನ ಕನಸು.

? ಮಹದಾಯಿ ವಿಚಾರದಲ್ಲಿ ರೈತರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರಲ್ಲ?

ನಾವು ಮಹದಾಯಿಯನ್ನು ನಿರ್ಲಕ್ಷಿಸಿಲ್ಲ. ಕಳಸಾ-ಬಂಡೂರಿ ಯೋಜನೆ ಜಾರಿಗೆ ಭೂಮಿ ಪೂಜೆ ಮಾಡಿ, ನೂರು ಕೋಟಿ ರು. ನೀಡಿದ್ದು ಬಿಜೆಪಿ. ಈಗಲೂ ನಮ್ಮ ಪ್ರಯತ್ನ ಸತತವಾಗಿ ಮುಂದುವರಿದಿದೆ. ಪ್ರಕರಣ ನ್ಯಾಯಾಧಿಕರಣದಲ್ಲಿ ಇರುವುದರಿಂದ ತುಸು ಹಿನ್ನಡೆಯಾಗಿದೆ. ಆದಾಗ್ಯೂ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಗೋವಾ ಮುಖ್ಯಮಂತ್ರಿ ಮನೋಹರ್ ಪರ‌್ರಿಕರ್ ಅವರ ಮನವೊಲಿಸಿ ಮಾತುಕತೆಗೆ ಒಪ್ಪಿಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರಾಸಕ್ತಿಯಿಂದಾಗಿ ಗೊಂದಲ ಉಂಟಾಯಿತು.  ಈ ಸತ್ಯ ಮಹದಾಯಿ ವ್ಯಾಪ್ತಿಯ ರೈತರಿಗೆ ಗೊತ್ತಿದೆ. ಕಾಂಗ್ರೆಸ್ ಎಷ್ಟೇ ಅಪಪ್ರಚಾರ ಮಾಡಿದರೂ ಜನತೆ ನಂಬುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ಮಹದಾಯಿ ಹೋರಾಟಗಾರರ ಬೆಂಬಲ ಬಿಜೆಪಿಗಿದೆ. 

? ಲಿಂಗಾಯತಕ್ಕೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ಕುರಿತು ಬಿಜೆಪಿ ನಿರಾಸಕ್ತಿ ತೋರಿದ್ದು ಈ ಚುನಾವಣೆಯಲ್ಲಿ ಬಾರಿಯಾಗುವುದಿಲ್ಲವೇ?

ಇದು ವಿಷಯವೇ ಅಲ್ಲ. ಲಿಂಗಾಯರಿಗೆ ಗೊತ್ತಾಗಿದೆ ಸಿದ್ದರಾಮಯ್ಯ ಸಮಾಜ ಒಡೆದರು ಎನ್ನುವುದು. ಅವರೆಲ್ಲ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆಯೇ ಹೊರತು ಬಿಜೆಪಿ ವಿರುದ್ಧ ಅಲ್ಲ. ತರಾತುರಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿರುವ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ತಕ್ಕ ಫಲ ಉಣ್ಣುತ್ತಾರೆ. 

? ನಿಮಗೆ ಅಧಿಕಾರ ಕೊಟ್ಟಾಗ ಕಿತ್ತಾಡಿಕೊಂಡಿರಿ, ಬಡಿದಾಡಿದಿರಿ. ಮೂರು ಜನ ಮುಖ್ಯಮಂತ್ರಿಗಳು ಆಡಳಿತ ನಡೆಸಿದಿರಿ. ಇಂಥ ಬಿಜೆಪಿಗೆ ಜನತೆ ಮತ್ತೆ ಯಾಕೆ ಮತ ನೀಡಬೇಕು? 

ಹೌದು! ಜನತೆ ನಮಗೆ ಅಧಿಕಾರ ನೀಡಿದಾಗ ನಾವು ಪರಸ್ಪರ ಕಿತ್ತಾಡಿದೆವು. ಆ ತಪ್ಪಿನ ಅರಿವು ನಮಗೆ ಇದೆ. ಮತ್ತು ಇದೇ ಕಾರಣಕ್ಕೆ ರಾಜ್ಯದ ಜನತೆ ಕಳೆದ ಬಾರಿ ನಮ್ಮನ್ನು ತಿರಸ್ಕರಿಸಿದರು ಎನ್ನುವ ಅರಿವೂ ಇದೆ. ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟಿದ್ದೇವೆ. ದಯವಿಟ್ಟು  ನಮ್ಮನ್ನು ಕ್ಷಮಿಸಿ, ಈಗ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಯಾವುದೇ ಗೊಂದಲವಿಲ್ಲದೆ ಉತ್ತಮ  ಆಡಳಿತ ನೀಡುತ್ತೇವೆ ಎಂದು ಈ ಪ್ರಚಾರದ ವೇಳೆ ಜನತೆಯಲ್ಲಿ ಮನವಿ ಮಾಡುತ್ತಿದ್ದೇವೆ. ಆದರೆ ನಾವು ಕಿತ್ತಾಟ, ಗೊಂದಲದ ನಡುವೆ ಉತ್ತಮ ಆಡಳಿತವನ್ನೂ ನೀಡಿದ್ದೇವೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಉತ್ತಮ ಆಡಳಿತ ಇದೆ. ಅದೇ ಮಾದರಿಯ ಆಡಳಿತವನ್ನು ಕರ್ನಾಟಕದಲ್ಲೂ ನೀಡುವ ಆಶಯ ನಮ್ಮದು. 

? ಈ ಚುನಾವಣೆಯಲ್ಲಿ ಮೋದಿ ಬರುತ್ತಾರೆ, ಶಾ ಬರುತ್ತಾರೆ ಎಂದು ಹೇಳುತ್ತಿದ್ದಾರೆಯೇ ವಿನಃ ನಾವಿದ್ದೀವಿ, ನಮ್ಮ ನಾಯಕತ್ವವಿದೆ ಎಂದು ರಾಜ್ಯ ಘಟಕದ ಯಾರೂ ಹೇಳುತ್ತಿಲ್ಲವಲ್ಲ?   ಬಿಜೆಪಿಯಲ್ಲಿ ನಿಮಗೆ ಅಸ್ತಿತ್ವವೇ ಇಲ್ಲವೇ?

ಹಿಂದೆ ನಮಗೆ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅವರಂಥ ನಾಯಕತ್ವ ಇತ್ತು. ಈಗ ಅಮಿತ್ ಶಾ, ನರೇಂದ್ರ ಮೋದಿ ಅವರ ಯಶಸ್ವಿ ಜೋಡಿಯ ನಾಯಕತ್ವವಿದೆ. ಅವರ ಬಗ್ಗೆ ಹೇಳಬೇಕಾದದ್ದು ನಮ್ಮ ಕರ್ತವ್ಯ. ಹಾಗೆಂದ ಮಾತ್ರಕ್ಕೆ ನಾವೇನೂ ಕೆಲಸ ಮಾಡಿಲ್ಲ ಎಂದರ್ಥವಲ್ಲ. ಹಿಂದೆ ನಾವು ಹಲವು ಹುದ್ದೆಗಳನ್ನು ಅಲಂಕರಿಸಿ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. 
ಪಕ್ಷವನ್ನು ಸಂಘಟಿಸುವ ಜತೆಗೆ ರಾಜ್ಯದ ಜನತೆಯ ಸೇವೆ ಮಾಡಿದ್ದೇವೆ. ಈಗ ಕೇಂದ್ರದಲ್ಲಿ ನರೇಂದ್ರ ಮೋದಿಯವರ ದೊಡ್ಡ ನಾಯಕತ್ವವಿದೆ. ಅವರು ಒಂದು ರೀತಿ ಯುವ  ಜನತೆಯ ಐಕಾನ್ ಆಗಿದ್ದಾರೆ. ಅವರ ಆಗಮನದಿಂದ ಜನರ ಉಪಸ್ಥಿತಿ ಮತಗಳಾಗಿ ಪರಿವರ್ತನೆಯಾಗುತ್ತಿದೆ. ಅವರ ಆಡಳಿತವನ್ನು ಜನ ಮೆಚ್ಚಿದ್ದಾರೆ. ಅಂಥದ್ದೇ ಆಡಳಿತ ಕರ್ನಾಟಕದಲ್ಲೂ ಬರಬೇಕು ಎನ್ನುವುದು ಜನತೆಯ ನಿರೀಕ್ಷೆ. ಹಾಗಾಗಿ ನಾವು ಈ ಚುನಾವಣೆಯಲ್ಲಿ ಶಾ ಮತ್ತು ಮೋದಿಯವರ ಹೆಸರನ್ನು ಪ್ರಸ್ತಾಪಿಸುತ್ತಿದ್ದೇವೆ. 

? ಹಿಂದೆ ಕೆಜೆಪಿಯಲ್ಲಿದ್ದ ಬಹುತೇಕರಿಗೆ ಟಿಕೆಟ್ ದಕ್ಕಿದೆ. ಟಿಕೆಟ್ ಹಂಚಿಕೆಯಲ್ಲಿ ಜಗದೀಶ ಶೆಟ್ಟರ್ ಮಾತು ನಡೆಯಲೇ ಇಲ್ಲ ಎನ್ನುವ ಮಾತು ಸ್ಥಳೀಯ ಬಿಜೆಪಿಯಲ್ಲಿ ಕೇಳಿಬರುತ್ತಿದೆಯಲ್ಲ?

ಹಾಗೇನಿಲ್ಲ, ನಮ್ಮದು ರಾಷ್ಟ್ರೀಯ ಪಕ್ಷ. ಟಿಕೆಟ್ ಹಂಚಿಕೆ ವಿಚಾರವನ್ನು ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೋಡಿಕೊಂಡಿದ್ದಾರೆ. ಕೋರ್ ಕಮೀಟಿಯಲ್ಲಿ ನಮ್ಮ ಅಭಿಪ್ರಾಯಗಳನ್ನು ಮಂಡಿಸುವುದಷ್ಟೇ ನಮ್ಮ ಕರ್ತವ್ಯ. ನಮ್ಮ ಅಭಿಪ್ರಾಯ, ಸಮೀಕ್ಷೆ, ಜಿಲ್ಲಾ  ಘಟಕದ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಗೆಲ್ಲುವ ಅಭ್ಯರ್ಥಿಗೆ ಅವರು ಟಿಕೆಟ್ ನೀಡಿದ್ದಾರೆ. ಹಾಗಾಗಿ ಇಲ್ಲಿ ವೈಯಕ್ತಿಕವಾಗಿ ಯಾವ ಮುಖಂಡರ ಪ್ರಭಾವದ ಪ್ರಶ್ನೆ ಎದುರಾಗುವುದಿಲ್ಲ. ಪಕ್ಷ ಟಿಕೆಟ್ ನೀಡಿದ ವ್ಯಕ್ತಿಯನ್ನು ಗೆಲ್ಲಿಸುವುದು ಪ್ರತಿಯೊಬ್ಬ ಬಿಜೆಪಿಗನ ಕರ್ತವ್ಯ. 

? ಟಿಕೆಟ್ ಹಂಚಿಕೆಗೆ ಗೆಲವು ಒಂದೇ ಮಾನದಂಡವಾದರೆ ಬಿಜೆಪಿ ಸಾಮಾಜಿಕ ನ್ಯಾಯದಿಂದ ವಿಮುಖವಾಗಿದೆಯೇ? 

ಗೆಲವು ಮುಖ್ಯ ನಿಜ. ಅದರ ಜತೆಗೆ ಸಾಮಾಜಿಕ ನ್ಯಾಯಕ್ಕೂ ಬದ್ಧವಾಗಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ದಲಿತರು, ಹಿಂದುಳಿದವರು, ಮಹಿಳೆಯರು ಸೇರಿದಂತೆ ಎಲ್ಲರಿಗೂ ಅವಕಾಶ ಸಿಗುವಂತೆ ನೋಡಿಕೊಂಡಿದ್ದರಿಂದ ಯಾವುದೇ ಸಮಾಜದಿಂದ ಅಪಸ್ವರ ಕೇಳಿಬಂದಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನು ಬಿಜೆಪಿ ರಾಷ್ಟ್ರೀಯ ಮುಖಂಡರು ಮಾಡಿದ್ದಾರೆ. ಇದು ಬಿಜೆಪಿ ಗೆಲವಿಗೆ ಸಹಕಾರಿಯಾಗಲಿದೆ.

? ರಾಜ್ಯದ ಸುಮಾರು ಕ್ಷೇತ್ರಗಳಲ್ಲಿ ಇನ್ನೂ ಕೆಜೆಪಿ-ಬಿಜೆಪಿ ಗೊಂದಲವಿದೆ. ಇದು ಫಲಿತಾಂಶಕ್ಕೆ ಅಡ್ಡಿಯಾಗುವುದಿಲ್ಲವೇ?

ಗೊಂದಲ ಈ ಮೊದಲು ಇತ್ತು. ಈಗ ಅದೆಲ್ಲವನ್ನೂ ಬಗೆಹರಿಸಿದ್ದೇವೆ. ಎಲ್ಲಿಯೂ ಗೊಂದಲವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಪಕ್ಷ ಟಿಕೆಟ್ ನೀಡಿದ ಅಭ್ಯರ್ಥಿ ಗೆಲ್ಲಿಸಲು ಅವರೆಲ್ಲ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರಿಂದ ಭಾರಿ ಹಿನ್ನಡೆಯಾಗಲಿದೆ ಎನ್ನುವುದನ್ನು ಮನಗಂಡ ಕಾಂಗ್ರೆಸ್ ಕೆಜೆಪಿ- ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದೆ.

? ಬಾದಾಮಿ ಕ್ಷೇತ್ರಕ್ಕೆ ಶ್ರೀರಾಮುಲು ಹೊರತುಪಡಿಸಿ ಬೇರೆ ಅಭ್ಯರ್ಥಿ ಸಿಗಲಿಲ್ಲವೇ ಅಥವಾ ಬಿಜೆಪಿ ಮತ್ತೆ ಗಣಿ ಮಾಫಿಯಾಕ್ಕೆ ಶರಣಾಯಿತೇ?

ಶ್ರೀರಾಮುಲು ಓರ್ವ ಹಿಂದುಳಿದ ನಾಯಕನಾಗಿ ಬೆಳೆದಿದ್ದಾರೆಯೇ ಹೊರತು ಅವರು ಗಣಿಧಣಿಯಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಬಾದಾಮಿಯಲ್ಲಿ ಸ್ವತಃ ಮುಖ್ಯಮಂತ್ರಿ ಸ್ಪರ್ಧಿಸುತ್ತಿದ್ದುದರಿಂದ ಸಹಜವಾಗಿಯೇ ಅದು ರಾಷ್ಟ್ರದ ಗಮನ ಸೆಳೆಯಿತು. ಸಿದ್ದರಾಮಯ್ಯ ಹಿಂದುಳಿದ ನಾಯಕ ಎಂದು ಹೇಳಿಕೊಂಡು ಬಾದಾಮಿ ಕ್ಷೇತ್ರಕ್ಕೆ ಹೋಗಿದ್ದರಿಂದ ಹಿಂದುಳಿದ ನಾಯಕ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವುದು ಅನಿವಾರ್ಯವಾಯಿತು.

? ಬಾದಾಮಿಯಲ್ಲಿ ಲಿಂಗಾಯತರ ಮತಗಳೂ ಅಧಿಕವಾಗಿವೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಅಲ್ಲಿ  ಕಣಕ್ಕಿಳಿಸಬಹುದಿತ್ತಲ್ಲ?

ಬಾದಾಮಿ ಕ್ಷೇತ್ರಕ್ಕೆ ಸ್ಪರ್ಧಿಸಲು ಜಗದೀಶ್ ಶೆಟ್ಟರ್ ಅವರಂತೆ ಅನೇಕ ಅರ್ಹ ನಾಯಕರು ಬಿಜೆಪಿಯಲ್ಲಿದ್ದಾರೆ. ಆದರೆ ಇದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಚುನಾವಣಾ ರಣತಂತ್ರ. ಇದು ನಮ್ಮೆಲ್ಲರಿಗೂ ಸರಿಯೆನಿಸಿತು. ಇಲ್ಲಿ ಗೆಲವು ಮುಖ್ಯವಾಗಿದ್ದರಿಂದ ಒಬ್ಬ ಹಿಂದುಳಿದ ನಾಯಕನನ್ನು ಮುಖ್ಯಮಂತ್ರಿ ವಿರುದ್ಧ ಕಣಕ್ಕಿಳಿಸಿದ್ದೇವೆ. ಗೆಲವು ನಮ್ಮದೇ. 

? ಈ ಬಾರಿಯೂ ಬಿಜೆಪಿ ಕಳಂಕಿತರಿಗೆ ಟಿಕೆಟ್ ನೀಡಿದೆ. ಜನತೆ ಕೇಳಿದರೆ ಏನು ಸಮಜಾಯಿಷಿ ನೀಡುತ್ತೀರಿ?

ಕಟ್ಟಾ ಸುಬ್ರಹ್ಮಣ್ಯ, ಕೃಷ್ಣ ಪಾಲೇಮಾರ್, ಹರತಾಳು ಹಾಲಪ್ಪ ಸೇರಿದಂತೆ ಹಲವರು ಕಳಂಕಿತರನ್ನು ಬಿಜೆಪಿ ಕಣಕ್ಕಿಳಿಸಿದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಆದರೆ ಇವರೆಲ್ಲರ ಮೇಲಿರುವ ಪ್ರಕರಣಗಳ ಬಗ್ಗೆ ಯಾವುದೇ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿಲ್ಲ. ಹರತಾಳು ಹಾಲಪ್ಪನವರ ಪ್ರಕರಣ ಬಿದ್ದು ಹೋಗಿದೆ. ಹೀಗಿರುವಾಗ ಕಳಂಕಿತರು ಎನ್ನುವುದು ಸಮಂಜಸವಲ್ಲ. ಇವರೆಲ್ಲ ಪಕ್ಷಕ್ಕಾಗಿಸಾಕಷ್ಟು ದುಡಿದಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ನಾಯಕರು ಟಿಕೆಟ್ ನೀಡಿ ಕಣಕ್ಕಿಳಿಸಿದ್ದಾರೆ. 

click me!