ಇ ಮೇಲ್ ಮೂಲಕ ಮತದಾನಕ್ಕೆ ಅರ್ಜಿ

First Published May 3, 2018, 11:07 AM IST
Highlights

ಮುಂಬರುವ ಚುನಾವಣೆಯಲ್ಲಿ ತಮ್ಮ ಮತಕ್ಷೇತ್ರದಿಂದ ದೂರದ ಊರು ಅಥವಾ ವಿದೇಶಗಳಲ್ಲಿ ಇರುವ ಮತದಾರರಿಗೆ ಇ-ಮೇಲ್ ಮೂಲಕ ಮತ ಚಲಾಯಿಸಲು ಅನುಮತಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕೆಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸ ಲ್ಲಿಸಲಾಗಿದೆ. 

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ತಮ್ಮ ಮತಕ್ಷೇತ್ರದಿಂದ ದೂರದ ಊರು ಅಥವಾ ವಿದೇಶಗಳಲ್ಲಿ ಇರುವ ಮತದಾರರಿಗೆ ಇ-ಮೇಲ್ ಮೂಲಕ ಮತ ಚಲಾಯಿಸಲು ಅನುಮತಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕೆಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸ ಲ್ಲಿಸಲಾಗಿದೆ. 
ನಗರದ ಜಯನಗರ ನಿವಾಸಿ ಮಿಟ್ಟಿ ನರಸಿಂಹ ಮೂರ್ತಿ ಎಂಬ ವಕೀಲರು ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಕಾನೂನು ಸಚಿವಾಲಯದ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಬುಧವಾರ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ರಜಾಕಾಲದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. 
ಕೇಂದ್ರ ಚುನಾವಣಾ ಆಯೋಗದ ಪರ ವಕೀಲರಿಗೆ ಅರ್ಜಿಯ ಪ್ರತಿ ನೀಡುವಂತೆ ಅರ್ಜಿದಾರರ ವಕೀಲರಿಗೆ ಸೂಚಿಸಿದ ವಿಭಾಗೀಯ ಪೀಠ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿತು. ಪ್ರಸ್ತುತ ಕೆಲವೇ ವರ್ಗದ ಅದರಲ್ಲೂ ಸರ್ಕಾರಿ ಉದ್ಯೋಗದಲ್ಲಿರುವವರು ಮಾತ್ರ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ಇದೆ.

ಆದರೆ, ಉದ್ಯೋಗ, ವಿದ್ಯಾಭ್ಯಾಸ ಮತ್ತು ಚಿಕಿತ್ಸೆಗಾಗಿ ಬಹಳಷ್ಟು ಮತದಾರರು ತಮ್ಮ ಮತ ಕ್ಷೇತ್ರಗಳಿಂದ ಅನಿವಾರ್ಯವಾಗಿ ಹೊರಗೆ ಇರುವ ಸಂದರ್ಭಗಳಿರುತ್ತವೆ. ಚುನಾವಣೆ ವೇಳೆ ಅವರು ತಮ್ಮ ಮತ ಚಲಾಯಿಸಲು ಬಯಸಿದರೂ ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. 
ಈಗಾಗಲೇ ಕೇಂದ್ರ ಸರ್ಕಾರ ಡಿಜಿಟಲ್ ಆಡಳಿತ ಮತ್ತು ಡಿಜಿಟಲ್ ತಂತ್ರಜ್ಞಾನಕ್ಕೆ ಆದ್ಯತೆ ನೀಡುತ್ತಿದೆ. ಹೀಗಾಗಿ ಇ-ಮೇಲ್ ಮೂಲಕ ಮತಕ್ಷೇತ್ರಗಳಿಂದ ಹೊರಗಿರುವವರಿಗೆ ಮತ  ಚಲಾವಣೆಗೆ ಅವಕಾಶ ಕಲ್ಪಿಸಿದರೆ ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶವಾಗುತ್ತದೆ. ಮತ  ಚಲಾವಣೆ ಪ್ರಮಾಣವೂ ಏರಿಕೆಯಾಗುತ್ತದೆ. ಆಯೋಗಕ್ಕೆ ಆರ್ಥಿಕ ಉಳಿತಾಯವಾಗುತ್ತದೆ. ಆದ್ದರಿಂದ  ಮುಂಬರುವ ಚುನಾವಣೆಯಲ್ಲಿ ತಮ್ಮ ಮತಗಟ್ಟೆಗಳಿಂದ ಹೊರಗೆ ಇರುವ ಮತದಾರರು ಇ-ಮೇಲ್ ಮುಖಾಂತರ ಮತ ಚಲಾಯಿಸಲು ಅವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. 

click me!