ಮಗನಿಗೆ ಮಂತ್ರಿ ಸ್ಥಾನ ಕೇಳೋದಿಲ್ಲ: ಸಿದ್ದರಾಮಯ್ಯ

First Published May 21, 2018, 12:23 PM IST
Highlights

ವರುಣ ಕ್ಷೇತ್ರದ ಶಾಸಕರಾದ ಡಾ| ಯತೀಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸುವಂತೆ ಆ ಕ್ಷೇತ್ರದ ಕಾರ್ಯಕರ್ತರ ಪಡೆಯೊಂದು ಭಾನುವಾರ ನಗರಕ್ಕೆ ಆಗಮಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿತು. ತಮ್ಮ ನಿವಾಸಕ್ಕೆ ಬಸ್ಸುಗಳಲ್ಲಿ ಆಗಮಿಸಿದ ಕಾರ್ಯಕರ್ತರು ಮುಂದಿಟ್ಟ ಈ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸಿದ್ದರಾಮಯ್ಯ, ನನ್ನ ಮಗನಿಗೆ ಸಚಿವ ಸ್ಥಾನ ಕೊಡಿ ಎಂದು ನಾನು ಹೈಕಮಾಂಡನ್ನು ಕೇಳಲು ಆಗುವುದಿಲ್ಲ ಎಂದು ಹೇಳಿದರು. 

ಬೆಂಗಳೂರು[ಮೇ.21]: ವರುಣ ಕ್ಷೇತ್ರದ ಶಾಸಕರಾದ ಡಾ| ಯತೀಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸುವಂತೆ ಆ ಕ್ಷೇತ್ರದ ಕಾರ್ಯಕರ್ತರ ಪಡೆಯೊಂದು ಭಾನುವಾರ ನಗರಕ್ಕೆ ಆಗಮಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿತು. ತಮ್ಮ ನಿವಾಸಕ್ಕೆ ಬಸ್ಸುಗಳಲ್ಲಿ ಆಗಮಿಸಿದ ಕಾರ್ಯಕರ್ತರು ಮುಂದಿಟ್ಟ ಈ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸಿದ್ದರಾಮಯ್ಯ, ನನ್ನ ಮಗನಿಗೆ ಸಚಿವ ಸ್ಥಾನ ಕೊಡಿ ಎಂದು ನಾನು ಹೈಕಮಾಂಡನ್ನು ಕೇಳಲು ಆಗುವುದಿಲ್ಲ ಎಂದು ಹೇಳಿದರು. 
ಭಾನುವಾರ ನಾಲ್ಕು ಬಸ್ಸುಗಳಲ್ಲಿ ನಗರಕ್ಕೆ ಆಗಮಿಸಿದ್ದ ವರುಣಾ ಕ್ಷೇತ್ರದ ಕಾರ್ಯಕರ್ತರು ಡಾ| ಯತೀಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸುವಂತೆ ಸಿದ್ದರಾಮಯ್ಯ ಬಳಿ ಪಟ್ಟು ಹಿಡಿದರು. ಯತೀಂದ್ರ ಅವರು ಕುಮಾರಸ್ವಾಮಿ ಸಂಪುಟ ಸೇರ್ಪಡೆಯಾಗಬೇಕು ಮತ್ತು ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ದೊರೆಯಬೇಕು. ಇದಾಗದಿದ್ದರೆ, ಈ ಸ್ಥಾನ ಜೆಡಿಎಸ್ ಪಾಲಾಗುತ್ತದೆ. ಆಗ ಜೆಡಿಎಸ್‌ನಿಂದ ವಿಶ್ವನಾಥ್ ಅಥವಾ ಜಿ.ಟಿ.ದೇವೇಗೌಡರಿಗೆ ಸಚಿವ ಸ್ಥಾನ ಹಾಗೂ ಮೈಸೂರು ಉಸ್ತುವಾರಿ ದೊರೆಯಲಿದೆ. ಹೀಗಾದರೆ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗರ ಸ್ಥಿತಿ ದಯನೀಯವಾಗುತ್ತದೆ. ಕಾರ್ಯಕರ್ತರ ಹಿತದೃಷ್ಟಿಯಿಂದ ಯತೀಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮುಂದೆ ಪಟ್ಟು ಹಿಡಿಯಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು ಎನ್ನಲಾಗಿದೆ. 
ಇದಕ್ಕೆ ಸಿದ್ದರಾಮಯ್ಯ ಒಪ್ಪದಿದ್ದಾಗ, ಯತೀಂದ್ರ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಕಾರ್ಯಕರ್ತರು ಎಚ್ಚರಿಸಿದರು. ಇದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ, ಅದನ್ನೆಲ್ಲ ಆಮೇಲೆ ನೋಡೋಣ ನಡೆಯಿರಿ ಎಂದು ಹೇಳಿ ಕಾರ್ಯಕರ್ತರನ್ನು ಸಾಗಹಾಕಿದರು.
ಮಗನಿಗೆ ಮಂತ್ರಿ ಸ್ಥಾನ ಕೇಳೋದಿಲ್ಲ: ಸಿದ್ದು
ಸಚಿವ ಸ್ಥಾನದ ಆಕಾಂಕ್ಷಿಗಳ ದಂಡೇ ಆಗಮಿಸಿ ತಮ್ಮ ಪರ ಲಾಬಿ ನಡೆಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತರುತ್ತಿದ್ದರೂ ಅವರು ಕೇವಲ ಇಬ್ಬರ ಪರವಾಗಿ ಮಾತ್ರ ಶಿಫಾರಸು ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ತಮ್ಮ ಆಪ್ತರಾದ ಕೆ.ಜೆ.ಜಾರ್ಜ್ ಹಾಗೂ ಬಾದಾಮಿಯಲ್ಲಿ ತಮ್ಮ ಗೆಲುವಿಗೆ ಶ್ರಮಿಸಿದ ಎಸ್.ಆರ್.ಪಾಟೀಲರ ಹೆಸರನ್ನು ಮಾತ್ರ ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡಲಿದ್ದಾರೆ. ಇದರ ಹೊರತಾಗಿ ಮತ್ಯಾರ ಹೆಸರು ಹೇಳುವ ಸಾಧ್ಯತೆ ಕಡಿಮೆ. ಅಷ್ಟೇ ಏಕೆ, ತಮ್ಮ ಪುತ್ರ ಯತೀಂದ್ರ ಪರವಾಗಿಯೂ ಲಾಬಿ ನಡೆಸುವುದಿಲ್ಲ ಎಂದು ಮೂಲಗಳು ಹೇಳುತ್ತವೆ.

click me!